ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಒಬ್ಬರ ಬಗ್ಗೆ ಸುಳ್ಳು ಸುದ್ದಿ ಹರಡಿದರೆ, ಅನಗತ್ಯ ಆರೋಪಗಳು, ಅಪಪ್ರಚಾರ, ತೇಜೋವಧೆ ಮಾಡಿದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.
ಕರಾವಳಿ ಜಿಲ್ಲೆಗಳ ಪ್ರವಾಸ ಕೈಗೊಂಡಿರುವ ಸಿಎಂ ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.
ಸರ್ಕಾರ ವಿರುದ್ಧವಾಗಲಿ, ವ್ಯಕ್ತಿಗಳ ವಿರುದ್ಧವಾಗಲಿ ಯಾರೆ ಸುಳ್ಳು ಆರೋಪಗಳು,ಅಪಪ್ರಚಾರ ಮಾಡಿದರೆಅಂಥವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಟೀಕೆ ಮಾಡುವುದು, ಸುಳ್ಳು ಸುದ್ದಿ ಹಬ್ಬಿಸುವುದು, ವೈಯಕ್ತಿಕವಾಗಿ ತೇಜೋವಧೆ ಮಾಡುವುದು ಸರಿಯಲ್ಲಾ ಎಂದರು.
ಕಸ್ತೂರಿರಂಗನ್ ವರದಿ ಜಾರಿ ಬಗ್ಗೆ ಕೇಂದ್ರ ಸರ್ಕಾರ ತೀರ್ಮಾನ ತೆಗೆದುಕೊಳ್ಳಬೇಕಿದೆ ರಾಜ್ಯ ಸರ್ಕಾರ ಬೇಡ ಎಂದು ಹೇಳಿದೆ ಪರಿಸರ ರಕ್ಷಣೆ ವಿಚಾರವಾಗಿ ಸರ್ಕಾರ ಹಿಂದೆ ಬೀಳುವುದಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.
ಬಿಟ್ ಕಾಯಿನ್ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ ಹೆಸರು ಹೇಳಿರುವ ವ್ಯಕ್ತಿಗಳಿಗೆ ಇನ್ನೂ ನೊಟೀಸ್ ನೀಡಿಲ್ಲವೇಕೆ ಎಂಬ ಪ್ರಶ್ನೆಗೆ ಎಸ್ ಐಟಿಯವರೇ ಕ್ರಮ ಕೈಗೊಳ್ಳಬೇಕು.ಎಸ್ ಐಟಿ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ ಎಂದು ಉತ್ತರಿಸಿದರು.
ನೈತಿಕ ಪೊಲೀಸ್ ಗಿರಿ ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಿದ್ದೇನೆ. ಕಾನೂನಿನಲ್ಲಿ ನೈತಿಕ ಪೊಲೀಸ್ ಗಿರಿಗೆ ಅವಕಾಶವಿಲ್ಲ ಎಂದು ಇದೇವೇಳೆ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.
ಸೌಜನ್ಯ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ,ಈ ಕೊಲೆ ಪ್ರಕರಣ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು. ಅದು ಕೋರ್ಟ್ ನಲ್ಲಿ ಇತ್ಯರ್ಥವಾಗಿದೆ. ಸೌಜನ್ಯ ಪೋಷಕರು ಮತ್ತು ಕೆಲವರು ಅದರ ಮರು ತನಿಖೆಯಾಗಬೇಕೆಂದು ಒತ್ತಾಯಿಸುತ್ತಿದ್ದಾರೆ. ಕಾನೂನು ಪ್ರಕಾರ ಮುಂದೆ ಏನು ಕ್ರಮ ಕೈಗೊಳ್ಳಬಹುದೆಂದು ನೋಡಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಮೂಲತಃ ವಕೀಲನಾಗಿ ನನಗೆ ಗೊತ್ತಿರುವ ಕಾನೂನು ಪ್ರಕಾರ ಸೌಜನ್ಯ ಪೋಷಕರು ಹೈಕೋರ್ಟ್ ಗೆ ಮನವಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಕೋರ್ಟ್ ಏನು ತೀರ್ಪು ಕೊಟ್ಟಿದೆ ಎಂದು ನಾನು ಓದಿಲ್ಲ.
ಕೋರ್ಟ್ ತೀರ್ಪಿನ ಪ್ರತಿಯನ್ನು ತಂದು ನನಗೆ ನೀಡಿದ್ದಾರೆ. ಓದಿದ ನಂತರ ಅದರ ವಿರುದ್ಧವಾಗಿ ಅಪೀಲ್ ಹಾಕಲು ಅವಕಾಶವಿದೆಯೇ ಎಂದು ನೋಡುತ್ತೇನೆ ಎಂದು ತಿಳಿಸಿದರು ಸಿದ್ದರಾಮಯ್ಯ.