1 ಕೋಟಿ ಮೌಲ್ಯದ ಶ್ರೀಗಂಧ ವಶ: ಇಬ್ಬರ ಬಂಧನ

ಮೈಸೂರು: ಶ್ರೀ ಗಂಧದ ಮರ ಕಳ್ಳ ಸಾಗಣೆ ಮಾಡುತಿದ್ದ ಬೃಹತ್ ಜಾಲವನ್ನು ಬೇಧಿಸಿರುವ ಸಿಸಿಬಿ ಪೊಲೀಸರು ಇಬ್ಬರನ್ನು ಬಂಧಿಸಿ ಒಂದು ಕೋಟಿ ಬೆಲೆಯ ಶ್ರೀ ಗಂಧದ ಮರಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು ಮೈಸೂರಿನ ಮಂಡಿ ಮೊಹಲ್ಲಾದ ಪುಲಕೇಶಿ ರಸ್ತೆ ಮತ್ತು ಎಂ.ಕೆ.ಡಿ.ಕೆ. ರಸ್ತೆ 2ನೇ ಕ್ರಾಸ್ ಕೂಡುವ ಸ್ಥಳದಲ್ಲಿ ಟಾಟಾ ಗೂಡ್ಸ್ ಕ್ಯಾರಿಯರ್ ವಾಹನದಲ್ಲಿ ಕಳ್ಳಸಾಗಣೆ  ಮಾಡಿದ ಶ್ರೀಗಂಧದ ಮರದ ತುಂಡುಗಳನ್ನು ಮೈಸೂರಿನ ಸ್ಮಗ್ಲರ್ ಒಬ್ಬರಿಂದ ಖರೀದಿಸಿ ಬೆಂಗಳೂರಿನ ಕಡೆಗೆ ಸಾಗಾಣೆ ಮಾಡಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆಂಬ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ.

ತಕ್ಷಣ ಅಲರ್ಟ್ ಆದ ಸಿ.ಸಿ.ಬಿ. ಪೊಲೀಸರು,ಟಾಟಾ ಗೂಡ್ಸ್ ಕ್ಯಾರಿಯರ್  ವಾಹನದ ಮೇಲೆ ರಾತ್ರಿ 11 ಗಂಟೆ ಸಮಯದಲ್ಲಿ ದಾಳಿ ಮಾಡಿ, ಈ  ದಂಧೆಯಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಟಾಟಾ ಗೂಡ್ಸ್ ಕ್ಯಾರಿಯರ್ ವಾಹನದ ಚಾಲಕರ ಸೀಟಿನ ಹಿಂಭಾಗ ಗೌಪ್ಯವಾಗಿ ನಿರ್ಮಿಸಿದ್ದ ಕ್ಯಾಬಿನ್ ಒಂದರಲ್ಲಿ ಅಡಗಿಸಿಟ್ಟಿದ್ದ ಒಂದು ಕೋಟಿ ಮೌಲ್ಯದ ಒಟ್ಟು 700 ಕೆ.ಜಿ. ತೂಕದ ಶ್ರೀಗಂಧದ ಮರದ ತುಂಡುಗಳು, 2 ಮೊಬೈಲ್ ಫೋನ್‍ಗಳು, 15,000ರೂ ಹಣ ಹಾಗೂ ಟಾಟಾ ಕಂಪೆನಿಯ ಗೂಡ್ಸ್ ಕ್ಯಾರಿಯರ್ ವಾಹನವನ್ನು ಪೊಲೀಸರು ಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಮಗ್ಲಿಂಗ್ ದಂಧೆಯಲ್ಲಿ ಭಾಗಿಯಾಗಿದ್ದ ಇತರೇ ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ಮುಂದುವರೆದಿದೆ.

ಮೈಸೂರು ನಗರದ ಡಿ.ಸಿ.ಪಿ. ಗೀತಪ್ರಸನ್ನರವರ  ಮಾರ್ಗದರ್ಶನದಲ್ಲಿ ಸಿ.ಸಿ.ಬಿ.ಯ ಎ.ಸಿ.ಪಿ. ಸಿ.ಕೆ.ಅಶ್ವಥನಾರಾಯಣ ಅವರ ನೇತೃತ್ವದಲ್ಲಿ ಸಿ.ಸಿ.ಬಿ.ಯ ಇನ್ಸ್‍ಪೆಕ್ಟರ್ ಎ.ಮಲ್ಲೇಶ್, ಎ.ಎಸ್.ಐ. ಆರ್.ರಾಜು, ಸಿಬ್ಬಂದಿಗಳಾದ ಜೋಸೆಫ್ ನೊರೋನ್ಹ, ರಾಧೇಶ್, ಉಮಾಮಹೇಶ್, ಪುರುಷೋತ್ತಮ, ಅನಿಲ್, ರಘು, ಸುನಿಲ್, ಅರುಣ್‍ಕುಮಾರ್, ಶ್ರೀನಿವಾಸ, ಮಮತ ಅವರು ದಾಳಿಯಲ್ಲಿ ಪಾಲ್ಗೊಂಡಿದ್ದರು. ಸಿಸಿಬಿ ಪೊಲೀಸರ ಕಾರ್ಯವನ್ನು ಮೈಸೂರು ನಗರ ಪೊಲೀಸ್ ಆಯುಕ್ತ ಡಾ:ಚಂದ್ರಗುಪ್ತ ಅವರು ಪ್ರಸಂಶಿಸಿದ್ದಾರೆ.