ತಾಯಿ ಸನ್ನಿದಿಯಲ್ಲಿ ಗುಣಮಟ್ಟದ ವ್ಯವಸ್ಥೆ ಕಲ್ಪಿಸದಿದ್ದರೆ ಸೂಕ್ತ ಕ್ರಮ -ಸಿಎಂ ಎಚ್ಚರಿಕೆ

ಮೈಸೂರು: ತಾಯಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಗುಣಮಟ್ಟದ ವ್ಯವಸ್ಥೆ ಕಲ್ಪಿಸದಿದ್ದರೆ ಸಂಬಂಧಪಟ್ಟವರ ವಿರುದ್ಧ  ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದರು.

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಸಮಿತಿಯ ಮೊದಲ ಸಭೆಯನ್ನು ತಾಯಿ ಸನ್ನಿಧಿಯಲ್ಲೇ ಉದ್ಘಾಟಿಸಿ ಸಿಎಂ ಮಾತನಾಡಿದರು‌.

ಹಿಂದೆಯೂ ಸಮಿತಿ ಇತ್ತು,ಆದರೆ ಪ್ರಾಧಿಕಾರ ರಚನೆಯಿಂದಾಗಿ ಅಭಿವೃದ್ಧಿಗೆ ಹೆಚ್ಚಿನ ಅಧಿಕಾರ ಮತ್ತು ಅವಕಾಶ ಒದಗಿದಂತಾಗಿದೆ ಎಂದು ಹೇಳಿದರು

ಬೆಟ್ಟಕ್ಕಯ ಬರುವ ಭಕ್ತರಿಗೆ ಉನ್ನತ ಮಟ್ಟದ ಆರೋಗ್ಯಕರ ಸವಲತ್ತು ಹಾಗೂ  ಸೌಲಭ್ಯಗಳನ್ನು ಒದಗಿಸುವುದು ನಮ್ಮ ಗುರಿಯಾಗಿದೆ ಎಂದು ತಿಳಿಸಿದರು.

ಶ್ರೀ ಕ್ಷೇತ್ರ ಹಾಗೂ ದೇವಸ್ಥಾನದ ಸಂಪ್ರದಾಯ ಮತ್ತು ಚರಿತ್ರೆ, ಘನತೆಯನ್ನು ಕಾಪಾಡುವ ಜೊತೆಗೆ ಉನ್ನತೀಕರಿಸಬೇಕು ಎಂದು ಹೇಳಿದರು.

ಪ್ರಾಧಿಕಾರ ವ್ಯವಸ್ಥಿತವಾಗಿ ನಡೆಯಬೇಕು, ಕಾಲ ಕಾಲಕ್ಕೆ ಸಭೆಗಳು ನಡೆದು ಹೆಚ್ಚಿನ ಶ್ರಮವನ್ನು ಶುಚಿತ್ವಕ್ಕೆ ಕೊಡಬೇಕು. ಕಸವನ್ನು ಆಗ್ಗಿಂದಾಗೇ ತೆರವುಗೊಳಿಸಬೇಕು. ವಾಹನಗಳ ಸಂಖ್ಯೆಯೂ ಹೆಚ್ಚಾಗಿದ್ದು ವಾಹನ ನಿಲುಗಡೆಗೆ ಸುಸಜ್ಜಿತ ವ್ಯವಸ್ಥೆ ಕಲ್ಪಿಸಬೇಕು ಎಂದು ಸಿಎಂ ತಿಳಿಸಿದರು.

ಶ್ರೀ ಕ್ಷೇತ್ರದ ಅಭಿವೃದ್ಧಿಗೆ ಹಣಕ್ಕೆ ತೊಂದರೆ ಇಲ್ಲ. ಕೇಳಿದಷ್ಟು ಹಣವನ್ನು ಕೇಳಿದಾಗಲೆಲ್ಲಾ ಒದಗಿಸಲಾಗುತ್ತಿದೆ,ಆದರೂ ಕೆಲಸಗಳು ಮಾತ್ರ ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ. ಇದನ್ನು ನಾನು ಸಹಿಸುವುದಿಲ್ಲ, ಸಮಯಕ್ಕೆ ಸರಿಯಾಗಿ ಕೆಲಸ ಮಾಡದಿದ್ದರೆ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಕಠಿಣ ಎಚ್ಚರಿಕೆ ನೀಡಿದರು.

ಶಕ್ತಿ ದೇವತೆ,ತಾಯಿ ಚಾಮುಂಡೇಶ್ವರಿ ಬಗ್ಗೆ ಕೋಟ್ಯಂತರ ಮಂದಿಗೆ ಅಪಾರ ಭಕ್ತಿ, ಶ್ರದ್ಧೆ, ನಂಬಿಕೆ ಇದೆ. ದೇಶದ ಮೂಲೆ ಮೂಲೆಗಳಿಂದ ಭಕ್ತರು ಬರುತ್ತಾರೆ,ಎಲ್ಲರಿಗೂ ಅಗತ್ಯ ಸವಲತ್ತುಗಳನ್ನು ಒದಗಿಸಬೇಕು ಎಂದು ಸೂಚನೆ ನೀಡಿದರು.

ಕೊಪ್ಪಳ ಹುಲಿಗಮ್ಮ ದೇವಸ್ಥಾನ ಮತ್ತು ಘಾಟಿ ಸುಬ್ರಮಣ್ಯ ದೇವಸ್ಥಾನಗಳ  ಅಭಿವೃದ್ಧಿಗಾಗಿ ಪ್ರಾಧಿಕಾರ ರಚನೆ ಬಗ್ಗೆಯೂ ಹೆಚ್ಚಿನ ಬೇಡಿಕೆ ಇದೆ,ಈ ಬಗ್ಗೆಯೂ ನಿರ್ಧಾರ ತೆಗೆದುಕೊಳ್ಳುವ ಅಗತ್ಯವಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಸಭೆಯಲ್ಲಿ ಸಚಿವರಾದ ಹೆಚ್.ಸಿ.ಮಹದೇವಪ್ಪ, ಎಚ್.ಕೆ.ಪಾಟೀಲ್, ಕೆ.ವೆಂಕಟೇಶ್, ರಾಮಲಿಂಗಾರೆಡ್ಡಿ, ಶಾಸಕರಾದ ಯತೀಂದ್ರ ಸಿದ್ದರಾಮಯ್ಯ, ರವಿಶಂಕರ್, ಡಾ.ತಿಮ್ಮಯ್ಯ, ಹರೀಶ್ ಗೌಡ, ಜಿ.ಟಿ.ದೇವೇಗೌಡ, ವಿವೇಕಾನಂದ ಮತ್ತಿತರ  ಗಣ್ಯರು ಪಾಲ್ಗೊಂಡಿದ್ದರು.