ಟಿಕೆಟ್ ತಪ್ಪಿಸಲು ಪಿತೂರಿ ನಡೆದಿರೋದು ನಿಜ:ಶೋಭಾ ಕರಂದ್ಲಾಜೆ

ಬೆಳಗಾವಿ: ಟಿಕೆಟ್ ತಪ್ಪಿಸಲು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ನನ್ನ ವಿರುದ್ಧ ಪಿತೂರಿ ನಡೆಯುತ್ತಿರುವುದು ನಿಜ,
ಇದು ಯಶಸ್ವಿಯಾಗುವುದಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಮಾಧ್ಯಮದ ವರೊಂದಿಗೆ ಮಾತನಾಡಿದ ಅವರು, ನಮ್ಮವರು ವಿರೋಧ ಮಾಡಿದ್ದರಿಂದ ನನಗೆ ಅನುಕೂಲವೇ ಆಗಿದೆ, ಇಲ್ಲಾಂದರೆ ಶೋಭಾ ಒಳ್ಳೆಯ ‌ಕೆಲಸ ಮಾಡುತ್ತಿದ್ದಾರೆ,‌ ಪಕ್ಷದ ಕೆಲಸ ಮಾಡುತ್ತಾರೆ ಎಂದಷ್ಟೇ ‌ಹೇಳುತ್ತಿದ್ದರು ಎಂದು ತಿಳಿಸಿದರು.

ಶೋಭಾರನ್ನು ಏಕೆ ವಿರೋಧ ಮಾಡುತ್ತಿದ್ದಾರೆ ಎಂದು ಪಕ್ಷದ ನಾಯಕರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಸತ್ಯ ಸೋಧನೆ ವೇಳೆ ಸತ್ಯ ತಿಳಿಯಲಿದೆ, ನಮ್ಮ ವ್ಯಕ್ತಿತ್ವವೇನು ನಮ್ಮ ಅಭಿವೃದ್ಧಿ ಕೆಲಸಗಳು ಏನೆಂಬುದು ಗೊತ್ತಾಗುತ್ತವೆ.

ಚುನಾವಣೆ ಸಮಯ ಬಹಳಷ್ಟು ಸೂಕ್ಷ್ಮತೆಯಿಂದ ಕೂಡಿರುತ್ತದೆ. ಮಾಹಿತಿ ಸಂಗ್ರಹದಿಂದ ನನಗೆ ಅನುಕೂಲ ಆಗಲಿದೆಯೇ ಹೊರತು ತೊಂದರೆಯಾಗಲ್ಲ ಅದಕ್ಕಾಗಿ ನಮ್ಮ ಹೈಕಮಾಂಡ್‌ ಬಗ್ಗೆ ನನಗೆ ನಂಬಿಕೆಯಿದೆ, ಟಿಕೆಟ್ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷದ ಕೆಲಸ ಕೊಡಲಿ, ಸರ್ಕಾರದ ಕೆಲಸ ಕೊಡಲಿ ಪ್ರಮಾಣಿಕ ಸೇವೆ ಸಲ್ಲಿಸಿದ ಸಂತೃಪ್ತಿ ನನಗಿದೆ. ಇದು ಎಲ್ಲರಿಗೂ ಅನ್ವಯ ಆಗುತ್ತದೆ. ಕೆಲಸ ಮಾಡಿದವರಿಗೆ ಅವಕಾಶ ಸಿಕ್ಕೇ ಸಿಗುತ್ತದೆ.

ನಮ್ಮ ಶ್ರಮ, ನಮ್ಮ ಕೆಲಸವನ್ನು ಹೈಕಮಾಂಡ್ ಗುರುತಿಸುತ್ತೆ ಎಂಬುದಕ್ಕೆ ನಾನೇ ಉದಾಹರಣೆ,ನನ್ನನ್ನು ವಿರೋಧ ಏಕೆ ಮಾಡ್ತಿದ್ದಾರೆ ಎಂಬುದರ ವರದಿ ತರಿಸಿಕೊಳ್ಳುತ್ತಾರೆ, ಆಗ ಸತ್ಯ ಗೊತ್ತಾಗುತ್ತದೆ. ನನ್ನ ಕ್ಷೇತ್ರದಲ್ಲಿ ನಾನು ಸಾಕಷ್ಟು ಕೆಲಸ ಮಾಡಿದ್ದೇನೆ,‌ ಅಭಿವೃದ್ಧಿ ಆಧಾರದ ಮೇಲೆ‌ ಮತ‌ ಕೇಳುತ್ತೇನೆ ಎಂದು ತಿಳಿಸಿದರು.

ಟಿಕೆಟ್ ಕೊಡುವ ಬಗ್ಗೆ ನಿರ್ಧರಿಸಲು ಪ್ರಧಾನಿ ನರೇಂದ್ರ ಮೋದಿ, ನಮ್ಮ ಕೇಂದ್ರ ಚುನಾವಣೆ ಮಂಡಳಿ ಇದೆ, ಯಾರಿಗೆ ಎಲ್ಲಿಂದ ಟಿಕೆಟ್ ಕೊಡಬೇಕು, ಏಕೆ ಕೊಡಬೇಕು, ಅದರಿಂದಾಗುವ ಲಾಭ ಏನು ಎಂಬುದರ ಆಧಾರದ ಮೇಲೆ ನಮ್ಮ ನಾಯಕರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.