ತುಮಕೂರು: ಸಿದ್ಧಗಂಗಾ ಮಠದ ವಿದ್ಯಾರ್ಥಿಯ ಮೇಲೆ ಮೂವರು ಮಾರಣಾಂತಿಕ ಹಲ್ಲೆ ನಡೆಸಿದ್ದು, ಮಕ್ಕಳಲ್ಲಿ ಭಯದ ವಾತಾವರಣ ಮೂಡಿದೆ.
ಸಿದ್ದಗಂಗಾ ಕಾಲೇಜಿನ ದ್ವಿತೀಯ ಪಿಯು ಓದುತ್ತಿರುವ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಇಂಗಳಗಿ ಗ್ರಾಮದ ಭೀಮಶಂಕರ(18) ಎಂಬಾತನ ಮೇಲೆ ಹಲ್ಲೆ ಮಾಡಲಾಗಿದೆ.
ಈತ ಶನಿವಾರ ಕಾಲೇಜು ಮುಗಿಸಿಕೊಂಡು ಇಸ್ರೋ ಬಸ್ ನಿಲ್ದಾಣದಲ್ಲಿ ಬಸ್ ಇಳಿದು ಮಠಕ್ಕೆ ವಾಪಸಾಗುವಾಗ ಬೈಕ್ ನಲ್ಲಿ ಬಂದ ಮೂವರು ಏಕಾಏಕಿ ಅಡ್ಡಗಟ್ಟಿ ಚಾಕುವಿನಿಂದ ಹಲ್ಲೆ ನಡೆಸಿ, ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.
3 ವರ್ಷದಿಂದ ಮಠದಲ್ಲಿ ಓದುತ್ತಿದ್ದು, ಹಲ್ಲೆ ನಡೆಸಿದವರು ಅಪರಿಚಿತರು ಎಂದು ಹೇಳಿದ್ದಾನೆ.
ವಿದ್ಯಾರ್ಥಿಯ ಎಡಗೈಗೆ ಬಲವಾದ ಪೆಟ್ಟು ಬಿದ್ದಿದೆ, ಜಿಲ್ಲಾಸ್ಪತ್ರೆಯಲ್ಲಿ ಈತನ ಕೈಗೆ 30 ಹೊಲಿಗೆ ಹಾಕಲಾಗಿದೆ. ಕ್ಯಾತಸಂದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಹಲ್ಲೆ ನಡೆಸಿದವರಿಗಾಗಿ ಬಲೆ ಬೀಸಿದ್ದಾರೆ.