ಬೆಂಗಳೂರು: ಸಾಲ ಬಾಕಿ ಉಳಿಸಿಕೊಂಡಿರುವ ಸಕ್ಕರೆ ಕಾರ್ಖಾನೆಗಳ ವೈಯುಕ್ತಿಕ ಮಾಹಿತಿ ಕೇಳಿದ್ದು, ಕಾರ್ಖಾನೆಯ ಆಸ್ತಿ, ಸಾಮರ್ಥ್ಯಗಳ ಸಹಿತ ಎಲ್ಲ ವಿವರಗಳನ್ನು ವಾರದೊಳಗೆ ಸಲ್ಲಿಸುವಂತೆ ಡಿಸಿಸಿ ಬ್ಯಾಂಕ್ಗಳಿಗೆ ಸೂಚನೆ ನೀಡಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ಗಳ ಪ್ರಗತಿ ಪರಿಶೀಲನೆ ಸಭೆ ಬಳಿಕ ಸಚಿವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ರು.
119 ಸಕ್ಕರೆ ಕಾರ್ಖಾನೆಗಳಿಗೆ 16 ಡಿಸಿಸಿ ಬ್ಯಾಂಕ್ ಮತ್ತು ಅಪೆಕ್ಸ್ ಬ್ಯಾಂಕ್ಗಳಿಂದ 5229 ಕೋಟಿ ರೂಪಾಯಿ ಸಾಲ ನೀಡಲಾಗಿದೆ. ಅದರಲ್ಲಿ 4864 ಕೋಟಿ ರೂಪಾಯಿ ಸಾಲ ಚಾಲ್ತಿಯಲ್ಲಿವೆ. ಆದರೆ, 365 ಕೋಟಿ ರೂಪಾಯಿ ಅನುತ್ಪಾದಕ ಆಸ್ತಿ (ಎನ್ ಪಿ ಎ) ಆಗಿದೆ. ಹೀಗಾಗಿ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒಂದು ವಾರದೊಳಗೆ ಸಹಕಾರ ಇಲಾಖೆಗೆ ಕೊಡಲು ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
ಈಗ ಯಾವ ಕಾರ್ಖಾನೆಯಿಂದ ಎಷ್ಟು ಸಾಲ ಬಾಕಿ ಇದೆ? ಯಾರು ಕಾರ್ಖಾನೆ ಮಾಲೀಕರು? ಯಾವ ಸಮಯದಲ್ಲಿ ಸಾಲ ಕೊಡಲಾಗಿದೆ ಎಂಬ ಬಗ್ಗೆ ಮಾಹಿತಿಯನ್ನು ಕೇಳಲಾಗಿದೆ. ಈ ವರದಿ ಬಂದ ಬಳಿಕ ಮಾಧ್ಯಮಗಳಿಗೆ ಖುದ್ದು ನಾನೇ ಸಂಪೂರ್ಣ ವಿವರಗಳ ಮಾಹಿತಿ ನೀಡುತ್ತೇನೆ. ಇಲ್ಲಿ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸಹಕಾರ ಸಚಿವರು ತಿಳಿಸಿದರು.
ಜೊತೆಗೆ ಇನ್ನು ಮುಂದೆ ಸಕ್ಕರೆ ಕಾರ್ಖಾನೆಗಳಿಗೆ ಸಾಲ ನೀಡಬೇಕೆಂದರೆ ಮಾನದಂಡ ನಿಗದಿಯಾಗಬೇಕು. ಅವುಗಳ ಸಾಮರ್ಥ್ಯವನ್ನು ಅರಿಯುವ ಕೆಲಸವಾಗಬೇಕಿದ್ದು, ಆ ನಿಟ್ಟಿನಲ್ಲಿ ರೂಪುರೇಷೆ ನೀಡಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಸರ್ಕಾರದ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್, ಸಹಕಾರ ನಿಬಂಧಕರಾದ ಜಿಯಾವುಲ್ಲ, 21 ಡಿಸಿಸಿ ಬ್ಯಾಂಕ್ ಹಾಗೂ ಅಪೆಕ್ಸ್ ಬ್ಯಾಂಕ್ ನ ವ್ಯವಸ್ಥಾಪಕ ನಿರ್ದೇಶಕರು ಸಭೆಯಲ್ಲಿ ಭಾಗವಹಿಸಿದ್ದರು.