ಸಿದ್ದರಾಮಯ್ಯಗೆ ಮತ್ತೆ ಕುಟುಕಿದ ಹೆಚ್ಡಿಕೆ

ಬೆಂಗಳೂರು: ಜೆಡಿಎಸ್‌ ನಾಯಕರು ಮತ್ತು ಪಕ್ಷದ ಬಗ್ಗೆ ಸರಣಿ ಸುಳ್ಳುಗಳನ್ನು ಹೇಳುತ್ತಾ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧಮತ್ತೆ ಕುಟುಕಿದ್ದಾರೆ.

ಮೈತ್ರಿ ಸರಕಾರ ರಚನೆ ಮಾಡಲು ಜೆಡಿಎಸ್‌ ನವರ ಮನೆ ಬಾಗಿಲಿಗೆ ಹೋಗಿರಲಿಲ್ಲ, ವರಿಷ್ಠರ ಜತೆ ಮಾತುಕತೆ ಆಗಿದ್ದು ನಿಜ, ನಾನಂತೂ ಅವರ ಮನೆಗೆ ಹೋಗಿಲ್ಲ ಎಂದು  ಸಿದ್ದರಾಮಯ್ಯ ಅವರು ಕೋಲಾರದಲ್ಲಿ ನೀಡಿದ ಹೇಳಿಕೆಯ ಬಗ್ಗೆ  ಹೆಚ್.ಡಿ.ಕುಮಾರಸ್ವಾಮಿ ಅವರು ಹೀಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ  ಸರಣಿ ಟ್ವೀಟ್‌ ಮಾಡಿರುವ ಅವರು,ಎಲ್ಲೂ ಕೂಡಾ ಸಿದ್ದರಾಮಯ್ಯ ಅವರ ಹೆಸರನ್ನು ನೇರವಾಗಿ ಹೇಳದೆ‌ ಟೀಕಾಪ್ರಹಾರ ಮಾಡಿದಗದಾರೆ.

ಜೆಡಿಎಸ್‌ ನಾಯಕರು ಮತ್ತು ಪಕ್ಷದ ಬಗ್ಗೆ ಸರಣಿ ಸುಳ್ಳುಗಳನ್ನು ಹೇಳುತ್ತಿರುವ ಅವರು ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ದೂರಿದ್ದಾರೆ.

ಕಟ್ಟುವುದು ಮನುಷ್ಯತ್ವ, ಕೆಡವೋದು ರಾಕ್ಷಸತ್ವ, ನಿಮಗೆ ಕೆಡವಿ ಗೊತ್ತೇ ವಿನಾ ಕಟ್ಟಿ ಗೊತ್ತಿಲ್ಲ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕೆಂದು ಹೇಳಿ ನಮ್ಮ ಮನೆ ಬಾಗಿಲಿಗೆ ಬಂದ ಕಾಂಗ್ರೆಸ್‌ ನಾಯಕರು ಸರಕಾರದ ನೇತೃತ್ವ ವಹಿಸಿ ಎಂದರು. ಹಾಗಾದರೆ, ಪಕ್ಷದ ನಿರ್ಧಾರಕ್ಕೂ ನಿಮಗೂ ಸಂಬಂಧ ಇಲ್ಲವಾ ಮಿಸ್ಟರ್ ಸಿದ್ದಸೂತ್ರದಾರ ಎಂದು ಪ್ರಶ್ನಿಸಿದ್ದಾರೆ.

ನಾನು ಯಾವತ್ತೂ ಜೆಡಿಎಸ್‌ ನವರ ಮನೆ ಬಾಗಿಲಿಗೆ ಹೋಗಿಲ್ಲ ಎನ್ನುತ್ತೀರಿ, ನಿಮ್ಮನ್ನು ಬನ್ನಿ ಅಂತ ಕರೆದಿದ್ದೆವಾ ನಾವೇನು ಎಲೆ-ಅಡಿಕೆ ಕೊಟ್ಟು ಆಹ್ವಾನ ಕೊಟ್ಟಿದ್ದೆವಾ? ಬಂದವರು ಯಾರು? ಬೆಂಬಲದ ಭಿಕ್ಷೆ ಬೇಡಿದವರು ಯಾರು? ದೆಹಲಿ ನಾಯಕರು ನಮ್ಮ ಮನೆ ಬಾಗಿಲಲ್ಲಿ ನಿಂತಿದ್ದಾಗಲೇ ಮೈತ್ರಿಗೆ ಕುಣಿಕೆ ಬಿಗಿಯಲು ಯತ್ನಿಸಿದವರು ಯಾರು ಎಂದು ಖಾರವಾಗಿ ಎಚ್ ಡಿ ಕೆ ಪ್ರಶ್ನಿಸಿದ್ದಾರೆ.

ಹೈಕಮಾಂಡ್ ಮಟ್ಟದಲ್ಲಿ ಮಾತುಕತೆ ನಡೆದಿದೆ, ನನ್ನ ಹಂತದಲ್ಲಿ ಅಲ್ಲ ಅನ್ನುತ್ತೀರಿ! ಹಾಗಾದರೆ, ಸಿಎಲ್ಪಿಯನ್ನೇ ಸೀಳಿ ಶಾಸಕರು ಬಿಜೆಪಿಗೆ ಹೋಗಲು ದುಷ್ಪ್ರೇರಣೆ ಕೊಟ್ಟವರು ಯಾರು? ವರಿಷ್ಠರು ತಂದ ಸರಕಾರವನ್ನೇ ತೆಗೆದಿರಿ, ಬಿಜೆಪಿ ಸರಕಾರ ಬರಲು ಕಾರಣರಾದಿರಿ. ಈಗ ಸುಳ್ಳಿಗೆ ಸುಳ್ಳು ಪೋಣಿಸುತ್ತಿದ್ದೀರಿ. ಆ ಸರಕಾರ ಬರಲು ಶಾಸಕರ ಟೀಂ ರೆಡಿ ಮಾಡಿದವರು ಯಾರು? ಇಂತಹ ಸಿದ್ದಕಲೆ ಎಲ್ಲಿಂದ ಬಂತು ಮಿಸ್ಟರ್ ಸಿದ್ದಕಲಾನಿಪುಣಪ್ಪಾ ಎಂದು ಟ್ವಿಟರ್ ನಲ್ಲೇ ವ್ಯಂಗ್ಯವಾಡಿದ್ದಾರೆ. ಜೆಡಿಎಸ್‌ ಬಿಜೆಪಿಯ ಬಿ ಟೀಂ ಅನ್ನುತ್ತೀರಿ. ಆಡಳಿತ ಪಕ್ಷದಲ್ಲೇ ಕೂತು ವಿರೋಧ ಪಕ್ಷದ ಜತೆ ಕೈಜೋಡಿಸಿ ಬೆನ್ನಿಗಿರಿದ ʼಬ್ರೂಟಸ್‌ʼ ಯಾರು? ಮೈತ್ರಿ ಸರಕಾರಕ್ಕೆ ಮೊದಲ ದಿನದಿಂದಲೇ ಮುಹೂರ್ತ ಇಟ್ಟವರು ಯಾರು? ಸ್ವಯಂಘೋಷಿತ ಅಹಿಂದ ನಾಯಕರೇ ನಿಮ್ಮೊಳಗೆ ಉಕ್ಕುತ್ತಿರುವ ಕಾರ್ಕೋಟಕ ʼವಿಷʼವನ್ನೊಮ್ಮೆ ನೋಡಿಕೊಳ್ಳಿ. ಆ ವಿಷವೇ ನಿಮಗೆ ಮುಳುವು ಆಗಲಿದೆ ಎಂದು ಛಾಟಿ ಬೀಸಿದ್ದಾರೆ.