ಸಿದ್ದು ವಿರುದ್ಧ ಎಚ್ ಡಿ ಕೆ ಕೆಂಡಾಮಂಡಲ

ಬೆಂಗಳೂರು: ಮಾತು ಆಡಿದ ಮೇಲೆ ಅದನ್ನು ದಕ್ಕಿಸಿಕೊಳ್ಳುವ ಯೋಗ್ಯತೆಯೂ ಇರಬೇಕಲ್ಲವೇ? ಆ ಯೋಗ್ಯತೆ ಅವರಿಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಅವರು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ತೀವ್ರ ಟೀಕಾಪ್ರಹಾರ ನಡೆಸಿದ್ದಾರೆ.

ಈ ಕುರಿತು ಸರಣಿ ಟ್ವಿಟ್ ಮಾಡಿರುವ ಅವರು, ಸ್ವಯಂ ಘೋಷಿತ ಸಂವಿಧಾನ ಪಂಡಿತ ಸಿದ್ದರಾಮಯ್ಯ ನಮ್ಮ ಪಕ್ಷ , ನಮ್ಮ ಬಗ್ಗೆ ಲಘುವಾಗಿ ಮಾತನಾಡಿದ್ದಕ್ಕೆ ನಾನು ಉತ್ತರ ಕೊಟ್ಟಿದ್ದೇನೆ.ನಮ್ಮ ಪಕ್ಷದಿಂದ ಎಗರಿಸಿಕೊಂಡು ಹೋದವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವವರು ನಮ್ಮ ಪಕ್ಷದ ಬಗ್ಗೆ ಏಕೆ ಮಾತನಾಡಬೇಕು? ಜೆಡಿಎಸ್‍ನ್ನು ತುಮಕೂರಿನಿಂದ ಓಡಿಸಿ, ಎಂದಿದ್ದು ಯಾವ ಸಂಸ್ಕೃತಿ? ಎಂದು ಕಿಡಿಕಾರಿದ್ದಾರೆ.

ಪ್ರಜಾ ಪ್ರಭುತ್ವದಲ್ಲಿ ಒಂದು ಪಕ್ಷವನ್ನು ಓಡಿಸಿ ಎನ್ನುವುದು ಎಂಥಾ ರಾಜಕಾರಣ? ಲಂಗು ಲಗಾಮಿಲ್ಲದ ಇಂಥ ಜನರಿಂದ ನಾನು ಭಾಷೆ, ಸಂಸ್ಕೃತಿ ಬಗ್ಗೆ ಕಲಿಯಬೇಕಿಲ್ಲ. ಸುಳ್ಳಿನ ಸಿದ್ದ ಪುರುಷನಿಂದ ಭಾಷೆ-ಸಂಸ್ಕೃತಿ ಕುರಿತು ಪಾಠವೇ? ಎಂದು ವ್ಯಂಗ್ಯವಾಡಿದ್ದಾರೆ.

ಕುಮಾರಸ್ವಾಮಿ ಬಗ್ಗೆ ಮಾತನಾಡಲ್ಲ ಅನ್ನುತ್ತಾರೆ. ಮಾತೆತ್ತಿದರೆ ಕುಮಾರ ಸ್ವಾಮಿಯದ್ದೇ ಜಪ ! ಜತೆಗೆ ಜೆಡಿಎಸ್ ಬಗ್ಗೆ ವಿಷ ಕಾರುವುದು ಸುಳ್ಳಾ? ಅವರ ಹೇಳಿಕೆಗಳನ್ನು ಇಡೀ ರಾಜ್ಯವೇ ಕೇಳಿಸಿಕೊಂಡಿದೆ ಎಂದು ಹೇಳಿದ್ದಾರೆ.

ನನ್ನನ್ನು ಕಂಡರೆ ಕುಮಾರಸ್ವಾಮಿಗೆ ಭಯ ! ಅಂತಾರೆ. ಇದು ಭ್ರಮೆಯ ಪರಮಾವಧಿ ಮತ್ತೆ ಸಿಎಂ ಆಗಲ್ಲ ಎಂದು ಖಚಿತವಾದ ಮೇಲೆ ಹತಾಶೆ, ಅಸಹನೆಯ ಬೆಂಕಿಯಲ್ಲಿ ಬೇಯುತ್ತಿದ್ದಾರೆ, ಪಾಪ. ಇದು ವಿಪರೀತಕ್ಕೆ ಹೋಗಿದೆ ಎನ್ನುವುದಕ್ಕೆ ಕಾಂಗ್ರೆಸ್ ಕಚೇರಿಯಲ್ಲಿ ಅವರು ಕೊಟ್ಟ ಹೇಳಿಕೆಗಳೇ ಸಾಕ್ಷಿ ಎಂದು ಲೇವಡಿ ಮಾಡಿದ್ದಾರೆ.

ಚುನಾವಣೆಯಲ್ಲಿ ನಮ್ಮ ತಂದೆ, ನನ್ನ ಅಣ್ಣ, ನಾನೂ ಸೋತಿದ್ದೇನೆ. ಸೋತ ಮೇಲೆ ನಾವ್ಯಾರೂ ಅಧೀರರಾಗಿಲ್ಲ. ಸೋತಿದ್ದಕ್ಕೆ ನಾವು ಕಣ್ಣೀರು ಹಾಕಿಲ್ಲ.ಕಮೀಷನ್ ವ್ಯವಹಾರದಲ್ಲಿ ನಾನು ನೀಟ್, ಕ್ಲೀನ್ ಎನ್ನುತ್ತಿದ್ದಾರೆ ಪ್ರತಿಪಕ್ಷ ನಾಯಕರು. ಇವತ್ತಿಗೂ ಕೇಳಿಸುತ್ತಿರುವ ಅರ್ಕಾವತಿ ಆರ್ತನಾದಕ್ಕೆ ಕಾರಣರು ಯಾರು?ಎಂದು ಎಚ್ ಡಿ ಕೆ ಪ್ರಶ್ನಿಸಿದ್ದಾರೆ.

ಈ ಸತ್ಯ ಆಚೆ ಬಿದ್ದರೆ ದೇವರಾಜ ಅರಸು ಅವರ ನಂತರ ಐದು ವರ್ಷದ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುವ ಅಪರ ಸಿದ್ದ ಪುರುಷರ ಪಾಡೇನು? ಐದು ವರ್ಷದ ಮುಖ್ಯಮಂತ್ರಿ ಎಂಬ ಪ್ರಭಾವಳಿಯ ಗತಿ ಏನು ಎಂದು ಗುಡುಗಿದ್ದಾರೆ.