ಮೈಸೂರು; ಮಾಜಿ ಮುಖ್ಯಮಂತ್ರಿ ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ವಯಂ ಘೋಷಿತ ಅಹಿಂದ ನಾಯಕ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಹಾಗೂ ರಾಜ್ಯಸಭಾ ಸದಸ್ಯ ಸುಧಾಂಶು ತ್ರೀವೇಧಿ ವಾಗ್ದಾಳಿ ನಡೆಸಿದರು.
ಬುಧವಾರ ಮೈಸೂರಿನ ವಾಣಿವಿಲಾಸ ರಸ್ತೆಯಲ್ಲಿರುವ ಬಿಜೆಪಿ ಮೈಸೂರು ವಿಭಾಗ ಮಾಧ್ಯಮ ಕೇಂದ್ರದಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಸಿದ್ದರಾಮಯ್ಯ ನಿಜವಾದ ಅಹಿಂದ ನಾಯಕರಲ್ಲ, ಅವರು ಕೇವಲ ಮುಸಲ್ಮಾನರ ಏಜೆಂಟ್ ಎಂದು ಟೀಕಿಸಿದರು.
ಅಹಿಂದ ನಾಯಕ ಎಂದು ಕರೆಯಿಸಿಕೊಳ್ಳುವ ಸಿದ್ದರಾಮಯ್ಯ ದಲಿತರು, ಹಿಂದುಳಿದ ವರ್ಗದವರ ಅಭಿವೃದ್ಧಿಗಾಗಿ ಏನನ್ನೂ ಮಾಡಲಿಲ್ಲ. ಕೇವಲ ಮುಸ್ಲಿಮರ ಓಲೈಸುವ ಏಜೆಂಟರಾಗಿ ಕೆಲಸ ಮಾಡಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ವೀರಶೈವ ಹಾಗೂ ಒಕ್ಕಲಿಗ ಸಮುದಾಯ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಾತಿಯನ್ನು ಹೆಚ್ಚಿಸಿದೆ.
ಈ ಸಮುದಾಯಗಳ ಬಹು ವರ್ಷಗಳ ಬೇಡಿಕೆಗಳನ್ನು ಈಡೇರಿಸುವ ಮೂಲಕ ಸಾಮಾಜಿಕ ನ್ಯಾಯವನ್ನು ನೀಡಿದೆ ಎಂದು ತಿಳಿಸಿದರು.
ಸಿದ್ದರಾಮಯ್ಯರ ಐದು ವರ್ಷಗಳ ಆಡಳಿತದ ಕಾಲದಲ್ಲಿ ಬೆಂಗಳೂರು ಹಾಗೂ ರಾಜ್ಯ ಹೇಳಿಕೊಳ್ಳುವಂತಹ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಕಾಣಲಿಲ್ಲ. ಮೈಸೂರು ಕೂಡ ಅಭಿವೃದ್ಧಿಯಾಗಲಿಲ್ಲ ಎಂದು ದೂರಿದರು.
ಆದರೆ ನರೇಂದ್ರ ಮೋದಿ ಸರ್ಕಾರ ಸಾವಿರಾರು ಮಂದಿಗೆ ಉದ್ಯೋಗ ಒದಗಿಸುವ ಮೈಸೂರಿಗೆ ಸೆಮಿ ಕಂಡಕ್ಟರ್ ಹಬ್‌ನ್ನು ಮೈಸೂರಿನಲ್ಲಿ ಸ್ಥಾಪಿಸುತ್ತಿದೆ. ಮೈಸೂರನ್ನು ಗ್ಲೋಬಲ್ ಸೆಂಟರ್‌ನ್ನಾಗಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಚುನಾವಣೆಗಳು ಹತ್ತಿರ ಬಂದಾಗಲೆಲ್ಲಾ ಕಾಂಗ್ರೆಸ್‌ನವರು ಜನರಿಗೆ ಈಡೇರಿಸಲಾಗದಂತಹ ಆಕರ್ಷಕವಾದ ಸುಳ್ಳು ಭರವಸೆಗಳನ್ನು ನೀಡುವುದು ರೂಡಿ ಮಾಡಿಕೊಂಡು ಬಂದಿದ್ದಾರೆ. ಅದೇ ರೀತಿ ಈಗಲೂ ಸುಳ್ಳು ಭರವಸೆ ನೀಡಿದ್ದಾರೆ ಎಂದು ದೂರಿದರು.
ಹಾಗಾಗಿ ಅಧಿಕಾರಕ್ಕೆ ಬರಲು ಸುಳ್ಳು ಭರವಸೆಗಳನ್ನು ನೀಡುತ್ತಿರುವ ಕಾಂಗ್ರೆಸ್‌ನವರಿಗೆ ಕರ್ನಾಟಕ ರಾಜ್ಯದ ಜನರು ತಕ್ಕ ಪಾಠವನ್ನು ಕಲಿಸಬೇಕು ಎಂದು ತ್ರಿವೇದಿ ಮನವಿ ಮಾಡಿದರು.
ಸುದ್ದಿ ಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ವಕ್ತಾರ ಗಿರೀಶ್ ಉಪಾಧ್ಯಾಯ, ಜಿಲ್ಲಾ ವಕ್ತಾರ ಡಾ.ಕೆ.ವಸಂತ್‌ಕುಮಾರ್, ನಗರ ವಕ್ತಾರ ಎಂ.ಎ.ಮೋಹನ್, ಮೈಸೂರು ವಿಭಾಗ ಮಾಧ್ಯಮ ಕೇಂದ್ರ ಸಂಯೋಜಕ ನಾಗೇಶ್, ಜಿಲ್ಲಾ ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್ ಮತ್ತಿತರರು ಉಪಸ್ಥಿತರಿದ್ದರು.