ಡಾ.ಗುರುಪ್ರಸಾದ ರಾವ್ ಹವಲ್ದಾರ್
ಲೇಖಕರು ಮತ್ತು ಉಪನ್ಯಾಸಕರು
dr.guruhs@gmail.com
“ಜಾತಿ ಪದ್ಧತಿ ಎನ್ನುವುದು ದೇಹಕ್ಕಿಂತ ಹೆಚ್ಚು ಸ್ವಭಾವಕ್ಕೆ ಸಂಬಂಧಿಸಿದ್ದು. ಹುಟ್ಟಿನಿಂದ ಒಬ್ಬನು ಯಾವ ಜಾತಿ ಎನ್ನುವುದು ಮುಖ್ಯವಲ್ಲ. ಅವನ ಸ್ವಭಾವವೇ ಅವನ ಜಾತಿಯ ನಿರ್ಣಾಯಕ. ಮೂಲತಃ ಜಾತಿಪದ್ಧತಿ ಎನ್ನುವುದು ಮನುಷ್ಯನ ಸ್ವಭಾವದ ವಿಭಾಗ. ಅಧ್ಯಾತ್ಮದ ಗಂಧ ಗಾಳಿಯೂ ಇಲ್ಲದ ವೇಷಮಾತ್ರ ಬ್ರಾಹ್ಮಣನಿಗಿಂತ ಆಧ್ಯಾತ್ಮದ ದಾರಿ ತುಳಿದ ಚಂಡಾಲ ಮೇಲು”
ಹದಿಮೂರನೆಯ ಶತಮಾನದಲ್ಲಿ ಸಂಪ್ರದಾಯಬದ್ಧ ಭಾರತದಲ್ಲಿ ಇಂಥಹ ಪ್ರಗತಿಶೀಲ ವಿಚಾರಗಳನ್ನು ಸಾರಿದ ಯತಿವಾರ್ಯ ಶ್ರೀ ಮದ್ವಾಆಚಾರ್ಯರು.
ಭಾರತದ ಆಚಾರ್ಯತ್ರಯರಲ್ಲಿ ಅದ್ವೈತ ಮತ ಸ್ಥಾಪಕರಾದ ಆಚಾರ್ಯ ಶ್ರೀಶಂಕರರು, ವಿಶಿಷ್ಟಾದ್ವೈತ ಮತ ಸ್ಥಾಪಕರಾದ ಆಚಾರ್ಯ ಶ್ರೀರಾಮಾನುಜರು ಮತ್ತು ‘ದ್ವೈತ’ವೆಂಬ ತತ್ವವಾದವನ್ನೂ, ಉಡುಪಿಯ ಶ್ರೀಕೃಷ್ಣನನ್ನೂ, ಉಡುಪಿಯ ಅಷ್ಟಮಠಗಳನ್ನೂ, ಅದ್ಭುತ ಜ್ಞಾನಭಂಡಾರವನ್ನೂ ನಮ್ಮ ನಾಡಿಗೆ ಕೊಟ್ಟ ಯತಿವರ್ಯ ಮಧ್ವರನ್ನು ನೆನೆಯುವ ದಿನವಿದು.
‘ಈ ವಿಶ್ವ ಬರಿಯ ಮಾಯೆ; ಭಗವಂತನೊಬ್ಬನೇ ಸತ್ಯ ಎಂದರು ಆಚಾರ್ಯ ಶಂಕರರು.’ ವಿಶ್ವಾತ್ಮನಾದ ಭಗವಂತನಿಗೆ ಈ ವಿಶ್ವವೆ ಶರೀರವಿದ್ದಂತೆ; ಆದರಿಂದ ಇದು ಸತ್ಯ ಎಂದರು ಆಚಾರ್ಯ ರಾಮಾನುಜರು. ‘ಈ ಜಗತ್ತು ಭಗವಂತನ ಲೀಲಾಸೃಷ್ಟಿ. ಇದನ್ನು ಅಪಲಾಪ ಮಾಡಿ ಅವನ ಮಹಿಮೆಗೆ ಅಪಚಾರ ಮಾಡಬೇಡಿ’ ಎಂದು ಆಚಾರ್ಯ ಮಧ್ವರು.
ಯಾವ ಭಾಷೆಯಲ್ಲಿ, ಯಾವ ಹೆಸರಿನಲ್ಲಿ ಕರೆದರೂ ಭಗವಂತನಿಗೆ ಕೇಳಿಸುತ್ತದೆ ಎಂದು ಜಗತ್ತಿನ ಮುಂದೆ ಘೋಷಿಸಿದ ಆಚಾರ್ಯ ಮಧ್ವರು. “ದೇವರನ್ನು ಹೇಗೆ ಕರೆಯಲಿ ಎಂದು ಗೊಂದಲವೇಕೆ ಬೇಕು. ಯಾವ ಭಾಷೆಯ ಯಾವ ಹೆಸರಿನಿಂದಲೂ ಅವನನ್ನು ಕರೆಯಬಹುದು.
ಏಕೆಂದರೆ ಅವನ ಹೆಸರಿಲ್ಲದ ಯಾವ ನುಡಿಯೂ ಈ ಜಗತ್ತಿನಲ್ಲಿಲ್ಲ. ನಮ್ಮ ಆಡು ಮಾತಷ್ಟೆ ಅಲ್ಲ – ಇಡಿಯ ಪ್ರಕೃತಿಯೇ ಭಗವಂತನ ಗುಣಗಾನಕ್ಕೆ ಶ್ರುತಿ ಹಿಡಿದಿದೆ. ಸಮುದ್ರದ ಮೊರೆತ, ಗಾಳಿಯ ಸುಯಿಲು, ಹಕ್ಕಿಗಳ ಚಿಲಿಪಿಲಿ, ಪ್ರಾಣಿಗಳ ಕೂಗು – ಜಗತ್ತಿನ ಎಲ್ಲ ನಾದವೂ ಭಗವಂತನ ಗುಣಗಾನ. ಎಲ್ಲ ನಾದದಲ್ಲಿ ಭಗವಂತನ ಹಿರಿಮೆಯನ್ನು, ಎಲ್ಲಡೆಯಲ್ಲೂ ಭಗವಂತನ ಇರವನ್ನು ಕಾಣಲು ಕಲಿಯಿರಿ; ಭಗವನ್ಮಯವಾಗಿ ಬಾಳಿರಿ.”
ಮದ್ವಾಚಾರ್ಯರು ಉಡುಪಿ ಹತ್ತಿರದ ಪಾಜಕ ಗ್ರಾಮದಲ್ಲಿ ಜನಿಸಿದರು. ಇವರು ಮಧ್ವಗೇಹಭಟ್ಟ ಮತ್ತು ವೇದವತಿಯರ ಮಗ: ವಿಷ್ಣು ಇವರ ಆರಾಧ್ಯ ದೈವ.
ಮಧ್ವಚಾರ್ಯರು ಬಾಲಕರಾಗಿದ್ದಾಗಲೇ ಅಪ್ರತಿಮ ಪಾಂಡಿತ್ಯವನ್ನು ತೋರಿದ್ದರೆಂದು ಹೇಳಲಾಗಿದೆ. ಗುರುಗಾಳದ ಅಚ್ಯುತ ಪ್ರೇಕ್ಷಕರಲ್ಲಿ ವೇದ ಮತ್ತು ಉಪನಿಷತ್ತುಗಳ ಅಭ್ಯಾಸವನ್ನು ಮಾಡಿದರು. ಇದೇ ಗುರುಗಳು ವಿಧ್ಯಾಭ್ಯಾಸ ಮಾಡುತ್ತಿರುವಾಗಲೇ ಮಧ್ವಚಾರ್ಯರು ಸ್ವತಂತ್ರವಾಗಿ ತಮ್ಮ ಜ್ಞಾನ ಶಕ್ತಿಯನ್ನು ಬೆಳೆಸಿಕೊಂಡರು ಹಾಗೂ ಧರ್ಮ ಶಾಸ್ತ್ರಗಳ ವಾದದಲ್ಲಿ ತಮ್ಮ ಗುರುಗಳನ್ನೇ ಸೋಲಿಸಿದರು
ಮಧ್ವರು ಪರಮಾದ್ಭುತ ದೇಹ ಹೊಂದಿದ್ದರು, 8 ಅಡಿ ಎತ್ತರದ, ನಿಖರವಾಗಿ 96 ಅಂಗುಲದ ಎತ್ತರದ ದೇಹ. ಬಂಗಾರದ ಮೈಬಣ್ಣ. ಪ್ರಖರ ಸೂರ್ಯನ ಹೊಳಪು. ಪೂರ್ಣ ಚಂದ್ರನ ಕಾಂತಿ. ಆ ದೇಹಕ್ಕೆ ತಕ್ಕುದಾದ ಹದಿಮೂರು ಮುಕ್ಕಾಲು ಅಂಗುಲದಷ್ಟು ಉದ್ದನೆಯ ಪಾದ. ಪದ್ಮಾಸನ ಹಾಕಿ ಕುಳಿತರೆ ಕಾವಿ ಬಟ್ಟೆಯ ಮೇಲೆ ನಸುಗೆಂಪಿನ ಕೆಂದಾವರೆಯನ್ನಿಟ್ಟಾದ್ದಾರೇನೋ ಎಂಬಂತಿರುವ ಪಾದ ತಲಗಳು.
ಮುಂಜಾವಿನ ಸೂರ್ಯನೇ ಇವರ ಕಾಲನಲ್ಲಿ ಹತ್ತುರೂಪ ತೊಟ್ಟು ನಿಂತಂತೆ ಪ್ರಕಾಶಮಾನವಾದ ಉಗುರುಗಳು. ನಮಸ್ಕರಿಸುವಾಗ ಅವರ ಕಾಲುಗಳನ್ನು ಗಟ್ಟಿಯಾಗಿ ಹಿಡಿದು ಪರೀಕ್ಷಿಸಿದರೂ ಹಿಮ್ಮಡಿಯಲ್ಲಿ ಗಂಟುಗಳಿರುವದೇ ಗೊತ್ತಾಗುತ್ತಿರಲಿಲ್ಲ, ಇನ್ನು ಕಾಣಿಸುವದಂತೂ ಬಹಳ ದೂರ. ದುಂಡಗೆ ದಪ್ಪಗಾಗಿ ಹೋಗುವ ನೀಳವಾದ ಕಾಲುಗಳು. ತೆಳುವಾದ ಹೊಟ್ಟೆ. ಆಳವಾದ ಪ್ರದಕ್ಷಿಣಾಕಾರದ ನಾಭಿ.
ಇಡಿಯ ಜಗತ್ತು ಎದುರಾಗಿ ಬಂದರೂ ಮಣಿಸಬಲ್ಲೆ ಎಂದು ಸಾರಿ ಹೇಳುವಂತೆ ಉಬ್ಬಿನಿಂತ ವಿಶಾಲವಾದ ಎದೆ. ಸುಮ್ಮನೆ ಸಹಜವಾಗಿ ನಿಂತರೆ ಮೊಣಕಾಲನ್ನು ಮುಟ್ಟುವ ದಪ್ಪ ಹಾವಿನಂತಹ ಕೈಗಳು. ಮೊಣಕೈಯಿಂದ ಲೆಕ್ಕ ಹಾಕಿದರೆ ಬೆರಳಿನವರೆಗೆ ಸರಿಯಾಗಿ ಎರಡು ಅಡಿಗಳು. ನುಣುಪಾದ ದುಂಡಗಿನ ಕಂಠ. ಅದಕ್ಕೆ ಶೋಭೆ ನೀಡುವಂತೆ ಸ್ವಾಭಾವಿಕವಾಗಿ ಮೂಡಿರುವ ಮೂರುಗೆರೆಗಳು. ಬೆಳೆದಿಂಗಳನ್ನು ಚೆಲ್ಲಿ ನಲಿವ ಸಾವಿರ ಪೂರ್ಣ ಚಂದ್ರರನ್ನು ನಿಲ್ಲಿಸಿದರೂ ಕಳೆಗುಂದದ, ಆ ಚಂದ್ರರ ಕಳೆಯನ್ನೇ ಮೀರಿಸುವ ಅದ್ಭುತ ಕಳೆಯನ್ನು ಹೊತ್ತು ನಿಂತ ಮುಖ. ಎಂಥ ದುಃಖದಲ್ಲಿ ಬಿದ್ದವನನ್ನೂ ಸಂತಸದಲ್ಲಿ ಮುಳುಗಿಸಿಬಿಡುವ ಮಂದಹಾಸ. ಕೆಂಪಾದ ತುಟಿಗಳು. ಮಾಣಿಕ್ಯದ ಕಟ್ಟಿನಲ್ಲಿ ಜೋಡಿಸಿಟ್ಟ ಮುತ್ತುಗಳಂತೆ, ಅವುಗಳ ಮಧ್ಯದಲ್ಲಿ ಹಲ್ಲುಗಳು.
ನೀಳವಾದ ನಾಸಿಕ. ಅನಂತ ಜ್ಞಾನದ ಹೊಳಪನ್ನು ತುಂಬಿಕೊಂಡ ಪ್ರಕಾಶಮಯವಾದ ಕಣ್ಣುಗಳು. ಸಂಶಯ, ಅಜ್ಞಾನ, ಭ್ರಾಂತಿಗಳನ್ನು ನಿರ್ಮೂಲ ಮಾಡಿ ಬಿಡುವ ನೋಟ. ತಿದ್ದಿ ತೀಡಿದಂತಹ ಹುಬ್ಬುಗಳು. ವಿಶಾಲವಾದ ಹಣೆ. ಇಡಿಯ ದೇಹಕ್ಕೆ ಮತ್ತಷ್ಟು ಮೆರಗು ನೀಡಿದ ಊರ್ಧ್ವ ಪುಂಢ್ರಗಳು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಸಕಲ ಸೌಂದರ್ಯನಿಧಿಯಾದ ಭಗವಂತನ ಪಡಿಯಚ್ಚು. ಅವನ ಸಾಕ್ಷಾತ್ ಪ್ರತಿಮೆ.
ಒಮ್ಮೆ ಕಣ್ಣು ನೆಟ್ಟರೆ ಹಿಂತೆಗೆಯಲಿಕ್ಕೆ ಸಾಧ್ಯವೇ ಇಲ್ಲದ ಮನಮೋಹಕ ಸೌಂದರ್ಯ. ಹೀಗಿದ್ದರು ನಮ್ಮ ಶ್ರೀ ಮದಾಚಾರ್ಯರು.
ತಮ್ಮ ತತ್ತ್ವವಾದವನ್ನು ಜನರಿಗೆ ತಿಳಿಯಪಡಿಸಲು ಆಚಾರ್ಯರು ‘ಪ್ರಸ್ಥಾನತ್ರಯ’ (ಗೀತೆ, ದಶೋಪನಿಷತ್ತುಗಳು ಮತ್ತು ಬ್ರಹ್ಮಸೂತ್ರ)ಗಳಿಗೆ ಭಾಷ್ಯ ಬರೆದರು. ಮಹಾಭಾರತ, ಪುರಾಣಗಳ ತಾತ್ತ್ವಿಕ ವಿಮರ್ಶೆಗಾಗಿ “ಮಹಾಭಾರತ ತಾತ್ಪರ್ಯ ನಿರ್ಣಯ” ಬರೆದರು. ಭಾಗವತಕ್ಕೆ ತಾತ್ಪರ್ಯ ಬರೆದರು. ಋಗ್ವೇದಕ್ಕೆ ಭಾಷ್ಯ ಬರೆದರು. ಯಮಕ ಕಾವ್ಯವೊಂದನ್ನೂ ಹಾಡು ಗಬ್ಬಗಳನ್ನೂ ರಚಿಸಿದರು. ಪುರಾಣ ಶ್ಲೋಕಗಳನ್ನು ಸಂಗ್ರಹಿಸಿ ‘ಕೃಷ್ಣಾಮೃತ ಮಹಾರ್ಣವ’ ಬರೆದರು. ವಾಸ್ತುಶಿಲ್ಪ -ಪ್ರತಿಮಾಶಿಲ್ಪದ ಅಪೂರ್ವ ವಿವರಗಳನ್ನೊಳಗೊಂಡ ‘ತಂತ್ರಸಾರಸಂಗ್ರಹ’ ಬರೆದರು.
ಅಪೂರ್ವ ಗಣಿತ ಗ್ರಂಥ ‘ತಿಥಿ ನಿರ್ಣಯ’ವನ್ನೂ ಬರೆದರು.
ಇನ್ನೂ ಅನೇಕ ಗ್ರಂಥಗಳನ್ನು ಬರೆದರು. ಇಷ್ಟೆ ಅಲ್ಲ, ಸಂಗೀತದಲ್ಲೂ ಅವರ ವಿದ್ವತ್ತು ಅಸಾಧಾರಣವಾಗಿತ್ತು. ಶ್ರೇಷ್ಠ ಗೇಯಕಾವ್ಯವಾದ ದ್ವಾದಶ ಸ್ತೋತ್ರಗಳ ರಚನೆ, ವಿಷ್ಣು ತತ್ವ ನಿರ್ಣಯ, ಭಾಗವತ ತಾತ್ಪರ್ಯ ನಿರ್ಣಯ, ಸೂತ್ರ ಭಾಷ್ಯ, ಮಾಯಾವಾದ ಖಂಡನಾ ಮುಂತಾದವು.
ಹೀಗೆ ಆಚಾರ್ಯರು ತಮ್ಮ ಜೀವನದುದ್ದಕ್ಕೂ ಭಗವಂತನ ಗುಣಗಾನವನ್ನು ಮಾಡಿದರು. ಈ ಕಾರ್ಯಕ್ಕೆ ಎದುರಾದ ಅಡ್ಡಿ-ಆತಂಕಗಳನ್ನು ಧೀರತೆಯಿಂದ ಎದುರಿಸಿದರು. ಚಿಕ್ಕ ಹುಡುಗನಾಗಿದ್ದಾಗಲೆ ತಮ್ಮನ್ನು ಕಡಿಯಲೆಂದೆ ಬಂದ ಕಾಳಿಂಗ ಸರ್ಪವನ್ನು ಕಾಲಲ್ಲಿ ಹೊಸಕಿ ಹಾಕಿದ ಆಚಾರ್ಯರಿಗೆ ಭಯವೆಂದರೇನೆಂದು ತಿಳಿಯದು.
ಅವರು ಯಾವ ಆತಂಕಕ್ಕೂ ಎದೆಗೆಡಲಿಲ್ಲ. ಎಂದೂ ಇನ್ನೊಬ್ಬರಿಗೆ ತಲೆಬಾಗಲಿಲ್ಲ. ತಮ್ಮ ಜೀವನದ ಉದ್ದೇಶ ಅವರಿಗೆ ಸ್ಫುಟವಾಗಿತ್ತು. ಅದನ್ನು ಸಾಧಿಸುವ ಬಗೆಯೂ ತಿಳಿದಿತ್ತು. ತಾವು ಧೀರ ಸಂನ್ಯಾಸಿಯಾಗಿ ಬದುಕಿದರು. ತನ್ನ ಬಳಿ ಬಂದವರಿಗೆಲ್ಲ ಭರವಸೆಯನ್ನು ತುಂಬಿದರು.
ಮಧ್ವಾಚಾರ್ಯರು ತಮ್ಮ ಸಿದ್ಧಾಂತದ ಪ್ರತಿಪಾದನೆಗಾಗಿ ತೀರ್ಥಯಾತ್ರೆ ಕೈಗೊಂಡು ಹಲವಾರು ಕಡೆಗಳಲ್ಲಿ ಚರ್ಚೆಯಲ್ಲಿ ಭಾಗವಹಿಸಿದರು. ಹಡಗಿನ ಗೋಪಿಚಂದನವೆಂಬ ಮಣ್ಣಿನ ಗುಡ್ಡೆಯಲ್ಲಿ ಶ್ರೀ ಕೃಷ್ಣನ ವಿಗ್ರಹವನ್ನು ತಂದು ಉಡುಪಿಯಲ್ಲಿ ಪ್ರತಿಷ್ಠಾಪಿಸಿದರು ಹಾಗೂ ಶ್ರೀ ಕೃಷ್ಣನ ಪೂಜೆಗಾಗಿ ಅಷ್ಟ ಮಠಗಳನ್ನು ಸ್ಥಾಪಿಸಿದರು.
ಅಷ್ಠಮಠಗಳು: ಪಲಿಮಾರು, ಅದಮಾರು, ಕೃಷ್ಣಾಪುರ, ಪುತ್ತಿಗೆ, ಶಿರೂರು, ಸೋದೆ, ಕಾಣೆಯೂರ ಮತ್ತು ಪೇಜಾವರ ಮಠಗಳು.
ಮಧ್ವಚಾರ್ಯರ ಸಿದ್ಧಾಂತವನ್ನು ಪ್ರಚಾರ ಮಾಡಿದ ಅವರ ಮುಖ್ಯ ಶಿಷ್ಯರೆಂದರೆ ಪದ್ಮನಾಭ ತೀರ್ಥರು, ನರಹರಿ ತೀರ್ಥರು, ವಿಜಯೇಂದ್ರ ತೀರ್ಥರು ಹಾಗೂ ವಾದಿರಾಜ ತೀರ್ಥರು.
79 ವರ್ಷಗಳ ಕಾಲ ಇಂಥ ಸಾರ್ಥಕ ಬದುಕನ್ನು ಬಾಳಿ ಪಿಂಗಲ ಸಂವತ್ಸರದ (ಕ್ರಿ.ಶ. 1317) ಮಾಘ ಶುದ್ಧನವಮಿಯಂದು ಎಲ್ಲ ಶಿಷ್ಯರನ್ನು ಬೀಳ್ಕೊಟ್ಟು ಬದರಿಗೆಂದು ತೆರಳಿದರು. ಅನಂತರ ಅವರನ್ನು ಕಂಡವರಿಲ್ಲ. ಇಂದಿಗೂ ಆ ದಿನವನ್ನು ‘ಮಧ್ವನವಮಿ’ಎಂದು ಆಚರಿಸಲಾಗುತ್ತಿದೆ.