ಸುಳ್ಳು ದಾಖಲೆ ಪತ್ರ ಸೃಷ್ಠಿಸಿ ಸರ್ಕಾರದ ವಿರುದ್ಧ ಷಡ್ಯಂತ್ರ -ಸಚಿವ ಕೃಷ್ಣಭೈರೇಗೌಡ

ಮೈಸೂರು: ನಮ್ಮ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುವ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಆರೋಪಿಸಿದರು.

ಮೈಸೂರಿನಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು,ಸಚಿವ ಚಲುವರಾಯಸ್ವಾಮಿ ವಿರುದ್ಧ ಅಧಿಕಾರಿಗಳು ರಾಜ್ಯಪಾಲರಿಗೆ ಪತ್ರ ಬರೆದ ವಿಚಾರಕ್ಕೆ ಪ್ರತಿಕ್ರಿಯಿಸಿದರು.

ಶಾಸಕರ ಪತ್ರ ಸಹ ನಕಲಿ ಮಾಡಿದ್ದರು. ನಕಲಿ ಪತ್ರ ಅಂತ ಗೊತ್ತಿದ್ದರೂ ವ್ಯಾಪಕ ಪ್ರಚಾರ ಸಿಕ್ಕಿತು. ಚಲುವರಾಯಸ್ವಾಮಿ‌ ವಿಚಾರದಲ್ಲೂ ಇದನ್ನು ಈಗಾಗಲೇ ಅಧಿಕಾರಿಗಳೇ ಸ್ಪಷ್ಟ ಪಡಿಸಿದ್ದಾರೆ.

ಪತ್ರ ನಾವು ಬರೆದಿಲ್ಲ, ಅದು ನಕಲಿ ಅಂತ ಹೇಳಿದ್ದಾರೆ. ಈ ವಿಚಾರವೇ ನಮಗೆ ಗೊತ್ತಿಲ್ಲ ಅಂತಾ ಅಧಿಕಾರಿಗಳೂ ಹೇಳಿದ್ದಾರೆ.  ನಕಲಿ ದಾಖಲೆ ಸೃಷ್ಟಿ ಮಾಡಿ ಜನರಿಗೆ ಸರ್ಕಾರದ ಮೇಲೆ ಕೆಟ್ಟ ಹೆಸರು ತರಲು ಕೆಲವರು ಪ್ರಯತ್ನ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಇದೊಂದು ರಾಜಕೀಯ ಆಟ. ಇದನ್ನ ರಾಜಕೀಯವಾಗಿಯೇ ಫೇಸ್ ಮಾಡುತ್ತೇವೆ. ಅಧಿಕಾರಿಗಳಿಗೆ ತೊಂದರೆ ಆಗಿದ್ದರೆ ನೇರವಾಗಿ ಲೋಕಯುಕ್ತಗೆ‌ ದೂರು ನೀಡಬಹುದು ಎಂದು ಹೇಳಿದರು.

ಕೊಟ್ಟ ಮಾತನ್ನ ರಾಜ್ಯ ಸರ್ಕಾರ ಈಡೇರಿಸಿದೆ. ಐದು ವರ್ಷವಾದರೂ ಗ್ಯಾರೆಂಟಿ ಯೋಜನೆ ಜಾರಿ ಮಾಡಲು ಸಾಧ್ಯವಿಲ್ಲ ಎಂದಿದ್ದರು. ಆದರೆ ನಮ್ಮ ಸರ್ಕಾರ ಬಂದ ಎರೆಡೇ ತಿಂಗಳಲ್ಲಿ ಗ್ಯಾರೆಂಟಿ ಯೋಜನೆ ಜಾರಿಗೆ ತಂದಿದ್ದೇವೆ ಎಂದು ಹೇಳಿದರು.

ಮೈಸೂರಿನಲ್ಲಿ ವಿಭಾಗೀಯ ಮಟ್ಟದ ಸಭೆ ನಡೆಸಲು ಬಂದಿದ್ದೇನೆ. ಹೊಸ ಸರ್ಕಾರ ಬಂದ ಮೇಲೆ ಒಂದು ಒಳ್ಳೆಯ ಆಡಳಿತ ಕೊಡುವ ದೃಷ್ಟಿಯಿಂದ ಆಡಳಿತವನ್ನ ಚುರುಕುಗೊಳಿಸುವ ಕೆಲಸ ಮಾಡುತ್ತಿದ್ದೇವೆ ಎಂದು ‌ಕೃಷ್ಣಬೈರೆಗೌಡ‌ ತಿಳಿಸಿದರು.

ಮೈಸೂರು ವಿಭಾಗೀಯ ಎಲ್ಲಾ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ಮಾಡುತ್ತಿದ್ದೇನೆ ಎಂದು ಕಂದಾಯ ಸಚಿವ ಹೇಳಿದರು.

ರಾಜ್ಯದಲ್ಲಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಕಂದಾಯ ಅದಾಲತ್ ಮಾಡುವ ಚಿಂತನೆ ಇದೆ. ಸಣ್ಣಪುಟ್ಟ ವ್ಯಾಜ್ಯಗಳನ್ನ ಅಲ್ಲೇ ಪರಿಹರಿಸಿಕೊಳ್ಳಬಹುದು ಎಂದು ಹೇಳಿದರು.

ಸರ್ಕಾರಿ ಜಮೀನು ಒತ್ತವರಿ ತೆರವಿಗೆ ಸರ್ಕಾರದಿಂದ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಅಧಿಕಾರಿಗಳಿಗೆ ಫ್ರೀ ಹ್ಯಾಂಡ್ ಕೊಡುವ ಜೊತೆಗೆ ಶೀಘ್ರ ಕೆಲಸ ಮಾಡಿಸುವ ನಿಟ್ಟಿನಲ್ಲಿ ನಾವು ಒತ್ತಡ ಹಾಕುತ್ತೇವೆ ಎಂದು ಸಚಿವರು ತಿಳಿಸಿದರು.