ಟಿಕೆಟ್ ಕೈ ತಪ್ಪಲು ಬಿ. ಎಲ್. ಸಂತೋಷ್ ಡ್ಯಂತ್ರ -ಶೆಟ್ಟರ್

ಹುಬ್ಬಳ್ಳಿ: ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನನಗೆ ಟಿಕೆಟ್ ಕೈ ತಪ್ಪಲು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಷಡ್ಯಂತ್ರ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಗಂಭೀರ ಆರೋಪ ಮಾಡಿದರು.

ಹುಬ್ಬಳ್ಳಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತುರ್ತು ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಬಿ. ಎಲ್. ಸಂತೋಷ್ ಅವರು ತಮ್ಮ ಮಾನಸ ಪುತ್ರ ಮಹೇಶ್ ಟೆಂಗಿನ ಕಾಯಿ ಅವರಿಗೆ ಟಿಕೆಟ್ ಕೊಡಿಸಲು ನನ್ನ ವಿರುದ್ಧ ತಂತ್ರ ರೂಪಿಸಿದರು ಎಂದು ಅವರು ದೂರಿದರು.

ಒಂದು ಕ್ಷೇತ್ರವನ್ನು ತಮ್ಮ ಪರ ಮಾಡಿಕೊಳ್ಳಲು ರಾಜ್ಯದಲ್ಲಿ ಬಿಜೆಪಿ ವಿರುದ್ಧ ಬೆಂಕಿ ಹಚ್ಚಿದರೆಂದು ಶೆಟ್ಟರ್ ಆಕ್ರೋಶ ವ್ಯಕ್ತಪಡಿಸಿದರು.

ಬಿ. ಎಲ್ ಸಂತೋಷ್ ಅವರಿಗೆ ಈಗಾಗಲೇ ಎರಡು, ಮೂರು ರಾಜ್ಯಗಳನ್ನು ಉಸ್ತುವಾರಿ ನೀಡಲಾಗಿತ್ತು, ಆದರೆ ಅಲ್ಲೆಲ್ಲ ಬಿಜೆಪಿಗೆ ಸೋಲಾಗಿದೆ, ಇದು ಗೊತ್ತಿದ್ದರೂ ಮತ್ತೆ ಕರ್ನಾಟಕದ ಉಸ್ತುವಾರಿ ನೀಡಿದ್ದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು.

ಮೈಸೂರಿನ ಬಗ್ಗೆ ಪ್ರಸ್ತಾಪಿಸಿದ ಶೆಟ್ಟರ್, ಕೃಷ್ಣರಾಜ ಕ್ಷೇತ್ರದಲ್ಲಿ ರಾಮದಾಸ್ ಅವರಿಗೆ ಟಿಕೆಟ್ ಕೈತಪ್ಪಿದೆ, ಇದಕ್ಕೆ ಕಾರಣ ರಾಮದಾಸ್ ಬಿ. ಎಲ್ ಸಂತೋಷ್ ಅವರ ಹಿಂಬಾಲಕರಲ್ಲದಿರುವುದು. ಆದರೆ ಶ್ರೀವತ್ಸ ಸಂತೋಷ್ ಅವರ ಅನುಯಾಯಿ. ಹಾಗಾಗಿ ಅವರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.

ರಾಮದಾಸ್ ಗೆ ಕೃಷ್ಣರಾಜದಲ್ಲಿ ಟಿಕೆಟ್ ಕೊಟ್ಟಿದ್ದರೆ ಗೆಲುವು ಖಚಿತವಾಗಿರುತ್ತಿತ್ತು. ಆದರೆ ಈಗ ಶ್ರೀವತ್ಸಗೆ ಕೊಟ್ಟಿದ್ದಾರೆ ಗೆಲುವು ಸಾಧ್ಯವೇ ಎಂಬ ಪ್ರಶ್ನೆ ಮೂಡಿದೆ. ನನಗೆ ಆತನ ಬಗ್ಗೆ ಯಾವುದೇ ದ್ವೇಷ, ಅಸೂಯೆ ಖಂಡಿತಾ ಇಲ್ಲ‌. ಆತ ಕೂಡ ಬಿಜೆಪಿಯ ಒಳ್ಳೆಯ ಕಾರ್ಯಕರ್ತ ಎಂದು ಹೇಳಿದರು.

ಬಿಎಲ್ ಸಂತೋಷ್ ಜೊತೆಗೆ ರಾಜ್ಯದಲ್ಲಿ ಇನ್ನೂ ಕೆಲವರು ಕೈಜೋಡಿಸಿದ್ದಾರೆ. ಸಮಯ ಬಂದಾಗ ಅವರ ಬಗ್ಗೆ ಮಾತನಾಡುತ್ತೇನೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.

ನಾನು ಯಾರನ್ನು ಸೋಲಿಸಬೇಕೆಂದು ಕಾಂಗ್ರೆಸ್ ಪಕ್ಷಕ್ಕೆ ಬಂದಿಲ್ಲ, ನಾನು ಬಂದಿರುವುದು ಪಕ್ಷವನ್ನು ಬಲಗೊಳಿಸಲು ಎಂದು ಪ್ರಶ್ನೆ ಒಂದಕ್ಕೆ ಶೆಟ್ಟರ್ ಉತ್ತರಿಸಿದರು.

ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತಗಳನ್ನು ಒಪ್ಪಿ ನಾನು ಸೇರ್ಪಡೆಗೊಂಡಿದ್ದೇನೆ ಅವರು ನೀಡುವ ಕಾರ್ಯವನ್ನು ದಕ್ಷತೆಯಿಂದ ಮಾಡುತ್ತೇನೆ. ಯಾವುದೇ ಅಧಿಕಾರದ ಆಸೆಯಿಂದ ನಾನು ಇಲ್ಲಿಗೆ ಬಂದಿಲ್ಲ ಎಂದು ಹೇಳಿದರು.