ಬೆಂಗಳೂರು: ನಾನು ಹಿಟ್ ಅಂಡ್ ರನ್ ಮಾಡುವ ವ್ಯಕ್ತಿ ಅಲ್ಲ, ನಡೆದಿರುವುದನ್ನು ಹೇಳಿದ್ದೇನೆ ಎಂದು ಮಾಜಿ ಸಿಎಂ ಎಚ್ .ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,
ಮಿಸ್ಟರ್ ಸಿದ್ದರಾಮಯ್ಯ ನಿಮ್ಮಂತೆ ನಾನು ಮುಖ್ಯಮಂತ್ರಿ ಆಗಿದ್ದಾಗ ನನ್ನ ಸಹಿಯನ್ನು ಮಾರಾಟಕ್ಕೆ ಇಟ್ಟಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ಹಿಟ್ ಅಂಡ್ ರನ್ನಾ, ಯಾವುದರಲ್ಲಿ ಎಂಬುದನ್ನು ತೋರಿಸಿ ನೋಡೋಣ ಎಂದು ಸವಾಲು ಹಾಕಿದರು.
ಸುಮ್ಮನೆ ನನ್ನನ್ನು ಕೆಣಕಬೇಡಿ,ಹಿಟ್ ಅಂಡ್ ರನ್ ಮಾಡ್ತಾ ಇರೋದು ನೀವು, ಬಿಜೆಪಿ ಸರಕಾರದ ಮೇಲೆ 40% ಆರೋಪ ಮಾಡಿದ್ದೀರಿ. ಆ ಆರೋಪಗಳ ಕಥೆ ಏನಾಯಿತು ಒಂದಾದರು ದಾಖಲೆ ತೋರಿಸಿದಿರಾ ಎಂದು ಟೀಕಿಸಿದರು.
ಜೆಡಿಎಸ್ ಜೊತೆ ಹೋಗುವ ದಾರಿದ್ರ್ಯ ಬಂದಿಲ್ಲ ಎಂದು ಬಿಜೆಪಿಯ ಮಾಜಿ ಸಚಿವರೊಬ್ಬರು ನೀಡಿರುವ ಹೇಳಿಕೆಯ ಬಗ್ಗೆ ಕೇಳಿದ ಪ್ರಶ್ನೆಗೆ ನಮಗೂ ಬಿಜೆಪಿ ಜತೆ ಹೋಗುವ ದಾರಿದ್ಯ್ರ ಬಂದಿಲ್ಲ ಎಂದು ಉತ್ತರಿಸಿದರು.
ಸದನದಲ್ಲಿ ಸರ್ಕಾರದ ವಿರುದ್ದ ಹೋರಾಟ ಮಾಡುತ್ತಿದ್ದೇನೆ,ಅಲ್ಲಿ ಬಿಜೆಪಿ ಅಧಿಕೃತ ವಿರೋಧ ಪಕ್ಷ, ಕೆಲವೊಮ್ಮೆ ಅವರ ಜತೆ ಸೇರಿ ಹೋರಾಟ ಮಾಡಬೇಕಾಗುತ್ತದೆ. ಹಾಗೆಂದ ಮಾತ್ರಕ್ಕೆ ಯಾರ ಬಳಿಗೂ ಭಿಕ್ಷೆ ಬೇಡುವ ಪರಿಸ್ಥಿತಿ ಇಲ್ಲ,ನಾನು ಯಾರ ಮನೆಯ ಬಾಗಿಲಿಗೂ ಹೋಗಲ್ಲ ಎಚ್ ಡಿ ಕೆ ಕಿಡಿಕಾರಿದರು.