ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಹನೂರು ತಾಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಅಕ್ರಮ ಮದ್ಯ ಮಾರಾಟದ ಬಗ್ಗೆ ದೂರುಗಳು ಕೇಳಿಬಂದ ಹಿನ್ನಲೆಯಲ್ಲಿ ರಾತ್ರೊರಾತ್ರಿ ಸ್ವತಃ ಎಸ್ಪಿ ಬಿಟಿ ಕವಿತಾ ಅವರೆ ಹನೂರು ಪೊಲೀಸರು ಹಾಗೂ ಶಸಸ್ತ್ರ ಮೀಸಲು ಪಡೆಯ ಸಿಬ್ಬಂದಿ ಸಹಯೋಗದಿಂದ ದೂರು ದಾಖಲಿಸಿ ಮಾರಾಟಗಾರರಿಗೆ ಚಳಿಬಿಡಿಸಿ ಈಗ ತಮ್ಮ ಇಲಾಖೆಯ ಇಬ್ಬರು ಮುಖ್ಯ ಪೇದೆಗಳನ್ನ ಅಮಾನತು ಮಾಡಿದ್ದಾರೆ.
ಎಸ್ಪಿ ಬಿಟಿ ಕವಿತಾ ಅವರು ಸ್ವತಃ ಮಹದೇಶ್ವರ ಬೆಟ್ಟಕ್ಕೆ ತೆರಳಿ ಮಹದೇಶ್ವರ ಬೆಟ್ಟದ ಪೊಲೀಸರಿಗೂ ತಿಳಿಸದೆ,ಅವರ ಗಮನಕ್ಕೂ ಬಾರದ ಇರೊ ತರ ಹನೂರು ಪೊಲೀಸರನ್ನ ಬಳಸಿಕೊಂಡು ಕಾರ್ಯಚರಣೆಗಿಳಿದಿದ್ದರು.
ಅಕ್ರಮ ಮದ್ಯ ಮಾರಾಟ ಸಾಗಾಟ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡದ ಆರೋಪದ ಮೇಲೆ ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯ ಇಬ್ಬರು ಮುಖ್ಯಪೇದೆಗಳಾದ ಅಣ್ಣಾ ದೊರೆ, ಮುತ್ತುರಾಜು ಎಂಬುವವರನ್ನ ಅಮಾನತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ.ಕವಿತಾ ಆದೇಶ ಹೊರಡಿಸಿದ್ದಾರೆ.
ಶ್ರೀಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ತಿಳಿದಿದ್ದರೂ ಹಿರಿಯ ಅಧಿಕಾರಿಗಳಿಗೆ ಸಮರ್ಪಕ ಮಾಹಿತಿ ನೀಡದ ಹಿನ್ನೆಲೆ ಗುಪ್ತ ಮಾಹಿತಿ ಸಂಗ್ರಹ ಕರ್ತವ್ಯ ನಿರ್ವಹಿಸುತ್ತಿದ್ದ ಮುಖ್ಯಪೇದೆ ಅಣ್ಣಾದೊರೆ ರವರನ್ನು ಅಮಾನತ್ತು ಮಾಡಲಾಗಿದೆ. ಇದಲ್ಲದೆ ಸ್ಥಳೀಯರು ದೂರು ನೀಡಿದ ಹಿನ್ನೆಲೆ ಇನ್ನೋರ್ವ ಮುಖ್ಯಪೇದೆ ಮುತ್ತುರಾಜು ಅವರನ್ನು ಅಮಾನತು ಮಾಡಲಾಗಿದೆ ಎಂದು ಎಸ್‌ಪಿ ಅವರು ಮಾಧ್ಯಮದವರಿಗೆ ತಿಳಿಸಿದ್ದಾರೆ.
ಎಎಸ್ಐಯಾಗಿದ್ದ ಚಿಕ್ಕಕಾಳೇಗೌಡ ಅವರನ್ನು ಬೇಗೂರು ಪೊಲೀಸ್ ಠಾಣೆಗೆ, ಪೇದೆಗಳಾದ ಅಮರೇಶ್ ಚಾಮರಾಜನಗರ ಪಟ್ಟಣ ಠಾಣೆ, ಜೆ.ಎಸ್.ಶ್ರೀಗಂಧ ಕೊಳ್ಳೇಗಾಲ ಪಟ್ಟಣ ಠಾಣೆ, ಗುರುಕಿರಣ್ ಜೆ, ಸಿ ಇ.ಎನ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮರಾಜನಗರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಬಕಾರಿ ಅದಿಕಾರಿಗಳನ್ನ ಹಾಗು ಅಂದಿನ ಎಸ್ಪಿ ಅವರನ್ನು ಪುಲ್ ಕ್ಲಾಸ್ ತೆಗೆದುಕೊಂಡಿದ್ದರು. ಆದಾಗಿಯೂ ನಿಯಂತ್ರಣ ಮಾತ್ರ ಅಸಾದ್ಯವಾಗಿತ್ತು. ಆದರೆ ಹಾಲಿ ಎಸ್ಪಿ ಅವರು ಗೌಪ್ಯ ಕಾರ್ಯಚರಣೆ ಮಾಡುವ ಮೂಲಕ ಅಕ್ರಮ ಮದ್ಯದ ಗಮಲನ್ನ ಪತ್ತೆ ಹಚ್ಚಿ ಇಲಾಖಾ ಸಿಬ್ಬಂದಿಗಳ ಮೇಲೆ ಭರ್ಜರಿ ಸರ್ಜರಿ ಮಾಡಿದ್ದಾರೆ.
ಮಾಧ್ಯಮದವರೊಂದಿಗೆ ಎಸ್‌ಪಿ ಡಾ.ಬಿ.ಟಿ.ಕವಿತಾ ಮಾತನಾಡಿ, ಮಲೆ ಮಹದೇಶ್ವರ ಬೆಟ್ಟದಲ್ಲಿ ಅಕ್ರಮ ಮಧ್ಯ ಮಾರಾಟ ನಡೆಯುತ್ತಿರುವ ಬಗ್ಗೆ ಮಾಹಿತಿ ತಿಳಿದಿದ್ದರೂ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡದೆ ನಿರ್ಲಕ್ಷ್ಯ ವಹಿಸಿದ್ದ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಮಲೆ ಮಹದೇಶ್ವರ ಬೆಟ್ಟದಲ್ಲಿ ಮಧ್ಯ ಮಾರಾಟ ಮಾಡಲು ತಡೆಯಲು ಸ್ಥಳೀಯ ಪೊಲೀಸ್ ಠಾಣೆಯಿಂದ ನಾಲ್ವರು ಸಿಬ್ಬಂದಿಗಳನ್ನು ಬೇರೆ ಠಾಣೆಗಳಿಗೆ ವರ್ಗಾಯಿಸಲಾಗಿದ್ದು ಮುಂದಿನ ದಿನಗಳಲ್ಲಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಮದ್ಯ ಮಾರಾಟಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲಿದ್ದೇವೆ ಎಂದು ತಿಳಿಸಿದರು.