ತಲೆಗೆ ಗುಂಡು ಹಾರಿಸಿಕೊಂಡು ಕ್ಷೇತ್ರ ಶಿಕ್ಷಣಾಧಿಕಾರಿ ಆತ್ಮಹತ್ಯೆ

ಬೆಂಗಳೂರು : ಅನಾರೋಗ್ಯದಿಂದಾಗಿ ಮನನೊಂದಿದ್ದ  ಕ್ಷೇತ್ರ ಶಿಕ್ಷಣಾಧಿಕಾರಿಯೊಬ್ಬರು ಪಿಸ್ತೂಲ್ ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ತೆಂಕಬೈಲಿನವರಾದ ಟಿ.ಎನ್.ಕಮಲಾಕರ್ ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅವರು ಯಲಹಂಕದಲ್ಲಿ ಬಿಇಒ ಆಗಿ ಕಳೆದ ನಾಲ್ಕು ವರ್ಷಗಳಿಂದ ಕೆಲಸ ಮಾಡುತ್ತಿದ್ದರು.

ಕೊಡಿಗೆಹಳ್ಳಿಯ ಎನ್‍ಟಿಐ ಲೇಔಟ್ ನಲ್ಲಿ ಕುಟುಂಬದೊಂದಿಗೆ ನೆಲೆಸಿದ್ದರು.

ಕಮಲಾಕರ್ ಅವರು ಪಾರ್ಕಿನ್ ಸನ್ ಕಾಯಿಲೆಯಿಂದ ಬಳಲುತ್ತಿದ್ದರು.

ಪತ್ನಿ ಮತ್ತು ಮಗ, ಮನೆಯಲ್ಲಿರುವಾಗಲೇ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡು  ಡಬಲ್ ಬ್ಯಾರೆಲ್ ಪಿಸ್ತೂಲ್‍ನಿಂದ ಗುಂಡು ಹಾರಿಸಿಕೊಂಡಿದ್ದಾರೆ.

ಶಬ್ದ ಕೇಳಿ ಮನೆಯವರು ಕೊಠಡಿ ಬಾಗಿಲು ಒಡೆದು ಒಳಹೋಗುವಷ್ಟರಲ್ಲಿ ಅವರು ಮೃತಪಟ್ಟಿದ್ದರು.

ಆತ್ಮಹತ್ಯೆಗೂ ಮುನ್ನ ಕಮಲಾಕರ್ ನನ್ನ ಸಾವಿಗೆ ನಾನೇ ಕಾರಣ ಎಂದು ಮರಣ ಪತ್ರ ಬರೆದಿಟ್ಟಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.