ಬೆಂಗಳೂರು: ಮಾಜಿ ಸಚಿವ ವರ್ತೂರು ಪ್ರಕಾಶ್ ಅವರನ್ನು ಅಪಹರಿಸಿದ್ದ ಪ್ರಕರಣದ ಪ್ರಮುಖ ಆರೋಪಿ ಕಾಲಿಗೆ ಇಂದಿರ ನಗರ ಪೊಲೀಸರು ಗುಂಡು ಹಾರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಲೋಹಿತ್ ಅಲಿಯಾಸ್ ರೋಹಿತ್ (31) ಪೊಲೀಸರ ಗುಂಡೇಟಿನಿಂದ ಗಾಯಗೊಂಡಿದ್ದು ಆತನನ್ನು ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈತ ಬನ್ನೇರುಘಟ್ಟ ಹಾಗೂ ಎಚ್ ಎಸ್ ಆರ್ ಲೇಔಟ್ ಠಾಣೆ ವ್ಯಾಪ್ತಿಯ ರೌಡಿ ಶೀಟರ್ ಆಗಿದ್ದಾನೆ.
ಹಲಸೂರು ಠಾಣೆ ವ್ಯಾಪ್ತಿಯಲ್ಲಿ ತನ್ನ ಸಹಚರರೊಂದಿಗೆ ಸೇರಿ ಹಣಕ್ಕಾಗಿ ಆಟೋ ಚಾಲಕರೊಬ್ಬರನ್ನು ಅಪಹರಿಸಿ ತಮಿಳುನಾಡಿನ ಹೊಸೂರು ಬಳಿ ಕೊಲೆ ಮಾಡಿದ್ದ. ಈ ಬಗ್ಗೆ ಹಲಸೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣ ಸಂಬಂಧ ಪೊಲೀಸರು 9 ಮಂದಿಯನ್ನು ಬಂಧಿಸಿದ್ದರು. ಆದರೆ ಲೋಹಿತ್ ತಲೆಮರೆಸಿಕೊಂಡಿದ್ದ.
ಈತ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಈತನ ಬಂಧನಕ್ಕೆ ಇಂದಿರಾನಗರ ಪೊಲೀಸರು ಬಲೆ ಬೀಸಿದ್ದರು.
ಶನಿವಾರ ಮುಂಜಾನೆ 5.15ರ ಸಮಯದಲ್ಲಿ ಈತ ಜೆಬಿ ನಗರ ಠಾಣೆ ವ್ಯಾಪ್ತಿಯ ಚಳ್ಳಘಟ್ಟ ಬಳಿ ಇದ್ದಾನೆ ಎಂಬ ಮಾಹಿತಿ ಸಿಕ್ಕಿದೆ ತಕ್ಷಣ ಅಲರ್ಟ್ ಆದ ಇನ್ಸ್ ಪೆಕ್ಟರ್ ಹರೀಶ್, ಪಿ ಎಸ್ ಐ ಅಮರೇಶ್, ಕಾನ್ ಸ್ಟೆಬಲ್ ಸೈಯದ್ ಮೊಹಿನುಲ್ಲ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು.
ಪೊಲೀಸರನ್ನು ಕಂಡ ಕೂಡಲೆ ರೌಡಿಯು ಕಾನ್ ಸ್ಟೆಬಲ್ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ, ತಕ್ಷಣ ಇನ್ಸ್ ಪೆಕ್ಟರ್ ಹರೀಶ್ ಅವರು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಆತನಿಗೆ ಸೂಚಿಸಿದ್ದಾರೆ. ಆದರೂ ರೌಡಿಯು ಮತ್ತೆ ಹಲ್ಲೆಗೆ ಮುಂದಾದಾಗ ಆತ್ಮರಕ್ಷಣೆಗಾಗಿ ಸಬ್ ಇನ್ಸ್ ಪೆಕ್ಟರ್ ಅಮರೇಶ್ ಅವರು ಹಾರಿಸಿದ ಗುಂಡು ರೌಡಿ ಲೋಹಿತ್ ಕಾಲಿಗೆ ತಗುಲಿ ಗಾಯಗೊಂಡಿದ್ದಾನೆ.
ಕೂಡಲೆ ಆತನನ್ನು ಸುತ್ತುವರಿದ ಪೊಲೀಸರ ತಂಡ ನಂತರ ಆತನನ್ನು ವಶಕ್ಕೆ ಪಡೆದು ಚಿಕಿತ್ಸೆಗಾಗಿ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
2020ರ ನವೆಂಬರ್ 25ರಂದು ಕೋಲಾರ ತಾಲೂಕಿನ ಹೊಸಹಳ್ಳಿ ಬಳಿವರ್ತೂರು ಪ್ರಕಾಶ್ ಹಾಗೂ ಅವರ ಕಾರು ಚಾಲಕನನ್ನು ಅಪಹರಿಸಲಾಗಿತ್ತು, ಮೂರು ದಿನಗಳ ಕಾಲ ಇಟ್ಟುಕೊಂಡ ಅಪಹರಣಕಾರರು 48 ಲಕ್ಷ ರೂಗಳಿಗೆ ಬೇಡಿಕೆ ಇಟ್ಟು ಹಣ ಪಡೆದು ಪ್ರಕಾಶ್ ಅವರನ್ನು ಬಿಟ್ಟು ಕಳಿಸಿದ್ದರು.