ಹುಬ್ಬಳ್ಳಿ:ರೈಲ್ವೆ ರಕ್ಷಣಾ ಪಡೆ ಹಾಗೂ ಮಾದಕ ದ್ರವ್ಯಗಳ ನಿಯಂತ್ರಣ ಮಂಡಳಿಗಳ ತಂಡ ಜಂಟಿ ಕಾರ್ಯಾಚರಣೆ ನಡೆಸಿ 1.5 ಕೋಟಿ ಮೌಲ್ಯದ ಮಾದಕ ವಸ್ತು ಪತ್ತೆಹಚ್ಚಿದ್ದಾರೆ.
ಮಾದಕ ದ್ರವ್ಯಗಳ ಕಳ್ಳಸಾಗಣೆ ಹಾಗೂ ಅಕ್ರಮ ಸಾಗಣೆಯನ್ನು ತಡೆಗಟ್ಟುವ ಆಂದೋಲನದಡಿ ಹುಬ್ಬಳ್ಳಿ ವಿಭಾಗದ ರೈಲ್ವೆ ರಕ್ಷಣಾ ಪಡೆಯು ತನ್ನ ವ್ಯಾಪ್ತಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮೆಥಾಮ್ ಫೆಟಾಮೈನ್ ಮಾಲನ್ನು ಪತ್ತೆಹಚ್ಚಿದೆ.
ಖಚಿತ ಮಾಹಿತಿ ಮೇರೆಗೆ ರೈಲ್ವೆ ರಕ್ಷಣಾ ಪಡೆ ಹುಬ್ಬಳ್ಳಿ ಹಾಗೂ ಮಾದಕ ದ್ರವ್ಯಗಳ ನಿಯಂತ್ರಣ ಮಂಡಳಿ ತಂಡದ ಜಂಟಿ ಕಾರ್ಯಾಚರಣೆ ವೇಳೆ ಮೆಥಾಮ್ ಫೆಟಾಮೈನ್ ಎಂಬ ಮಾದಕ ದ್ರವ್ಯವನ್ನು ಹೊಂದಿದ್ದ ಉಗಾಂಡಾದ ಯುವತಿಯೊಬ್ಬಳನ್ನು ಬಂಧಿಸಲಾಗಿದೆ.
ಹುಬ್ಬಳ್ಳಿಯ ರೈಲ್ವೆ ರಕ್ಷಣಾಪಡೆಯ ತಂಡವು ಎಲ್ಲಾ ನಿಲ್ದಾಣಗಳಲ್ಲಿನ ತನ್ನ ಘಟಕಗಳನ್ನು ಹಾಗೂ ಹಜರತ್ ನಿಜಾಮುದ್ದೀನ್ ನಿಂದ ಯಶವಂತಪುರಕ್ಕೆ ಸಂಚರಿಸುತ್ತಿದ್ದ ಸಂಪರ್ಕ ಕ್ರಾಂತಿ ಎಕ್ಸ್ ಪ್ರೆಸ್ ರೈಲಿನಲ್ಲಿ ಕರ್ತವ್ಯದಲ್ಲಿದ್ದ ತನ್ನ ಎಲ್ಲಾ ಸಿಬ್ಬಂದಿಗಳಿಗೂ ಎಚ್ಚರಿಕೆ ನೀಡಿತ್ತು.
ನಿಲ್ದಾಣಗಳಲ್ಲಿ ಪ್ರವೇಶ ನಿಯಂತ್ರಣ ಹಾಗೂ ಕಣ್ಗಾವಲಿನ ಕ್ಯಾಮರ (ಸಿಸಿಟಿವಿ)ಗಳನ್ನು ಸಕ್ರಿಯಗೊಳಿಸಿ ರಕ್ಷಣಾಪಡೆಯ ಮಹಿಳಾ ಸಿಬ್ಬಂದಿಗಳ ತಂಡವು ಶಂಕಿತ ಮಹಿಳೆಯನ್ನು ಪತ್ತೆಹಚ್ಚಲು ಕಾರ್ಯ ಸನ್ನದ್ಧವಾಯಿತು.
ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್ ಪ್ರೆಸ್ ನ ಸ್ಲೀಪರ್ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಶಂಕಿತ ಮಹಿಳೆಯನ್ನು ತಡೆದು ವಿಚಾರಣೆ ಮಾಡಿದಾಗ ಅನುಮಾನಸ್ಪದವಾಗಿ ನಡೆದುಕೊಂಡಿದ್ದಾಳೆ.
ಅಧಿಕಾರಿಗಳು ಆಕೆಯ ಲಗೇಜನ್ನು ಪರೀಕ್ಷಿಸಿದಾಗ ಮಕ್ಕಳ ಆಹಾರವಾದ ಎರಡು ಸಿರಿಲ್ಯಾಕ್ ಪೊಟ್ಟಣಗಳು ಸಿಕ್ಕಿವೆ.
ಈ ಪೊಟ್ಟಣಗಳಲ್ಲಿ ಮೆಥಾಮ್ ಫೆಟಾಮೈನ್ ಎಂಬ ಮಾದಕದ್ರವ್ಯ ಇದ್ದುದು ಸಾಬೀತಾಗಿದೆ.
995 ಗ್ರಾಂ ತೂಕದ ಈ ಮಾದಕ ವಸ್ತು ಸುಮಾರು ರೂ. 1.5 ಕೋಟಿ ಮೌಲ್ಯದ್ದಾಗಿದ್ದು ಅದನ್ನು ದೆಹಲಿಯಿಂದ ಬೆಂಗಳೂರಿಗೆ ಸಾಗಿಸಲಾಗುತ್ತಿತ್ತು.
ಶಂಕಿತ ಮಹಿಳೆಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ಬಳಿಕ ಆಕೆಯನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.
ಕರ್ನಾಟಕ ಹಾಗೂ ದೇಶದಾದ್ಯಂತ ಮಾದಕದ್ರವ್ಯ ಅಕ್ರಮ ಸಾಗಣೆದಾರರೊಂದಿಗೆ ಆಕೆಯ ಸಂಪರ್ಕ ಇರುವುದನ್ನು ಹಲವಾರು ಕಾನೂನು ನಿರ್ಬಂಧ ಹೇರಿಕೆಯ ಸಂಸ್ಥೆಗಳ ವಿಚಾರಣೆ ಹಾಗೂ ತನಿಖೆ ಮುಂದುವರೆದಿದೆ.
ಮಾದಕದ್ರವ್ಯ ಅಕ್ರಮ ಸಾಗಣೆದಾರರ ಸಿಂಡಿಕೇಟ್ ನೊಂದಿಗೆ ಆಕೆಯ ಸಂಪರ್ಕಗಳ ಬಗ್ಗೆಯೂ ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ನೈಋತ್ಯ ರೈಲ್ವೆ, ಹುಬ್ಬಳ್ಳಿ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ ಹೆಗಡೆ ತಿಳಿಸಿದ್ದಾರೆ.