ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣದ ಅದ್ದೂರಿ ದಸರಾಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ನಾಡದೇವತೆ ಚಾಮುಂಡೇಶ್ವರಿ ಅಮ್ಮನವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.
ನಾಡ ಅಧಿದೇವತೆ ಚಾಮುಂಡೇಶ್ವರಿ ಅಮ್ಮನವರು ಸರ್ವಾಲಾಲಂಕೃತಗೊಂಡ ಮಹೇಂದ್ರ ಆನೆಯ ಮೇಲೆ ಸಿಂಹಾಸನದೀಶ್ವರಿಯಾಗಿ ಗಜ ಗಾಂಭೀರ್ಯದಿಂದ ರಾಜಮಾರ್ಗದಲ್ಲಿ ಹೆಜ್ಜೆ ಹಾಕಿದಾಗ ಜಾನಪದ ಕಲಾ ತಂಡಗಳು,
ಡೊಳ್ಳು ಕುಣಿತ ಹಾಗೂ ಪೊಲೀಸ್ ವಾದ್ಯ ವೃಂದ ಸಾಥ್ ನೀಡಿದವು.ರಸ್ತೆಗಳ ಎರಡೂ ಬದಿ ಜನತೆ ನಿಂತು ಕಣ್ತುಂಬಿಕೊಂಡರು
ಇನ್ನು ಶ್ರೀರಂಗಪಟ್ಟಣದ ಇತಿಹಾಸವನ್ನು ಮೆಲುಕು ಹಾಕಿದ್ದೇ ಆದರೆ ಇವತ್ತಿನ ಶ್ರೀರಂಗಪಟ್ಟಣ ಪೌರಾಣಿಕ ಯುಗದಲ್ಲಿ ಆದಿರಂಗ ವಾಗಿ ಚಾರಿತ್ರಿಕವಾಗಿ ಅಷ್ಟಗ್ರಾಮ ಎಂದು ಕರೆಯಲ್ಪಡುತ್ತಿತ್ತು.
ಕಾವೇರಿ ನದಿ ಸುತ್ತುವರೆದು ಸೃಷ್ಠಿಯಾದ ಈ ಪಟ್ಟಣವು ಪಶ್ಚಿಮದಿಂದ ಪೂರ್ವಕ್ಕೆ ಸುಮಾರು 3 ಮೈಲಿಗಳಷ್ಟು ಉದ್ದ ಮತ್ತು ಉತ್ತರ-ದಕ್ಷಿಣವಾಗಿ ಒಂದು ಮೈಲಿಯಷ್ಟು ಅಗಲವನ್ನು ಹೊಂದಿರುವುದು ವಿಶೇಷವಾಗಿದೆ.
ಶ್ರೀರಂಗಪಟ್ಟಣವನ್ನು ಹೊಯ್ಸಳ ಚಕ್ರವರ್ತಿ ವಿಷ್ಣುವರ್ಧನನ ಸಹೋದರ ಉದಯಾದಿತ್ಯ ಕ್ರಿ.ಶ. 1120ರಲ್ಲಿ ನಿರ್ಮಿಸಿದ್ದರೆ, ಕ್ರಿ.ಶ. 1454ರಲ್ಲಿ ನಾಗಮಂಗಲದ ದೊರೆ ತಿಮ್ಮಣ್ಣ ಶ್ರೀರಂಗಪಟ್ಟಣಕ್ಕೆ ಸುತ್ತಲೂ ಕೋಟೆ ಕಟ್ಟಿಸಿದ. ನಾಲ್ಕು ದ್ವಾರಗಳಿಂದ ಪಟ್ಟಣವನ್ನು ಸುತ್ತುವರೆದಿರುವ ಈ ಬಲವಾದ ಕೋಟೆ ಭಾರತದ ಎರಡನೇ ಅತ್ಯಂತ ಬಲಿಷ್ಟ ಕೋಟೆಯೆಂದು ಪರಿಗಣಿತವಾಗಿದೆ.
ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಅವರು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ ಹಾಗೂ ಖ್ಯಾತ ಜ್ಯೋತಿಷಿ ವೇದ ಬ್ರಹ್ಮ ಶ್ರೀ ಭಾನುಪ್ರಕಾಶ್ ಶರ್ಮ ಗುರುಜಿಯವರ ಅವರ ನೇತೃತ್ವದಲ್ಲಿ ರಾಜ್ಯ, ರಾಷ್ಟ್ರಕ್ಕೆ ಅಭಿವೃದ್ಧಿ ಆಗಲಿ, ಸಕಾಲಕ್ಕೆ ಮಳೆ ಬೆಳೆಯಾಗಲಿ ರೈತರ ಮುಖದಲ್ಲಿ ಮಂದಹಾಸ ಮೂಡಲಿ ಎಂದು ಸಂಕಲ್ಪ ಮಾಡಿ ಅಮ್ಮನವರಿಗೆ ಪುಷ್ಪಾರ್ಚನೆಯನ್ನು ನೆರವೇರಿಸಿದರು.
ನಂತರ ಕಿರಂಗೂರಿನ ಬನ್ನಿ ಮಂಟಪದಿಂದ ಮೈಸೂರು ರಸ್ತೆ ಮಾರ್ಗವಾಗಿ ಶ್ರೀರಂಗಪಟ್ಟಣದ ಕೋಟೆ ಬಾಗಿಲಿನ ಒಳಗಿನಿಂದ ಪೇಟೆ ಬೀದಿಯಲ್ಲಿ ಬಂದು ರಂಗನಾಥ ಸ್ವಾಮಿ ದೇವಸ್ಥಾನದ ಮುಂಭಾಗ ಮಹಾ ಮಂಗಳಾರತಿ ಮಾಡಿ ಅಧಿದೇವತೆಯನ್ನು ಲಾರಿಯ ಮೂಲಕ ದೇವಾಲಯಕ್ಕೆ ಸ್ಥಳಾಂತರಿಸಲಾಯಿತು.
ಮೆರವಣಿಗೆ ವೇಳೆ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.