ಡಾ. ಗುರುಪ್ರಸಾದ ಎಚ್. ಎಸ್.
ಲೇಖಕರು ಮತ್ತು ಉಪನ್ಯಾಸಕರು
dr.guruhs@gmail.com
ಆಧ್ಯಾತ್ಮಿಕ ಸಾಧಕರ ಪುಣ್ಯ ಭೂಮಿ ನಮ್ಮ ಭಾರತ, ಸಾವಿರಾರು ವರ್ಷಗಳಿಂದ ಅನೇಕ ಋಷಿಮುನಿಗಳು, ಯೋಗಿಗಳು, ಅವಧೂತರು, ಆಧ್ಯಾತ್ಮ ಸಾಧನೆಯಲ್ಲಿ ತೊಡಗಿ ಜನರನ್ನು, ಸಮುದಾಯಗಳನ್ನು, ಸಮಾಜವನ್ನು ಸ್ವಾಸ್ಥ್ಯ ಉನ್ನತಿಯಡೆಗೆ ಇಂದಿಗೂ ದಾರಿ ತೋರುತ್ತಿದ್ದಾರೆ ಅಂತಹವರಲ್ಲಿ ಶ್ರೀ ಎಂ ಒಬ್ಬರು.
ಶ್ರೀ ಎಂ ಹುಟ್ಟಿದ್ದು 1948ರಲ್ಲಿ ಕೇರಳದ ತಿರುವಂತನಪುರ ಸಮೀಪದ ವಂಚಿಯೂರಿನಲ್ಲಿ. 9ನೇ ವಯಸ್ಸಿನಲ್ಲಿ ನಾಥ ಪಂಥ ಪರಂಪರೆಯ ಯೋಗಿ ಮಹೇಶ್ವರನಾಥ ಬಾಬಾಜಿ ಅವರ ದಾರ್ಶನಿಕ ಸ್ಪರ್ಶ ಪಡೆದ ಬಾಲಕ ಅಲಿ, 19ನೇ ವಯಸ್ಸಿನಲ್ಲಿ ಗುರುವನ್ನು ಹುಡುಕಿ ಹೊರಟಿದ್ದು ಹಿಮಾಲಯದ ಶಿಖರಗಳ ಕಡೆಗೆ.
ಪರೀಕ್ಷೆ ಶುಲ್ಕ ಕಟ್ಟಲು ನೀಡಿದ್ದ ಹಣದಲ್ಲಿಯೇ ಹರಿದ್ವಾರ ತಲುಪಿದ ಮಮ್ತಾಜ್ ಅಲಿ, ನಾಥಪಂಥದ ಸಾಧುಗಳನ್ನು ಅರಸಿ, ಅವರ ಒಡನಾಡಿದರು. ಹರಿದ್ವಾರ, ಬದರೀನಾಥ್ದಲ್ಲಿ ಸಾಧುಗಳು, ಕಾಪಾಲಿಕರು, ಸಿದ್ಧರು, ತಾಂತ್ರಿಕರು, ಶಾಕ್ತರ ಸಂಸರ್ಗದಲ್ಲಿ ತಲ್ಲೀನರಾದರು.
ಅಲ್ಲಿಂದ ಹೃಷಿಕೇಶದ ಡಿವೈನ್ ಲೈಫ್ ಸೊಸೈಟಿಗೆ ಸೇರಿಕೊಂಡ ಮುಮ್ತಾಜ್ ಅಲಿ, ನಾಥಪಂಥದ ಅಧ್ಯಯನ ನಡೆಸಿ, ಸಿದ್ಧಸಾಧಕರ ವಿದ್ಯೆ ಕಲಿತರು. ಯೋಗ, ಉಪನಿಷತ್ಗಳ ಅಧ್ಯಯನ ಕೈಗೊಂಡರು. ಹಿಮಾಲಯದ ತಪ್ಪಲಿನ ‘ವ್ಯಾಸ ಗುಹೆ’ ಯಲ್ಲಿ ನಾಥಪಂಥ ಪರಂಪರೆಯ ಸಾಧನೆಯನ್ನೂ ಮಾಡಿದರು.
ಹೀಗಿರುವಾಗಲೇ ತಾವು 9ನೇ ವಯಸ್ಸಿನಲ್ಲಿ ಕಂಡಿದ್ದ ಮಹೇಶ್ವರನಾಥ ಬಾಬಾಜಿ ಅವರ ದರ್ಶನವೂ ಆಯಿತು. ಮೂರೂವರೆ ವರ್ಷಗಳ ಕಾಲ ಮಹೇಶ್ವರನಾಥರ ಜತೆ ಬದುಕಿ, ಅವರು ಹೋದಲ್ಲೆಲ್ಲಾ ಅವರ ನಡೆಯನ್ನು ಹಿಂಬಾಲಿಸಿದ ಮಮ್ತಾಜ್, ಅವರ ಏಕೈಕ ಶಿಷ್ಯರಾದರು. ಕುಂಡಲಿನಿ ವಿದ್ಯೆ ಕರಗತ ಮಾಡಿಕೊಂಡರು. ಮುಸ್ಲಿಂನಾಗಿ ಹುಟ್ಟಿ, ಭಾರತೀಯ ಅಧ್ಯಾತ್ಮಿಕ ಪರಂಪರೆಯ ಪ್ರಧಾನ ಧಾರೆಯಾಗಿರುವ ನಾಥಪಂಥದಲ್ಲಿ ಸಾಧನೆಯನ್ನೂ ಮಾಡಿದರು.
ತಮ್ಮದು ನಾಥ ಪಂಥದ ಗುರುಪರಂಪರೆ ಎಂದು ಒಪ್ಪಿಕೊಳ್ಳುವ ಅವರು, ತಮ್ಮ ಹಿಂದಿನ ಜನ್ಮದ ಮಧುಕರನಾಥ ಈ ಜನ್ಮದ ಮುಮ್ತಾಜ್ ಅಲಿ ಹೆಸರಿನ ಮೊದಲಕ್ಷರ ‘ಎಂ’ ಎಂದು ಅಭಿಮಾನದಿಂದ ಗುರುತಿಸಿ ಕೊಂಡವರು.
ಹಿಮಾಲಯದ ಹೆಸರಾಂತ ಸಂತ ನೀಮ್ ಕರೋಲಿ ಬಾಬಾ, ಲಕ್ಷ್ಮಣ ಜೋ ಸಾಂಗತ್ಯದಲ್ಲಿ ಬೆಳೆದವರು. ದಾರ್ಶನಿಕ ಜಿಡ್ಡು ಕೃಷ್ಣಮೂರ್ತಿ, ಕೋಲ್ಕೊತಾ, ಮುಂಬಯಿನ ರಾಮಕೃಷ್ಣ ಮಿಷನ್, ಕೇರಳ-ಮಹಾರಾಷ್ಟ್ರದ ಸೂಫಿಸಂತರ ಜತೆ ದಶಕಗಳ ಕಾಲ ಇದ್ದು, ಅವರ ಅನುಭವ ಸಾರವನ್ನು ಮೈಗೂಡಿಸಿಕೊಂಡವರು.
ಶ್ರೀ ಎಂ ಅವರು ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ ಸತ್ಸಂಗ ಫೌಂಡೇಷನ್ ಸ್ಥಾಪಿಸಿ ಬುಡಕಟ್ಟು ಪ್ರದೇಶದ ಮಕ್ಕಳಿಗೆ ಉಚಿತವಾಗಿ ಶಾಲೆ, ಜೊತೆಗೆ ಸಾಮಾಜಿಕ ಚಟುವಟಿಕೆಗಳು ಕೈಗೊಂಡರು. ಕೋಮುಸೌಹಾರ್ದತೆಗೆ ಧಕ್ಕೆ ಬಂದಾಗ ಅಂತಹ ಸ್ಥಳಕ್ಕೆ ಸ್ವಯಂ ಸೇವಕರು ಜತೆ ತೆರಳಿ ಶಾಂತಿ ಸ್ಥಾಪಿಸುವ ಕೈಂಕರ್ಯವನ್ನು ಕೈಗೊಳ್ಳುವುದು, ಒಟ್ಟಿನಲ್ಲಿ ಮಾನವೀಯತೆ, ಮಾನವತ್ವ ದೊಡ್ಡದು ಎನ್ನುವ ಸಂದೇಶ ಬೀರುವ ಪ್ರಯತ್ನ ಮಾಡುತ್ತಾ ಸಧ್ಯ ಮದನಪಲ್ಲಿಯಲ್ಲಿ ನೆಲೆಸಿದ್ದಾರೆ.
ಸತ್ ಅಂದರೆ ಸತ್ಯ. ಸಂಗ ಅಂದರೆ ಗುಂಪು. ಕೆಲವು ಜನರು ಸೇರಿಕೊಂಡು ರಚಿಸಿರುವುದೇ ಒಂದು ಗುಂಪು. ಸತ್ಯದ ಶೋಧನೆ ನಡೆಯುತ್ತಿದೆ. ಅದುವೇ ಸತ್ಸಂಗ. ಅದು ಯಾವುದೇ ಮಾರ್ಗದಲ್ಲಿ ಇರಬಹುದು. ಜೊತೆಗೆ,
‘ಮಾನವ’ ಸೇವೆಗಳನ್ನು ಕೈಗೊಳ್ಳುತ್ತಾ ಜಗತ್ತಿನಾದ್ಯಂತ ಇದಕ್ಕಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ.
ಭಾರತೀಯ ಋಷಿ ಪರಂಪರೆಯ ಕೊಡುಗೆ ಕುರಿತು ‘ವಿಸ್ಡಮ್ ಆಫ್ ಋಷೀಸ್’,
(Wisdom of the Rishis: The Three Upanishads (Ishavasya, Keno, Mandukya). Trans. Kamal Aswami. Satsang Communications, 2002.)
ವೇದಾಂತ, ಭಗವದ್ಗೀತೆ, ಉಪನಿಷತ್ಗಳ ಸಾರವನ್ನು ವಿವರಿಸುವ ‘ಜ್ಯುವೆಲ್ ಆಫ್ ಲೋಟಸ್’
(Jewel in the Lotus: Deeper Aspects of Hinduism. Magenta Press, 2011)
The Little Guide to Greater Glory and a Happier Life. Magenta Press, 2014.
The Upanishads: Katha – Prashna ? Mundaka. Magenta Press, 2017.
Shunya. Westland by Amazon, 2018.
On Meditation : Finding Infinite Bliss and Power Within. Penguin Random House India, 2019. ಸೇರಿದಂತೆ ಹತ್ತಾರು ಪುಸ್ತಕ ಬರೆದಿದ್ದಾರೆ.
ಅಲ್ಲದೇ ಶ್ರೀ ಎಂ ರ ಆತ್ಮಚರಿತ್ರೆಯಾದ ‘ಹಿಮಾಲಯದ ಗುರುವಿನ ಗರಡಿಯಲ್ಲಿ’ (Apprenticed to a Himalayan Master. Magenta Press, 2010). ಎಂಬ ಕೃತಿ ಆಧ್ಯಾತ್ಮಿಕತೆ ಸಾಧನೆಯಲ್ಲಿ ಇರುವವರಿಗೆ ಪಥ ತೋರುವುದಾಗಿದೆ. ಅದರ ಮುಂದುವರಿದ ಭಾಗವಾದ ‘ಪಯಣ ನಿರಂತರ’ (The Journey Continues: A sequel to Apprenticed to a Himalayan Master. Magenta Press, 2017.) ಎಂಬ ಕೃತಿಯು ಕನ್ನಡಕ್ಕೆ ಅನುವಾದಗೊಂಡು ಜನಪ್ರಿಯವಾಗಿದೆ.
‘ಶ್ರೀ ಎಂ’ ಅವರು ದೇಶದಲ್ಲಿ ಶಾಂತಿ, ಕೋಮು ಸೌಹಾರ್ದ, ಸಹಿಷ್ಣುತೆಗಾಗಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಮಹಾಯಾತ್ರೆಯನ್ನು 2016 ಜ. 12 ಸ್ವಾಮಿ ವಿವೇಕಾನಂದರ ಜಯಂತಿಯಂದು ‘ಭರವಸೆಯ ನಡಿಗೆ’ ಎಂಬ ಮಹಾ ಯಾತ್ರೆ ಪ್ರಾರಂಭಿಸಿ 11 ರಾಜ್ಯಗಳು 86 ಜಿಲ್ಲೆಗಳಲ್ಲಿ ಕ್ರಮಿಸಿದ ಐತಿಹಾಸಿಕ ಮಹಾ ಪಾದಯಾತ್ರೆ ಕನ್ಯಾಕುಮಾರಿಯ ಝಿರೊ ಪಾಯಿಂಟ್ನಿಂದ ಕೈಗೊಂಡು 500 ದಿನಗಳ ಕಾಲ 7500 ಕಿ.ಮೀ ಸುದೀರ್ಘ ಯಾನವು ಕಾಶ್ಮೀರದ ಶ್ರೀನಗರ ತಲುಪಿ ಜನರ ಮನಗೆದ್ದರು.
ಅಧ್ಯಾತ್ಮಕ್ಕೆ ಗಡಿಗಳಿಲ್ಲ. ಧರ್ಮದ ಮಿತಿಯೂ ಅದಕ್ಕಿಲ್ಲ. ಧರ್ಮದ ಜತೆ ಅಧ್ಯಾತ್ಮವನ್ನು ಹೋಲಿಸುವುದು ಸರಿ ಅಲ್ಲ. ಧರ್ಮಕ್ಕೆ ಇದು ಅನ್ವಯಿಸುವುದೇ ಇಲ್ಲ. ಯಾವುದೇ ಧರ್ಮದವರು ಅಧ್ಯಾತ್ಮವನ್ನು ಪಾಲಿಸಬಹುದು. ಮಾನವನ ಉದ್ಧಾರಕ್ಕೆ ಅಧ್ಯಾತ್ಮ ಇದೆ. ಜಾತಿ ಹಂಗೂ ಅದಕ್ಕಿಲ್ಲ. ಶಾಂತಿ ಮತ್ತು ಸೌಹಾರ್ದತೆಗಾಗಿ ಆಧ್ಯಾತ್ಮ. ನೈತಿಕತೆ ಜೀವನ ಸಾಧನೆಗೆ ಆಧ್ಯಾತ್ಮವೇ ಮಾರ್ಗ. ಸತ್ಯದ ಮಾರ್ಗದಲ್ಲಿ ಜೀವನ ಸಾಗಿಸಲು, ಇನ್ನೊಬ್ಬರ ಜತೆ ಉತ್ತಮ ಬಾಂಧವ್ಯ ಹೊಂದುವುದೇ ಆಧ್ಯಾತ್ಮ. ಇಂತಹ ಮಾರ್ಗ ಅನುಸರಿಸಲು ಇಂದಿನ ಯುವಕರು ಉತ್ಸುಕರಾಗಿದ್ದಾರೆ. ಅವರಿಗೆ ಸರಿಯಾದ ಮಾರ್ಗದರ್ಶನ ನೀಡಬೇಕಾಗಿದೆ ಅಷ್ಟೇ. ಯುವಕರಿಂದ ದೊರೆಯುತ್ತಿರುವ ಪ್ರತಿಕ್ರಿಯೆ ಅದ್ಭುತ. ಅವರಲ್ಲಿ ಸೃಜನಶೀಲ ಯೋಜನೆಗಳಿವೆ. ಗುರು ಯಾವಾಗಲು ಸದಾ ಶಿಷ್ಯನ ಜತೆ ಸರಳ ರೀತಿಯಲ್ಲಿ ಮಾತನಾಡುತ್ತಿರಬೇಕು. ಗುರು ಮತ್ತು ಶಿಷ್ಯನ ನಡುವೆ ಅಂತರ ಇರಬಾರದು. ಅದು ಕುಳಿತುಕೊಳ್ಳುವ ಜಾಗವೇ ಇರಬಹುದು. ಆಗ ಉತ್ತಮ ಸಂಪರ್ಕ ಮತ್ತು ಬೋಧನೆ ಸಾಧ್ಯ.
ಈ ಬಾರಿ ನಡೆದ ಕುಂಭಮೇಳದಲ್ಲಿ ಅಪ್ಪಟ ವೈಷ್ಣವ ಅನುಯಾಯಿಯಂತೆ ಹಣೆಗೆ ಯು ಆಕಾರದ ಗಂಧದ ತಿಲಕ ಹಚ್ಚಿ, ಸನ್ಯಾಸಿಗಳು ಧರಿಸುವ ತಿಳಿ ಬಣ್ಣದ ಕುರ್ತಾ ಧರಿಸಿ ಅಗ್ನಿಕುಂಡದ ಮುಂದೆ ಕುಳಿತ ಹೋಮ ಮಾಡಿದರು, ಅಲ್ಲದೇ ಬೈರಾಗಿ ಕ್ಯಾಂಪ್ ಗಳಿಗೆ ತೆರಳಿ ಉಪನಿಷತ್ ಸೂತ್ರ, ಭಗವದ್ಗೀತ, ವೇದಾಂತದ ಬಗ್ಗೆ ತಮ್ಮ ಸ್ವ ಅನುಭವವನ್ನೂ ಸೇರಿಸಿ ಪ್ರವಚನವನ್ನು ನೀಡಿದ್ದರು.
ಕುಂಭಮೇಳದಲ್ಲಿ ಇವರು ಇವರದ್ದೇ ಆದ ಅಖಾಡ, ಯೋಗ ಧಾಮ, ಸಾಧು ಸೇವಾ ಮಾಡುವುದರೊಂದಿಗೆ ಭಜನೆಯನ್ನೂ ಮಾಡಿದರು. ದೇವರು ಬೇರೆ ಬೇರೆ ನಾಮಗಳಿಂದ ಕರೆಯಲ್ಪಡುತ್ತಾನೆ ಅಷ್ಟೆ. ಅಲ್ಲಾ, ಕ್ರೈಸ್ಟ್, ಕೃಷ್ಣ ಮತ್ತು ಹಲವು ನಾಮ. ಈ ಭಿನ್ನ ಹೆಸರುಗಳ ಹೊರತಾಗಿ ದೇವರು ಒಬ್ಬನೇ. ಒಮ್ಮೆ ಈ ಜ್ಞಾನ ಪಡೆದರೆ ಎಲ್ಲರೂ ಹುಡುಕುವುದು ಇದೇ ಜ್ಞಾನ ಎಂಬುದು ಅರಿವಾಗುತ್ತದೆ ಎನ್ನುತ್ತಾರೆ.
‘ಎಂ’ ಅಂದರೆ ಮನುಷ್ಯ, ಮಾನವತಾವಾದ. ಒಬ್ಬ ವ್ಯಕ್ತಿ ಕ್ರೈಸ್ತ ಧರ್ಮದಲ್ಲಿ ಜನಿಸಿ ಹಿಂದೂಗಳ ಮನೆಯಲ್ಲಿ ಬೆಳೆದರೆ ಆತನನ್ನು ಹರಿಕೃಷ್ಣ ಎಂದು ಕರೆಯಲಾಗುತ್ತದೆ. ಇಲ್ಲಿ ಕೇವಲ ಹೆಸರು ಮುಖ್ಯವಾಗುವುದಿಲ್ಲ. ಆತನ ನಡೆ, ಗುಣಧರ್ಮ ಮುಖ್ಯವಾಗುತ್ತದೆ. ಅಂತಿಮವಾಗಿ ನಾವೆಲ್ಲ ಮನುಷ್ಯರು. ಮನುಷ್ಯತ್ವದ ಮಹತ್ವ ಅರಿತುಕೊಂಡು ನಡೆದರೆ ಬಹುತೇಕ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಪ್ರಯತ್ನಗಳು ನಿರಂತರವಾಗಿ ನಡೆಯಬೇಕು. ಅಂತರ್ಗತವಾಗಿ ವ್ಯಕ್ತಿ, ಜಾತಿ, ಧರ್ಮದ ಮಧ್ಯೆ ಸೌಹಾರ್ದ, ಪರಸ್ಪರ ಅರ್ಥೈಸಿಕೊಳ್ಳುವಿಕೆ ಸಾಧ್ಯವಾದರೆ ಎಲ್ಲರೂ ಅವರ ಧರ್ಮ, ಜಾತಿಯ ಆಚರಣೆ ಇಟ್ಟುಕೊಂಡೇ ಪರಿಸ್ಪರ ಸಾಮರಸ್ಯ ಸಹಬಾಳ್ವೆ ನಡೆಸಬಹುದು ಎಂಬುದೇ ಶ್ರೀ ಎಂ ಅವರ ವಾಕ್ಯ.