ಬೆಂಗಳೂರು: ಬೆಂಗಳೂರಿನಲ್ಲಿ ಸುರಂಗ ನಿರ್ಮಾಣ ಮಾಡುವ ಯೋಜನೆಗಾಗಿ ಇಬ್ಬರು ಸಚಿವರ ನಡುವೆ ಫೈಟ್ ನಡೆಯುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು,ಈ ಸುರಂಗ ಯೋಜನೆಗೆ 80,000 ಕೋಟಿ ರೂ. ವೆಚ್ಚ ಆಗುತ್ತದೆ ಎಂದು ಸರಕಾರ ಹೇಳಿದೆ. ಆದರೆ, ಈ ಯೋಜನೆಯನ್ನು ಯಾವಾಗ ಪೂರ್ಣ ಮಾಡುತ್ತೇವೆ ಎಂದು ಹೇಳುತ್ತಿಲ್ಲ ಎಂದರು.
ನಾನು ಮುಖ್ಯಮಂತ್ರಿ ಆಗಿದ್ದಾಗ ಮಿನ್ಸ್ ರಸ್ತೆಯಿಂದ ಹೆಬ್ಬಾಳದವರಿಗೆ ಸುರಂಗ ರಸ್ತೆ ನಿರ್ಮಾಣ ಯೋಜನೆ ರೂಪಿಸಿದ್ದೆ. ಅದಕ್ಕೆ ಅಂತಿಮ ಹಂತದ ಅನಿಮೋದನೆಯನ್ನೂ ಕೊಡಲಾಗಿತ್ತು, ಅಷ್ಟರಲ್ಲಿ ನನ್ನ ಸರಕಾರ ಹೋಯಿತು ಎಂದು ಹೇಳಿದರು.
ಬ್ರ್ಯಾಂಡ್ ಬೆಂಗಳೂರು ಹೆಸರಿನಲ್ಲಿ ಎಸ್ಟೆಲ್ಲಾ ಕೊಳ್ಳೆ ಹೊಡೆಯಬೇಕೋ ಅಷ್ಟನ್ನೂ ಮಾಡಲು ಈ ಸರಕಾರ ಹೊರಟಿದೆ ಎಂದು ಟೀಕಿಸಿದರು.
ಈ ಸರಕಾರದ ಯೋಗ್ಯತೆಗೆ ಸರಕಾರಿ ಶಾಲೆಗಳನ್ನು ಸ್ವಚ್ಛ ಮಾಡಲು ಹಣ ಇಲ್ಲ, ಸಿಬ್ಬಂದಿಯೂ ಇಲ್ಲ. ಶಿಕ್ಷಕರು ಮಕ್ಕಳಿಂದ ಸ್ವಚ್ಚತಾ ಕಾರ್ಯ ಮಾಡಿಸುತ್ತಾರೆ ಎಂದು ವ್ಯಂಗ್ಯವಾಡಿದರು.
ಸಮಾಜ ಕಲ್ಯಾಣ ಇಲಾಖೆಯಿಂದ 11 ಸಾವಿರ ಕೋಟಿ ರೂ. ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಡೈವರ್ಟ್ ಮಾಡಲಾಗಿದೆ. ಶಾಲೆಗಳಲ್ಲಿ ಚಾಕ್ ಪೀಸ್, ಡಸ್ಟರ್ ತರಲಿಕ್ಕೂ ಶಿಕ್ಷಕರೇ ಹಣ ಖರ್ಚು ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೋಲಾರದಲ್ಲಿ ಮಾಧ್ಯಮದವರನ್ನು ಹೊರಗೆ ಹಾಕಿ ಕೆಡಿಪಿ ಮೀಟಿಂಗ್ ಮಾಡಿದ್ದೀರಿ. ಅಲ್ಲಿ ರಾಜಕೀಯ ಮಾಡಲು ಹೋಗಿದ್ದರು ಮುಖ್ಯಮಂತ್ರಿ. ಜನರ ಜೇವನ ಏನಾದರೂ ಆಗಲಿ, ಇವರಿಗೆ ರಾಜಕೀಯ ಮುಖ್ಯ ಎಂದು ಟೀಕಿಸಿದರು.
ಈಗ ಹೊಸದಾಗಿ ಉದ್ಯೋಗ ಮೇಳ ಮಾಡುತ್ತೇವೆ ಎಂದು ಹೊರಟಿದ್ದಾರೆ. ಉದ್ಯೂಗ ಮೇಳ ಇರಲಿ, ಮೊದಲು ಸರಕಾರದಲ್ಲಿ ಖಾಲಿ ಇರುವ 2 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಿ ಎಂದು ಎಚ್‌ಡಿ ಕೆ ಆಗ್ರಹಿಸಿದರು.
ರಾಜ್ಯದಲ್ಲಿ ನೇಕಾರರ ಪರಿಸ್ಥಿತಿ ದಯನೀಯವಾಗಿದೆ. ದಿನಪೂರ್ತಿ ಇಡೀ ಕುಟುಂಬ ದುಡಿದರೂ 500 ರೂಪಾಯಿ ಸಂಪಾದನೆ ಮಾಡುವುದು ಕಷ್ಟವಾಗಿದೆ. ರಾಜ್ಯದ 39 ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಅವರಲ್ಲಿ 22 ಮಂದಿ ಬೆಳಗಾವಿ ಜಿಲ್ಲೆಯವರು ಎಂಬ ಸುದ್ದಿಯನ್ನು ಪತ್ರಿಕೆಯಲ್ಲಿ ಓದಿದೆ. ಇವರಿಗೆ ಗ್ಯಾರಂಟಿ ಹಣ ತಲುಪುಲ್ಲ. ಅದಕ್ಕೆ ಸರಕಾರ ಏನು ಮಾಡಿದೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ವಿದೇಶಿ ಬಂಡವಾಳ ಹೂಡಿಕೆ ಕುಸಿದಿದೆ ಈ ವರ್ಷದಲ್ಲಿ ರಾಜ್ಯಕ್ಕೆ ವಿದೇಶಿ ನೇರ ಹೂಡಿಕೆ ಶೆ.46ರಷ್ಟು ಅಂದರೆ; 2.8 ಶತಕೋಟಿ ಡಾಲರ್ ನಷ್ಟು ಹೂಡಿಕೆ ಕಡಿಮೆ ಆಗಿದೆ.
ಪರಿಣಾಮವಾಗಿ ಉದ್ಯೋಗ ಸೃಷ್ಟಿಯೂ ಕುಸಿದಿದೆ. ಎಂಬಿ ಪಾಟೀಲ್ ಅಮೇರಿಕಾಗೆ ಹೋಗಿದ್ದರು. 25 ಸಾವಿರ ಕೋಟಿ ಹೂಡಿಕೆ ಆಗಿದೆ ಎಂದು ಅವರು ಹೇಳಿದ್ದರು. ಬಹುಶಃ ಆ ಹಣ ವಿಮಾನದಲ್ಲಿ ಬರ್ತಾ ಇರಬೇಕು ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಈ ಸರ್ಕಾರದ ಕಾರ್ಯ ವೈಖರಿ ಸರಿ ಇಲ್ಲ. ದಾವೋಸ್ ಗೆ ಹೋಗಲಿಕ್ಕೆ 9 ಕೋಟಿ ರೂಪಾಯಿ ತೆಗೆದುಕೊಂಡಿದ್ದಾರೆ. ಇದೆಲ್ಲ ಜನರ ತೆರಿಗೆ ಹಣ. ಅದನ್ನು ಮನಸೋಇಚ್ಛೆ ಪೋಲು ಮಾಡಲಾಗುತ್ತಿದೆ ಎಂದು ಅವರು ದೂರಿದರು.
ಹಿಂದಿನ ಬಿಜೆಪಿ ಸರಕಾರದಲ್ಲಿ ಕೋವಿಡ್ ನಲ್ಲಿ 40,000 ಕೋಟಿ ರೂಪಾಯಿ ಅಕ್ರಮ ನಡೆದಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಾಡಿರುವ ಆರೋಪದಿಂದ ಕಾಂಗ್ರೆಸ್ ರಕ್ಷಣೆ ಪಡೆಯುತ್ತಿದೆ ಎಂದು ಕುಮಾರಸ್ವಾಮಿ ಅವರು ಆರೋಪ ಮಾಡಿದರು.
ಬಿಜೆಪಿಯಲ್ಲಿರುವ ರಾಜಕೀಯ ಭಿನ್ನಾಭಿಪ್ರಾಯಗಳಿಂದ ಇಂತಹ ಮಾತುಗಳು ಕೇಳಿ ಬರುತ್ತಿವೆ. ಇದೇ ಕಾಂಗ್ರೆಸ್ ಗೆ ಹೊಸ ಅಸ್ತ್ರವಾಗಿದೆ.
ಪರಮೇಶ್ವರ್, ಎಂ.ಬಿ.ಪಾಟೀಲ್ ಅವರು ನೀಡುತ್ತಿರುವ ಹೇಳಿಕೆಗಳೇ ಇದಕ್ಕೆ ಸಾಕ್ಷಿ. ಇಷ್ಟು ದೊಡ್ಡ ಅಕ್ರಮ ನಡೆದಿದೆ ಎಂದರೆ ನಂಬಲಾಗುತ್ತಿಲ್ಲ ಎಂದು ಕುಮಾರಸ್ವಾಮಿ ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಚೌಡರೆಡ್ಡಿ ತೂಪಲ್ಲಿ, ಹಿರಿಯ ಮುಖಂಡ ಕೆ.ಟಿ.ಶಾಂತಕುಮಾರ್ ಉಪಸ್ಥಿರಿದ್ದರು.