ಮೈಸೂರು: ಡ್ರಗ್ಸ್ ದಂಧೆಯಲ್ಲಿ ಪಾಲ್ಗೊಂಡವರಿಗೆಲ್ಲ ಶಿಕ್ಷೆ ಖಚಿತ ಮೈಸೂರು ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ನಗರದಲ್ಲಿ ಶನಿವಾರ ಸಚಿವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಡ್ರಗ್ಸ್ ದಂಧೆಯಲ್ಲಿ ಭಾಗಿಯಾದವರು ಎಷ್ಟೇ ಪ್ರಭಾವಿ ವ್ಯಕ್ತಿಗಳಾದರೂ ಶಿಕ್ಷೆ ಖಚಿತ ಎಂದು ಸಚಿವರು ತಿಳಿಸಿದರು.
ಸಿನಿಮಾ ರಂಗದಲ್ಲಿರುವವರು ಯುವ ಜನತೆಗೆ ಮಾದರಿಯಾಗಬೇಕು. ಅದನ್ನು ಬಿಟ್ಟು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಯುವ ಜನಾಂಗ ಹಾಳಾಗಬಾರದು ಎನ್ನುವ ದೃಷ್ಟಿಯಿಂದ ಡ್ರಗ್ಸ್ ದಂಧೆಯನ್ನು ಮಟ್ಟಹಾಕಲು ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಲಿದೆ ಎಂದು ಸಚಿವ ಸೋಮಶೇಖರ್ ಹೇಳಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಎಸ್.ಟಿ.ಎಸ್. ಈ ಪ್ರಕರಣದಲ್ಲಿ ರಾಜಿ ಮಾತೇ ಇಲ್ಲ ಎಂದು ಹೇಳಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಈ ಬಗ್ಗೆ ಕಾನೂನಿನ ಕ್ರಮವನ್ನು ತಪ್ಪಿತಸ್ಥರ ವಿರುದ್ಧ ಕೈಗೊಳ್ಳಲಿದ್ದಾರೆಂದರು.
ಸೆ. 8ಕ್ಕೆ ದಸರಾ ಉತ್ಸವ ಹೈಪರ್ ಕಮಿಟಿ ಸಭೆ ನಡೆಯಲಿದೆ. ನಂತರ ಮೈಸೂರಿನಲ್ಲಿ ಸಭೆ ನಡೆಸಿ ದಸರಾ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರ ಸರ್ಕಾರ ಉರುಳಿಸಿದ್ದೇ ಡ್ರಗ್ಸ್ ಹಣದಿಂದ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ ಅವರೇ ಮುಖ್ಯ ಮಂತ್ರಿಯಾಗಿದ್ದರು. ಅವರಿಗೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುವ ಪವರ್ ಇತ್ತು. ಯಾಕೆ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಸಚಿವ ಸೋಮಶೇಖರ್ ಪ್ರಶ್ನಿಸಿ ಅವರಿಗೆ ಅಧಿಕಾರದಲ್ಲಿದ್ದಾಗ ಗೊತ್ತಾಗಿಲ್ಲವಾ ಈಗ ಅಧಿಕಾರ ಇಲ್ಲ ಅದಕ್ಕೆ ಮಾತಾಡ್ತಿದ್ದಾರೆಂದರು.