ಮೈಸೂರು: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪೂರ್ಣ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿ ಸೋಮಣ್ಣ ಟಕ್ಕರ್ ನೀಡಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಮೈಸೂರಿನಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ವೀ ಎಂದರೆ ವಿಕ್ಟರಿ ಹಾಗಾಗಿ ಸೋಮಣ್ಣ ಅವರ ಗೆಲುವು ವರುಣ ಕ್ಷೇತ್ರದಲ್ಲಿ ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಿಎಂ ಬಸವರಾಜ ಬೊಮ್ಮಾಯಿ ಅವರು ಸಚಿವ ವಿ.ಸೋಮಣ್ಣ ಪರ ಪ್ರಚಾರದಲ್ಲಿ ತೊಡಗಲು ಮೈಸೂರಿಗೆ ಆಗಮಿಸಿದ್ದಾರೆ.
ವಿ.ಸೋಮಣ್ಣ ಅಂದರೇ ವಿಕ್ಟರಿ ಸೋಮಣ್ಣ ಅಂತ, ವರುಣದಲ್ಲಿ ಸೋಮಣ್ಣ ಪರ ಜನ ಬೆಂಬಲ ಸಿಗುತ್ತಿದೆ. ಸೋಮಣ್ಣ ವರುಣಾದಲ್ಲಿ ಗೆದ್ದೇ ಗೆಲ್ಲುತ್ತಾರೆ. ವರುಣಾ ಕ್ಷೇತ್ರ ವರ್ಣಮಯವಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ಸಿಎಂ ಹೇಳಿದರು.
ಜಗದೀಶ್ ಶೆಟ್ಟರ್ ಕಾಂಗ್ರೆಸ್ ಗೆ ಹೋಗಿರುವುದರಿಂದ ಬಿಜೆಪಿಗೆ ಡ್ಯಾಮೇಜ್ ಆಗಲಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಭಾರತೀಯ ಜನತಾ ಪಕ್ಷದಲ್ಲಿ ಕಾರ್ಯಕರ್ತರ ದೊಡ್ಡಪಡೆಯೇ ಇದೆ, ಹಾಗಾಗಿ ಯಾವ ತೊಂದರೆ ಆಗಲಾರದು ಎಂದು ತಿಳಿಸಿದರು.