ಮಂಗಳೂರು: ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಪ್ರಮುಖ ಆರೋಪಿ ಶಾರೀಕ್ ಪ್ರಮುಖ ಹಿಂದೂ ದೇವಾಲಯಗಳನ್ನೇ ಸ್ಪೋಟಿಸಲು ಗುರಿಯಾಗಿಸಿಕೊಂಡಿದ್ದ ಎಂಬುದು ತನಿಖೆ ವೇಳೆ ಗೊತ್ತಾಗಿದೆ.
ಮಂಗಳೂರಿನ ಪ್ರಮುಖ ಹಿಂದೂ ದೇವಾಲಯಗಳಾದ ಕದ್ರಿಯಲ್ಲಿರುವ ಮಂಜುನಾಥಸ್ವಾಮಿ, ಕುದ್ರೋಳಿ ಗೋಕರ್ಣನಾಥಸ್ವಾಮಿ ಹಾಗೂ ಮಂಗಳಾದೇವಿ ದೇವಾಲಯಗಳನ್ನು ಟಾರ್ಗೆಟ್ ಮಾಡಿಕೊಂಡಿದ್ದ ಎಂದು ಎನ್ಐಎ ಮೂಲಗಳು ತಿಳಿಸಿವೆ.
ಲಕ್ಷದೀಪೋತ್ಸವ ಸಂದರ್ಭದಲ್ಲಿ ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯ ನಡೆಸಲು ಶಾರೀಕ್ ಮೊಹಮ್ಮದ್ ಹೊಂಚು ಹಾಕಿದ್ದ.
ಜೊತೆಗೆ ಮಂಗಳೂರಿನ ಪಡಿಲು ಬಳಿ ಇರುವ ರೈಲ್ವೆ ನಿಲ್ದಾಣ, ಬಸ್ ಮತ್ತು ವಿಮಾನ ನಿಲ್ದಾಣಗಳನ್ನು ಕೂಡ ಈತ ಟಾರ್ಗೆಟ್ ಮಾಡಿದ್ದ.
ತನ್ನ ಮೊಬೈಲ್ ಡಿಪಿಗೆ ಆತ ಶಿವನ ಮೂರ್ತಿಯ ಚಿತ್ರ ಹಾಕಿಕೊಂಡಿದ್ದೂ ಇದೇ ಕಾರಣಕ್ಕಾಗಿ ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ.
ಕಾರ್ತೀಕ ಮಾಸದಲ್ಲಿ ದೇಶ,ವಿದೇಶಗಳಿಂದ ಹಿಂದೂಗಳು ಪ್ರಮುಖ ದೇವಾಲಯಗಳಿಗೆ ಬಂದು ಪೂಜೆ ಪುನಸ್ಕಾರಗಳನ್ನು ನೆರವೇರಿಸುತ್ತಾರೆ.
ಹಾಗಾಗಿ ಭಾರೀ ಜನಜಂಗುಳಿ ಇರುವಾಗಲೇ ಮೂರು ದೇವಾಲಯಗಳನ್ನು ಗುರಿಯಾಗಿಟ್ಟುಕೊಂಡು ಬಾಂಬ್ ಸ್ಪೋಟಿಸಿದರೆ ದೊಡ್ಡ ಅನಾಹುತ ಸಂಭವಿಸಲಿದೆ ಎಂದು ಶಾರೀಕ್ ಸ್ಕೆಚ್ ಹಾಕಿದ್ದ.
ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತದೆ ಎಂದು ಆತ ಅಂದುಕೊಂಡಿದ್ದ. ಆದರೆ ಶಾರೀಕ್ ನ ಪ್ಲ್ಯಾನ್ ಸಫಲವಾಗುವ ಮೊಗಲೇ ಕುಕ್ಕರ್ ಬಾಂಬ್ ಮೊದಲೇ ಸ್ಪೋಟಗೊಂಡ ಕಾರಣ ಎಲ್ಲವೂ ತಲೆಕೆಳಗಾಗಿ ಸಿಕ್ಕಿಬಿದ್ದ.