ಶ್ರೀ ಸತ್ಯ ಸಾಯಿಬಾಬಾ

ಜಗತ್ತಿನಾದ್ಯಂತ ಅಸಂಖ್ಯಾತ ಭಕ್ತರನ್ನು ಹೊಂದಿರುವ ತಮ್ಮ ಸಮಾಜಸೇವೆಯ ಮೂಲಕ ಜನಮಾನಸದಲ್ಲಿ ನೆಲೆನಿಂತಿರುವ ಪುಟ್ಟಪರ್ತಿಯ ಶ್ರೀ ಸತ್ಯಸಾಯಿಬಾಬಾ ಅವರ 95 ನೇ ಜನ್ಮದಿನವಿಂದು.
ಈಗಿನ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಕುಗ್ರಾಮವಾದ ಪುಟ್ಟಪರ್ತಿಯಲ್ಲಿ 1926ರ ನವೆಂಬರ್ 23ರಂದು ಬಡ ಕುಟುಂಬವೊಂದರಲ್ಲಿ ಜನಿಸಿದ ಸತ್ಯ ಸಾಯಿಬಾಬಾ ಅವರ ಮೂಲ ಹೆಸರು ಸತ್ಯನಾರಾಯಣ ರಾಜು. ತಂದೆ ಪೆದ್ದ ವೆಂಕಪರಾಜು ಹಾಗೂ ತಾಯಿ ಈಶ್ವರಮ್ಮನವರು. ಅಸಾಮಾನ್ಯ ಪ್ರತಿಭಾವಂತರಾಗಿದ್ದ ಇವರು ಬಾಲ್ಯದಲ್ಲೇ ನಾಟಕ, ಸಂಗೀತ, ನೃತ್ಯ ಹಾಗೂ ಬರವಣಿಗೆಗಳಲ್ಲಿ  ಅಪಾರವಾದ ಆಸಕ್ತಿ ತಳೆದು, ಹಲವು ಕವಿತೆಗಳನ್ನೂ, ನಾಟಕಗಳನ್ನೂ  ರಚಿಸಿದ್ದರಂತೆ.

ಈ ಮೊದಲು ಬಾಲಕ ಸತ್ಯನಾರಾಯಣ ರಾಜುವಿಗೆ ಸಂಸ್ಕೃತ ಶ್ಲೋಕ, ಸಾಹಿತ್ಯದ ಗಂಧಗಾಳಿಯೇ ಇರಲಿಲ್ಲವಂತೆ. ಆದರೆ 1940ರಲ್ಲಿ ಆತನಿಗೆ ಚೇಳೊಂದು ಕಡಿದ ಬಳಿಕ ಆತ ಇದ್ದಕ್ಕಿದ್ದಂತೆ ಲೀಲಾಜಾಲವಾಗಿ ಸಂಸ್ಕೃತ ಶ್ಲೋಕಗಳನ್ನು ಹೇಳತೊಡಗಿದ ಎಂಬ ದಂತಕತೆ ವ್ಯಾಪಕವಾಗಿ ಪ್ರಚಲಿತದಲ್ಲಿತ್ತು.  1940ರ ಅಕ್ಟೋಬರ್ 20ರಂದು ಸತ್ಯನಾರಾಯಣ ರಾಜು ತಮ್ಮನ್ನು ಶಿರಡಿ ಸಾಯಿಬಾಬಾರ ಅವತಾರವೆಂದು ಘೋಷಿಸಿಕೊಂಡರು. ಅಂದ ಹಾಗೆ ಭಾರತೀಯ ಆಧ್ಯಾತ್ಮಿಕ ಮತ್ತು ಸಾಮಾಜಿಕ ಪುನರುತ್ಥಾನದಲ್ಲಿ ಮಹಾನ್ ಹೆಸರಾದ  ಶಿರಡಿ ಸಾಯಿಬಾಬಾ ಅವರು ದೇಹ ತ್ಯಾಗ ಮಾಡಿದ ವರ್ಷ 1918.

ಮುಂದೆ ಕೆಲವೇ ವರ್ಷಗಳಲ್ಲಿ ಬಾಲಕ ಸತ್ಯನಾರಾಯಣರ  ಜನಪ್ರಿಯತೆ ಸುತ್ತಮುತ್ತಲಿನ ಊರುಗಳಲ್ಲಿ ಹರಡಿತು. ಜನರು ತಂಡತಂಡವಾಗಿ ಬಂದು ಸತ್ಯನಾರಾಯಣ ರಾಜುವಿನ ಪ್ರವಚನಗಳನ್ನು ಆಲಿಸತೊಡಗಿದರು. ಬರ ಬರುತ್ತಾ ಈ ಪ್ರವಚನಗಳಲ್ಲಿ ಹಲವಾರು ಚಮತ್ಕಾರಗಳೂ ಸೇರ್ಪಡೆಯಾಗತೊಡಗಿದವು.  ಗಾಳಿಯಲ್ಲಿ ಕೈಯಾಡಿಸಿ ಶಿವಲಿಂಗವನ್ನು ತೋರುವುದು, ಭಸ್ಮವನ್ನು ಸೃಷ್ಟಿಸುವುದು ಮುಂತಾದ ಪವಾಡ ಚಮತ್ಕಾರಗಳು ಜನರನ್ನು ವಿಸ್ಮಿತಗೊಳಿಸತೊಡಗಿದವು.   ಸತ್ಯನಾರಾಯಣ ರಾಜು ಶೂನ್ಯದಲ್ಲಿ ಆಹಾರ ಮತ್ತು ಸಿಹಿತಿಂಡಿಗಳನ್ನು ಕೂಡಾ ಸೃಷ್ಟಿಸಬಲ್ಲನೆಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬತೊಡಗಿತು.  ಹೀಗೆ  ಸತ್ಯನಾರಾಯಣ ರಾಜುವಿನ ಅನುಯಾಯಿಗಳ ಸಂಖ್ಯೆ ನಿರಂತರವಾಗಿ ಏರತೊಡಗಿತ್ತು.

ದಿನ ವರುಷಗಳು ಉರುಳುತ್ತಿದ್ದಂತೆ ಸತ್ಯನಾರಾಯಣ ರಾಜು ತಮ್ಮ  ದೀರ್ಘಕೇಶ ಹಾಗೂ ಕೇಸರಿ ನಿಲುವಂಗಿಯೊಂದಿಗೆ ಪುಟ್ಟಪರ್ತಿಯ ಸಾಯಿಬಾಬಾ ಎಂದು ಪ್ರಖ್ಯಾತರಾಗತೊಡಗಿದರು. ಸಾಯಿಬಾಬಾ ಪ್ರಸಿದ್ಧಿಯ ಏರುಮುಖದ ಜೊತೆ ಜೊತೆಗೇ  ಕುಗ್ರಾಮವಾಗಿದ್ದ ಪುಟ್ಟಪರ್ತಿ ಗ್ರಾಮವು  ಒಂದು ಬೃಹತ್ ಯಾತ್ರಾಸ್ಥಳವಾಗಿ ರೂಪುಗೊಂಡಿತು. 

1944ರಲ್ಲಿ ಪುಟ್ಟಪರ್ತಿಯಲ್ಲಿ ದೇಗುಲವೊಂದನ್ನು ನಿರ್ಮಿಸಿದ ಸಾಯಿಬಾಬಾ, ನಾಲ್ಕು ವರ್ಷಗಳ ಬಳಿಕ ‘ಪ್ರಶಾಂತಿ ನಿಲಯಂ’ ಅನ್ನು ಸ್ಥಾಪಿಸಿ ಅಲ್ಲಿಯೇ ನೆಲೆಸಿದರು.
ಈ “ಪ್ರಸಂತಿ ನಿಲಯ” ಅಥವಾ “ಅತಿ ಹೆಚ್ಚು ವಿಶ್ರಾಂತಿ ಸ್ಥಳ” ಎಂಬ ಹೆಸರನ್ನು ಹೊಂದಿದೆ, ಇದು ಬೆಂಗಳೂರಿನ ಉತ್ತರಕ್ಕೆ 160 ಕಿ.ಮೀ ದೂರದಲ್ಲಿರುವ ಪುಟ್ಟಪರ್ತಿಯಲ್ಲಿದೆ. ಅದರ ಭೂಪ್ರದೇಶದಲ್ಲಿ “ಸಾಯಿ ಕುಲ್ವಂತ್” ಸಭಾಂಗಣವಿದೆ, ಅಲ್ಲಿ ಶಿಕ್ಷಕರೊಂದಿಗೆ ಸಭೆಗಳು ಮತ್ತು ಹಲವಾರು ದೇವಾಲಯಗಳು, ಹೋಟೆಲ್ ಸಂಕೀರ್ಣಗಳು ಮತ್ತು ಕ್ಯಾಂಟೀನ್ಗಳು, ಎಲ್ಲಾ ಧರ್ಮಗಳ ವಸ್ತುಸಂಗ್ರಹಾಲಯ ಮತ್ತು ಕನ್ಸರ್ಟ್ ಹಾಲ್, ಶಾಪಿಂಗ್ ಕಾಂಪ್ಲೆಕ್ಸ್ ಮತ್ತು ಕ್ಲಿನಿಕ್ ಇವೆ. ಆಶ್ರಮದ ಹತ್ತಿರ ವಿಶ್ವವಿದ್ಯಾಲಯ, ಸಾಯಿ ಸಂಸ್ಥೆಗಳು ಮತ್ತು ಶಾಲೆಗಳು, ಕ್ರೀಡಾಂಗಣ, ಜ್ಯೋತಿ ಚೈತನ್ಯ ವಸ್ತುಸಂಗ್ರಹಾಲಯ, ತಾರಾಲಯ, ಧ್ಯಾನ ಮರ, ಜೊತೆಗೆ ಬೃಹತ್ ಆಧುನಿಕ ಆಸ್ಪತ್ರೆ ಮತ್ತು ವಿಮಾನ ನಿಲ್ದಾಣವಿದೆ. ಅದೇ ರೀತಿ ಬಾಬಾವರು ಬೆಂಗಳೂರಿನ ಹೊರವಲಯದಲ್ಲಿರುವ ವೈಟ್‌ಫೀಲ್ಡಿನಲ್ಲಿ ಹಾಗೂ ತಮಿಳುನಾಡಿನ ಕೊಡೈಕೆನಾಲ್‌ನಲ್ಲೂ ಬಾಬಾ ತಮ್ಮ ಆಶ್ರಮಗಳನ್ನು ಸ್ಥಾಪಿಸಿದರು.
ಸತ್ಯಸಾಯಿಬಾಬಾ ಪ್ರತಿಪಾದಿಸುತ್ತಿದ್ದ ಮನುಕುಲದ ಶಾಂತಿ ಹಾಗೂ ಜಾತ್ಯತೀತ ನಿಲುವು ಅವರಿಗೆ ಎಲ್ಲ ಧರ್ಮಗಳಿಂದಲೂ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಟ್ಟಿತ್ತು. ವಿಶ್ವದ ಎಲ್ಲ ಧರ್ಮಗಳ ಸ್ಥಾಪಕರು ಪ್ರತಿಪಾದಿಸಿರುವ ಏಕದೇವತ್ವ ವಾದದಲ್ಲಿ ತಾವು ನಂಬಿಕೆಯಿರಿಸಿರುವುದಾಗಿ ಸಾಯಿಬಾಬಾ ತಮ್ಮ ಪ್ರವಚನಗಳಲ್ಲಿ ನುಡಿಯುತ್ತಿದ್ದರು.
ಸಾಯಿಬಾಬಾ ಅವರ ಪವಾಡಗಳ ಕುರಿತಾಗಿ ವಿಚಾರವಾದಿಗಳ ಟೀಕೆ ನಿರಂತರವಾಗಿ ಹರಿದುಬರುತ್ತಿತ್ತು. ಶೂನ್ಯದಿಂದ ನೀವು ವಿಭೂತಿಯನ್ನೂ, ಎಚ್ ಎಮ್ ಟಿ ಕೈ ಗಡಿಯಾರವನ್ನೂ, ಚಿನ್ನದ ಉಂಗುರಗಳನ್ನೂ ಸೃಷ್ಟಿಸುವುದಾದರೆ ಕುಂಬಳಕಾಯಿ ಸೃಷ್ಟಿಸಿ ತೋರಿ, ಜನಪ್ರಿಯ ವ್ಯಕ್ತಿಗಳಿಗೆ ಮಾತ್ರ ಚಿನ್ನದ ಉಂಗುರ ಯಾಕೆ.  ವಿಭೂತಿಯ ಬದಲು ಎಲ್ಲರಿಗೂ ಚಿನ್ನದ ಉಂಗುರವನ್ನೇ ನೀಡಿ  ಎಂಬ ಹಲವಾರು  ಸವಾಲುಗಳೂ ಮೂಡಿಬಂದವು.   ಮತ್ತೊಂದೆಡೆ ಅವರ ಭಕ್ತಾಭಿಮಾನಿಗಳ ಸಂಖ್ಯೆ ಮಾತ್ರ ನಿರಂತರವಾಗಿ ಏರುಮುಖದಲ್ಲಿ ಸಾಗುತ್ತಿತ್ತು. ಅವರ ಅಭಿಮಾನಿಗಳ ವಲಯದಲ್ಲಿ ಪ್ರಖ್ಯಾತ ಸಾಹಿತಿಗಳು, ವಿದ್ವಾಂಸರು, ಸಮಾಜದ ಶ್ರೇಷ್ಠ ಚಿಂತಕರೂ ಇದ್ದರೂ ಎಂಬುದು ಮತ್ತೊಂದು ವಿಚಾರ.

ಇವೆಲ್ಲವುಗಳ ಪರಿಧಿಯ ಆಚೆ  ಸಾಯಿಬಾಬಾ ತಮಗೆ ಸಂದ ಜನಪ್ರಿಯತೆ ಮತ್ತು ಆ ಜನಪ್ರಿಯತೆ ತಂದ ಐಶ್ವರ್ಯವನ್ನು ಸಮಾಜ ಸೇವಾ ಕಾರ್ಯಗಳಲ್ಲಿ ವಿನಿಯೋಗಿಸತೊಡಗಿದ್ದರು. ಪುಟ್ಟಪರ್ತಿ ಪಟ್ಟಣವಿರುವ ಅನಂತಪುರ ಜಿಲ್ಲೆಯು ಒಂದು ಕಾಲದಲ್ಲಿ ಬರದಿಂದ ತತ್ತರಿಸುತ್ತಿತ್ತು. ಅನಂತಪುರ ಜಿಲ್ಲೆಯ ನಿವಾಸಿಗಳಿಗೆ ಉಚಿತ ಕುಡಿಯುವ ನೀರಿನ ವ್ಯವಸ್ಥೆಯನ್ನು ಏರ್ಪಡಿಸಿದ ಖ್ಯಾತಿ ಬಾಬಾ ಅವರಿಗೆ ಸಂದಿತು. ಪುಟ್ಟಪರ್ತಿ ಆಶ್ರಮದಲ್ಲಿ ಬಡಬಗ್ಗರಿಗೆ ಕಡಿಮೆ ಬೆಲೆಯಲ್ಲಿ ಆಹಾರ ವಿತರಣಾ ವ್ಯವಸ್ಥೆ ಮೊದಲ್ಗೊಂಡಿತು. ಪುಟ್ಟಪರ್ತಿ, ವೈಟ್ ಫೀಲ್ಡ್  ಮಾತ್ರವಲ್ಲದೆ ಹಲವೆಡೆಗಳಲ್ಲಿ ಸುಸಜ್ಜಿತ ಆಸ್ಪತ್ರೆ, ವಿದ್ಯಾಕೇಂದ್ರಗಳು ಮೂಡಿಬರತೊಡಗಿದವು.   ಹಿಂದೊಮ್ಮೆ ಭಕ್ತಿಯ ಕೂಟವೆಂದರೆ ವಿಭೂತಿ ಬರುವ ಚಿತ್ರ ಪಟಗಳ ಮುಂದೆ ಭಜನೆ ಎನ್ನುತ್ತಿದ್ದ ಬಾಬಾ ಭಕ್ತ  ಬಳಗಗಳು  ಸಹಾ ಮುಂದಿನ ದಿನಗಳಲ್ಲಿ ಸಮಾಜದ ಶ್ರೇಯೋಭಿಲಾಶಿ ಕಾಯಕಗಳಲ್ಲಿ ಮುಂದಾಗುವ  ಬದಲಾವಣೆ ಕಾಣಬರತೊಡಗಿದವು. 

ಸತ್ಯಸಾಯಿಬಾಬಾ ಅವರ ಹೆಸರಿನಲ್ಲಿ ವಿವಿಧ ಊರು, ದೇಶಗಳಲ್ಲಿ ಸುಸಜ್ಜಿತ ಆಧ್ಯಾತ್ಮಿಕ ಕೇಂದ್ರಗಳಿವೆ. ಇಷ್ಟಿದ್ದೂ ಸಾಯಿಬಾಬಾ ಅವರು ಪ್ರವಾಸ ಕೈಗೊಂಡದ್ದು ಅತ್ಯಂತ ವಿರಳ. 1957ರಲ್ಲಿ  ಉತ್ತರ ಭಾರತದ ದೇಗುಲಗಳನ್ನು ಸಂದರ್ಶಿಸಿದ್ದು ಮತ್ತು  1968ರ ಜೂನ್‌ನಲ್ಲಿ ಉಗಾಂಡಕ್ಕೆ ಭೇಟಿ ನೀಡಿದ್ದು ಬಿಟ್ಟರೆ ಅವರು ಹೊರಹೋದದ್ದು ತುಂಬಾ ಅಪರೂಪವಂತೆ.

ಯಾವುದೇ ಒಂದು ವ್ಯವಸ್ಥೆ ಬೆಳೆದ ಹಾಗೆಲ್ಲಾ ಅದು ಬೆಳೆಸುವ ಐಶ್ವರ್ಯದ ಜೊತೆ ಜೊತೆಗೆ ಅದರ ಹಿಡಿತ ಸಂಪಾದಿಸ ಬಯಸುವ ಮಹತ್ವಾಕಾಂಕ್ಷಿಗಳನ್ನೂ, ಸ್ಪರ್ಧೆ, ಈರ್ಷೆ, ಕ್ರೋಧಗಳ ದಳ್ಳುರಿಯನ್ನೂ ಒಳಗೊಳಗೇ ಹೊಗೆಯಾಡಿಸುತ್ತಿರುತ್ತದೆ.  ಸಾಯಿಬಾಬಾ ಅವರ ಸಾಮ್ರಾಜ್ಯದಲ್ಲಿ ಕೂಡಾ ಇಂತಹ ಧೂಮದ ಹೊಗೆ ತುಂಬಿಕೊಂಡು ಅದು ಒಮ್ಮೆ ಅವರನ್ನೇ ಕೊಲ್ಲುವ ಪ್ರಯತ್ನಕ್ಕೂ ಧಾಪುಗಾಲಿಟ್ಟಿತ್ತು. 

ಮತ್ತೊಂದು ಮನಸೆಳೆಯುವ ವಿಚಾರವೆಂದರೆ ಸಾಯಿಬಾಬಾ ಅವರ ವ್ಯವಸ್ಥೆಯಲ್ಲಿ ನಡೆಯುತ್ತಿದ್ದ ಸಂಗೀತ ಮತ್ತು ಸಾಂಸ್ಕೃತಿಕ ಹಬ್ಬಗಳು.  ಈ ಹಬ್ಬಗಳಲ್ಲಿ ನಡೆಯುತ್ತಿದ್ದ ಕಚೇರಿಗಳು, ಪ್ರದರ್ಶನಗಳು ಅತ್ಯಂತ ಮನಮೋಹಕವಾಗಿದ್ದು ಅದು ಆಕರ್ಷಿಸುತ್ತಿದ್ದ ಮತ್ತು ತನ್ನ ಕಾಂತಿಯನ್ನು ಪಸರಿಸುತ್ತಿದ್ದ ಜನಸಾಗರದ ವ್ಯಾಪ್ತಿ ಮತ್ತು ಸುಸಜ್ಜಿತ ವ್ಯವಸ್ಥೆ ಅಚ್ಚರಿ ಹುಟ್ಟಿಸುವಷ್ಟರ ಮಟ್ಟಿನದೆನಿಸಿತ್ತು. 
ಸತ್ಯಸಾಯಿಬಾಬಾ ಅವರು ಈ ಲೋಕವನ್ನಗಲಿದ್ದು ಏಪ್ರಿಲ್ 24, 2011ರಂದು.  ಒಮ್ಮೆ ಕುಗ್ರಾಮಗಳಂತಿದ್ದ ಪುಟ್ಟಪರ್ತಿ, ವೈಟ್ ಫೀಲ್ಡ್ ಅಂತಹ ಪ್ರದೇಶಗಳು,  ಸಾಯಿಬಾಬಾ ಅವರ ಜೀವಿತ ಕಾಲದಲ್ಲಿ ಒಂದು ರೀತಿಯ ಸಾಮ್ರಾಜ್ಯದಂತೆ ತುಂಬಿಕೊಂಡಿದ್ದವು.  ಇಂದು ಅವರಿಲ್ಲದ ಆ ಊರುಗಳು ಒಂದು ರೀತಿಯ ಮೌನಕ್ಕೆ ಮೊರೆಹೋದಂತಿವೆ. ಅದರೂ ಇಂದಿಗೂ ದೇಶ ವಿದೇಶಗಳಿಂದ ಅವರ ಭಕ್ತರು ಪ್ರಶಾಂತಿ ನಿಲಯ ಭೇಟಿ ನೀಡುತ್ತಾರೆ, ಅವರಿಲ್ಲದಿದ್ದರೂ ಎಂದಿನಂತೆ ಸಾಮಾಜಿಕ ಕಾರ್ಯಗಳನ್ನು ಶ್ರೀ ಸತ್ಯಸಾಯಿ ಟ್ರಸ್ಟ್ ನಡೆಸಿಕೊಂಡು ಹೋಗುತ್ತಿದೆ.

– ಡಾ.ಗುರುಪ್ರಸಾದ ರಾವ್ ಹವಲ್ದಾರ್
ಲೇಖಕರು ಮತ್ತು ಉಪನ್ಯಾಸಕರು
dr.guruhs@gmail.com