ಬೆಂಗಳೂರು: ಎಸ್.ಎಸ್.ಎಲ್.ಸಿ. ಫಲಿತಾಂಶ ಪ್ರಕಟವಾಗಿದ್ದು, ಒಬ್ಬೇ ಒಬ್ಬ ವಿದ್ಯಾರ್ಥಿ ಪೇಲ್ ಆಗಿದ್ದು ಪರೀಕ್ಷೆ ಬರೆದಿದ್ದ ಎಲ್ಲ ವಿದ್ಯಾರ್ಥಿಗಳು ಪಾಸಾಗಿದ್ದಾರೆ.
ಬೆಂಗಳೂರಲ್ಲಿ ಸೋಮವಾರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವ ಸಚಿವ ಬಿ.ಸಿ.ನಾಗೇಶ್ ಅವರು ಸುದ್ದಿಗೋಷ್ಠಿ ನಡೆಸಿ ಎಸ್.ಎಸ್.ಎಲ್.ಸಿ. ಫಲಿತಾಂಶ ಪ್ರಕಟಿಸಿದರು.
ಶೇ. 99.9ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದು, ಕೋವಿಡ್ ನಡುವೆಯೂ ಇದೊಂದು ದಾಖಲೆಯಾಗಿದೆ.
ತಾನು ಪರೀಕ್ಷೆ ಬರೆಯುವ ಬದಲು ಇನ್ನೊಬ್ಬ ಪರೀಕ್ಷೆ ಬರೆದ ಕಾರಣಕ್ಕೆ ಒಬ್ಬ ವಿದ್ಯಾರ್ಥಿಯನ್ನು ನಪಾಸು ಮಾಡಲಾಗಿದೆ.
ಇದೇ ಮೊದಲ ಬಾರಿಗೆ ಅಂದರೆ ರಾಜ್ಯದ ಎಸ್.ಎಸ್.ಎಲ್.ಸಿ ಇತಿಹಾಸದಲ್ಲೇ ಈ ವರ್ಷ ವಿಭಿನ್ನವಾಗಿ ಪರೀಕ್ಷೆ ನಡೆದಿದ್ದು, ಮೂರು ವಾರಗಳ ಹಿಂದೆ ಓಎಂಆರ್ ಶೀಟ್ ಆಧಾರಿತ ಪರೀಕ್ಷೆ ಫಲಿತಾಂಶವನ್ನು ಹೊಸದಾಗಿ ಅಧಿಕಾರ ವಹಿಸಿಕೊಂಡಿರುವ ಶಿಕ್ಷಣ ಖಾತೆ ಸಚಿವ ಸಚಿವ ಬಿ.ಸಿ.ನಾಗೇಶ್ ಪ್ರಕಟಿಸಿದರು.
ಕೊರೊನ ಸೋಂಕಿನ ನಡುವೆಯೂ ಪರೀಕ್ಷೆ ಬರೆದಿರುವ ಎಲ್ಲ ವಿದ್ಯಾರ್ಥಿಗಳನ್ನು ಪಾಸ್ ಮಾಡುವುದಾಗಿ ಹಿಂದಿನ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದರು. ಅದರಂತೆಯೇ ಎಲ್ಲ ಮಕ್ಕಳನ್ನು ಪಾಸ್ ಮಾಡಲಾಗಿದೆ ಎಂದು ನಾಗೇಶ್ ಹೇಳಿದರು.
ಕೇವಲ ಒಬ್ಬ ವಿದ್ಯಾರ್ಥಿಯನ್ನು ಹೊರತುಪಡಿಸಿ ಉಳಿದೆಲ್ಲ ಮಕ್ಕಳನ್ನು ಉತ್ತೀರ್ಣ ಮಾಡಲಾಗಿದೆ. ಒಟ್ಟಾರೆ ಫಲಿತಾಂಶದ ಪ್ರಮಾಣ ಶೇ. 99.9ರಷ್ಟು ಎಂದರು.
ಎ ಪ್ಲಸ್ ಗ್ರೇಡ್ ನಲ್ಲಿ 1,28,931 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇನ್ನು ಎ ಗ್ರೇಡ್ ನಲ್ಲಿ 2,50,317, ಬಿ ಗ್ರೇಡ್‍ನಲ್ಲಿ 2,87,684, ಸಿ ಗ್ರೇಡ್ ನಲ್ಲಿ 1,13,610 ಲಕ್ಷ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಈ ಲೆಕ್ಕದಲ್ಲಿ 8.76 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಒಬ್ಬ ವಿದ್ಯಾರ್ಥಿ ಬಿಟ್ಟು ಎಲ್ಲರೂ ಉತ್ತೀರ್ಣರಾಗಿದ್ದಾರೆ.
ಉಳಿದಂತೆ 157 ಮಕ್ಕಳು 625ಕ್ಕೆ 625 ಅಂಕ ಪಡೆದಿದ್ದು, 289 ವಿದ್ಯಾರ್ಥಿಗಳು 625ಕ್ಕೆ 623 ಅಂಕ ಪಡೆದಿದ್ದಾರೆ. ಇಬ್ಬರು ವಿದ್ಯಾರ್ಥಿಗಳಿಗೆ 622 ಅಂಕ ಸಿಕ್ಕಿದೆ. 449 ವಿದ್ಯಾರ್ಥಿಗಳು 621 ಅಂಕ ಪಡೆದಿದ್ದಾರೆ. ಇನ್ನು 28 ವಿದ್ಯಾರ್ಥಿಗಳು 620 ಅಂಕ ಪಡೆದು ತೇರ್ಗಡೆಯಾಗಿದ್ದಾರೆ.
100ಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿಗಳು
ವಿವಿಧ ವಿಷಯಗಳಲ್ಲಿ ಕೆಲ ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕಗಳನ್ನು ಪಡೆದಿದ್ದಾರೆ.
ಕನ್ನಡದಲ್ಲಿ 25,702 ವಿದ್ಯಾರ್ಥಿಗಳು 125ಕ್ಕೆ 125ಕ್ಕೆ ಅಂಕ ಪಡೆದಿದ್ದಾರೆ. ಅದೇ ರೀತಿ ದ್ವಿತೀಯ ಭಾಷೆ ಇಂಗ್ಲಿಷ್‍ನಲ್ಲಿ 36,628, ತೃತೀಯ ಭಾಷೆ ಹಿಂದಿಯಲ್ಲಿ 36,776, ಗಣಿತದಲ್ಲಿ 6,321, ವಿಜ್ಞಾನದಲ್ಲಿ 3,649, ಸಮಾಜ ವಿಜ್ಞಾನದಲ್ಲಿ 9,367 ವಿದ್ಯಾರ್ಥಿಗಳು 100ಕ್ಕೆ ನೂರು ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ. ಪಾಸಾಗಿರುವ ಮಕ್ಕಳಲ್ಲಿ ಶೇ. 9ರಷ್ಟು ಮಂದಿ ಕೃಪಾಂಕ ಪಡೆದು ಉತ್ತೀರ್ಣರಾಗಿದ್ದಾರೆ.
ಮೊಬೈಲ್‍ಗೆ ರಿಸಲ್ಟ್
ಸೋಮವಾರ ಸಂಜೆಯೊಳಗೇ ಪಾಸಾಗಿರುವ ಪ್ರತಿ ವಿದ್ಯಾರ್ಥಿ ಮೊಬೈಲ್ ಸಂಖ್ಯೆಗೆ ಫಲಿತಾಂಶ ಬರಲಿದೆ. ವೆಬ್‍ನಲ್ಲಿ ನೋಡಲು ಸಾಧ್ಯವಾಗದಿದ್ದರೆ ಎಸ್‍ಎಂಎಸ್ ಮೂಲಕವೇ ನೋಡಿಕೊಳ್ಳಬಹುದು.
ಈ ವೆಬ್‍ಗಳಲ್ಲಿ ಫಲಿತಾಂಶ ನೋಡಬಹುದು
kseeb.kar.nic.in
karresults.nic.in
ಶುಭ ಕೋರಿದ ಸಿಎಂ
ಹತ್ತನೇ ತರಗತಿಯಲ್ಲಿ ಉತ್ತೀರ್ಣರಾಗಿರುವ ಎಲ್ಲ ವಿದ್ಯಾರ್ಥಿಗಳಿಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಭ ಹಾರೈಸಿದ್ದಾರೆ.