ರಾಮನಗರ: ಹಾಲಿನ ಜೊತೆಗೆ ಹಾಲಿನ ಪೂರಕ ಉತ್ಪನ್ನಗಳನ್ನು ಉತ್ಪಾದಿಸಲು ಹೆಚ್ಚಿನ ಒತ್ತು ನೀಡುವುದರಿಂದ ರೈತರಿಗೆ ಅಧಿಕ ಲಾಭ ದೊರೆತು ಅವರ ಏಳಿಗೆಗೆ ಸಹಾಯಕವಾಗಲಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರು ತಿಳಿಸಿದರು.
ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನಲ್ಲಿರುವ ನೂತನ ಹಾಲು ಸಂಸ್ಕರಣಾ ಮತ್ತು ಹಾಲಿನ ಪುಡಿ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಹೈನುಗಾರಿಕೆ ಉತ್ಪನ್ನಗಳನ್ನು ಹೆಚ್ಚಾಗಿ ಉತ್ಪಾದಿಸುವುದರಿಂದ ರೈತರಿಗೆ ಅಧಿಕ ಆದಾಯ ಸಿಗುತ್ತದೆ. ಹಾಲಿನ ಜೊತೆಗೆ ಅದರ ಉಪ ಉತ್ಪನ್ನಗಳು ಹಾಲು ಉತ್ಪಾದಕರಿಗೆ ಅಧಿಕ ವರಮಾನ ತಂದುಕೊಡುವಲ್ಲಿ ನೆರವಾಗಲಿದೆ. ಇದು ರೈತರ ವೈಯಕ್ತಿಕ ಏಳಿಗೆಗೂ ಸಹಾಯಕ ಎಂದು ಸಚಿವರು ಅಭಿಪ್ರಾಯಪಟ್ಟರು.
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನಲ್ಲಿ ಕನ್ನಮಂಗಲದಲ್ಲಿ ಒಟ್ಟು 125 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಹಾಲು,ಸಂಸ್ಕರಣಾ ಮತ್ತು ಹಾಲಿನ ಪುಡಿ ಉತ್ಪಾದಿಸುವ ಘಟಕ ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿದೆ. ಸದ್ಯಕ್ಕೆ ಇಡೀ ದೇಶದಲ್ಲೇ ಅತ್ಯುತ್ತಮ ಮತ್ತು ನಂಬರ್ ಒನ್ ಹಾಲಿನ ಪುಡಿ ಘಟಕ ಎನಿಸಿದೆ ಎಂದು ಸಹಕಾರ ಸಚಿವರು ತಿಳಿಸಿದರು.