ಸ್ವಪಕ್ಷದ ಸರ್ಕಾರಗಳ ವಿರುದ್ಧ ಹಳ್ಳಿಹಕ್ಕಿ ಕಿಡಿ

ಮೈಸೂರು: ಚರ್ಚೆ ಇಲ್ಲದೆ ಕಾಯ್ದೆಗಳು ಪಾಸ್ ಆಗುತ್ತೆ, ಸೇವೆಯೇ ಇಲ್ಲದೆ ಟೋಲ್ ಸಂಗ್ರಹ ಮಾಡುತ್ತೀರಾ, ನಿಮ್ಮ ಸರ್ಕಾರದಿಂದ ಪ್ರಜಾಪ್ರಭುತ್ವ ಹಾಳಾಗುತ್ತಿದೆ ಎಂದು ಸವಪಕ್ಷದ ಸರ್ಕಾರದ ವಿರುದ್ಧವೇ ವಿಧಾನ ಪರಿಷತ್‌ ಸದಸ್ಯ ಎಚ್.ವಿಶ್ವನಾಥ್ ಕಿಡಿ ಕಾರಿದರು.

ಮೈಸೂರು -ಬೆಂಗಳೂರು ಎಕ್ಸ್ ಪ್ರೆಸ್ ಹೈವೇಯಲ್ಲಿ ಅವೈಜ್ಞಾನಿಕ ಟೋಲ್ ದರ ಸಂಗ್ರಹ ವಿರುದ್ಧ ಮೈಸೂರಿನ ಮಣಿಪಾಲ್ ವೃತ್ತದ ಬಳಿ ಸಾಂಕೇತಿಕ ಪ್ರತಿಭಟನೆ ನಡೆಸಿ ಅವರು ಮಾತನಾಡಿದರು.

ಎಕ್ಸ್ ಪ್ರೆಸ್ ಹೈವೇ ನಿರ್ಮಾಣ ಹಿನ್ನೆಲೆ  2600 ಎಕರೆ ರೈತರ ಜಮೀನು ಹೋಯ್ತು. ಮಂಡ್ಯ ಭಾಗದ ನೂರಾರು ಕುಟುಂಬಗಳು‌ ಬೀದಿಗೆ ಬಂದಿವೆ. ಜನ ವಿರೋಧಿ ಯೋಜನೆ ಮಾಡಿ ಟೋಲ್ ಸಂಗ್ರಹ ನೆಪದಲ್ಲಿ ಹಗಲು ದರೋಡೆಗಿಳಿದಿದ್ದೀರಿ ಎಂದು ಕಿಡಿಕಾರಿದರು.

ರಸ್ತೆ ಬೇಕು ಅಂಥಾ ಯಾರು ಕೇಳಿದ್ರು, ನಾಲ್ಕು ಪಥನೇ ಸಾಕಾಗಿತ್ತು. ಹತ್ತು ಪಥದ ರಸ್ತೆ ಮಾಡಿದ್ದೀರಾ ಆದರೆ ಬಡವರು ಓಡಾಡುವ ಸರ್ವಿಸ್ ರಸ್ತೆ ಎಲ್ಲಿದೆ  ಅಪಘಾತವಾದರೆ ಚಿಕಿತ್ಸೆ ನೀಡಲು ಟ್ರಾಮಾ ಸೆಂಟರ್ ಎಲ್ಲಿದೆ ಎಂದು ಪ್ರಶ್ನಿಸಿದರು.

ಬೆಂಗಳೂರು ಮೈಸೂರು ಟೋಲ್ ಸಂಗ್ರಹ ಸಂಬಂಧ ಸಂಸದ ಪ್ರತಾಪ್ ಸಿಂಹ ಹೇಳಿಕೆ ವಿರುದ್ಧ ಕಿಡಿಕಾರಿದ ವಿಶ್ವನಾಥ್,  ಸಂಸದ ಪ್ರತಾಪ ಸಿಂಹ ಮಿನಿ ಕಂಟ್ರ್ಯಾಕ್ಟರ್. ನಿನ್ನ ಕೆಲಸ ಏನು,ಹೆದ್ದಾರಿ ವಿಚಾರದಲ್ಲಿ ನೀನು ಮಾಡಿದ್ದೇನು, ರಸ್ತೆಗೆ ಮೆಟಿರೀಯಲ್ ಸಪ್ಲೈ ಮಾಡಿದ್ದು ಎಲ್ಲರಿಗೂ ಗೊತ್ತಿದೆ ಎಂದು ಏಕವಚನದಲ್ಲಿ ಹರಿಹಾಯ್ದರು.

ಅದು ಯಾರೋ ಶ್ರೀಧರ್ ಅನ್ನೋ ಅಧಿಕಾರಿ ಸರ್ವಿಸ್ ರಸ್ತೆ ಮಾಡುವ ಕಾನೂನು ಎಲ್ಲಿದೆ ಅಂತಾನೆ. ಏನಪ್ಪ ಮೋದಿ ನಿಮ್ಮ ಸರ್ಕಾರದಲ್ಲಿ ಅಧಿಕಾರಿ ಶಾಹಿ ಆಡಳಿತ ನಡೆತಾ ಇದೆಯಾ ಎಂದು ಖಾರವಾಗಿ ಪ್ರಶ್ನಿಸಿದರು.

ಮೈಸೂರು ಕೊಡಗು ಸಂಸದರು ಪಂಥಾಹ್ವಾನ ಕೊಟ್ಟಿದ್ದಾರೆ, ಬರಲಿ ಯಾವಾಗ ಅಂತ ದಿನಾಂಕ ನಿಗದಿ ಮಾಡಿ ನಾವು ಬರಲು ಸಿದ್ದವಿದ್ದೇವೆ ಎಂದು ವಿಶ್ವನಾಥ್ ಪ್ರತಿ ಸವಾಲು ಹಾಕಿದರು.

ಮೂಲಭೂತ ಸೌಕರ್ಯಗಳನ್ನು ಕೊಟ್ಟ ಮೇಲೆ ಟೋಲ್ ದರ ನಿಗದಿಮಾಡಿ ಯಾರು ಬೇಡ ಅಂದ್ರು. ಈಗಾಗಲೇ ಕೆ ಎಸ್ ಆರ್ ಟಿಸಿ ಬಸ್ ದರ ಕೂಡ ಹೆಚ್ಚಿಸಿದ್ದಾರೆ. ನಮಗೆ ಗೊತ್ತಿಲ್ಲದೆ ನಮ್ಮ ಜೇಬು ಪಿಕ್ ಪ್ಯಾಕೆಟ್ ಆಗುತ್ತಿದೆ ಗುಡುಗಿದರು.