ಸಾಮಾಜಿಕ ಮಾಧ್ಯಮಗಳ ಬಳಕೆಗೆ ಒತ್ತು ನೀಡಲು ಡಾ.ಪಿ.ಎಸ್.ಹರ್ಷ ಸೂಚನೆ

ಮೈಸೂರು: ಸರ್ಕಾರದ ಕಾರ್ಯಕ್ರಮಗಳ ಕುರಿತು ಸಾರ್ವಜನಿಕರಿಗೆ ವೇಗವಾಗಿ ಮಾಹಿತಿ ನೀಡುವ, ನವಯುಗದ ಮುಖ್ಯ ವೇದಿಕೆಯಾಗಿರುವ ಸಾಮಾಜಿಕ ಮಾಧ್ಯಮಗಳನ್ನು ನಿರಂತರ ಹಾಗೂ ಸಮರ್ಪಕವಾಗಿ ಬಳಸಿಕೊಳ್ಳಲು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾದ ಡಾ. ಪಿ. ಎಸ್. ಹರ್ಷ ಅವರು ಶನಿವಾರ ಮೈಸೂರು ಕಚೇರಿಗೆ ಪರಿಶೀಲನೆ ನಡೆಸಿದ ವೇಳೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಜನರು ಹೆಚ್ಚಾಗಿ ಬಳಸುವ ಫೇಸ್ ಬುಕ್, ಟ್ವಿಟರ್ ಸೇರಿದಂತೆ ಇತರೆ ಸಾಮಾಜಿಕ ಮಾಧ್ಯಮಗಳನ್ನು ಬಹಳ ಸಮರ್ಪಕವಾಗಿ ಬಳಸಿಕೊಳ್ಳಬೇಕು. ಸರ್ಕಾರದ ಜನಪರ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲು ಸಾಮಾಜಿಕ ಮಾಧ್ಯಮ ಪ್ರಮುಖ ವೇದಿಕೆಯಾಗಿದ್ದು, ಕ್ಷಣಮಾತ್ರದಲ್ಲಿ ಮಾಹಿತಿಯನ್ನು ಈ ಮಾಧ್ಯಮದ ಮೂಲಕ ಪಡೆದುಕೊಳ್ಳಬಹುದು ಎಂದು ಹೇಳಿದರು.
ಸರ್ಕಾರ ಮಾಧ್ಯಮ ಪ್ರತಿನಿಧಿಗಳ ಕಲ್ಯಾಣಕ್ಕಾಗಿ ರೂಪಿಸಿರುವ ಕಾರ್ಯಕ್ರಮಗಳು, ಸಮರ್ಪಕ ಅನುಷ್ಠಾನದ ಜೊತೆಯಲ್ಲಿ ಅರ್ಹರಿಗೆ ಸಿಗುವಂತೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು. ಮಾಶಾಸನ, ಅರೋಗ್ಯ ವಿಮೆ, ಮಾಧ್ಯಮ ಮಾನ್ಯತೆ, ಉಚಿತ ಸಾರಿಗೆ ಸೌಲಭ್ಯಗಳು ಅರ್ಹ ಮಾಧ್ಯಮ ಪ್ರತಿನಿಧಿಗಳ ಕೈ ಸೇರಬೇಕು. ಅಧಿಕಾರಿಗಳು ಈ ನಿಟ್ಟಿನಲ್ಲಿ ಪಾರದರ್ಶಕತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಮಾಧ್ಯಮ ಪ್ರತಿನಿಧಿಗಳಿಗೆ, ತರಬೇತಿ ಅವಶ್ಯಕತೆ ಕಂಡುಬಂದಲ್ಲಿ, ಮೈಸೂರು ವಿಶ್ವವಿದ್ಯಾನಿಲಯದ ಸಂಪರ್ಕ ಸಾಧಿಸಿ ತರಬೇತಿ ಆಯೋಜಿಸಬೇಕು ಎಂದರಲ್ಲದೇ ಕೋವಿಡ್-19 ಸಂದರ್ಭದಲ್ಲಿ ಉತ್ತಮವಾಗಿ ಸಾಮಾಜಿಕ ಮಾಧ್ಯಮವನ್ನು ಬಳಸಿಕೊಂಡು, ಸಾರ್ವಜನಿಕರಿಗೆ ಮಾಧ್ಯಮ ಪ್ರತಿನಿಧಿಗಳ ಮೂಲಕ ಮಾಹಿತಿ ತಲುಪಿಸಿದ ಪ್ರಯತ್ನವನ್ನು ನೆನೆದು ಮೆಚ್ಚುಗೆ ವ್ಯಕ್ತ ಪಡಿಸಿದ ಆಯುಕ್ತರು, ಒಳ್ಳೆಯ ಕೆಲಸಗಳಿಗೆ ಸದಾ ಬೆಂಬಲಿಸಲಾಗುವುದು ಎಂದು ತಿಳಿಸಿದರು.
ಮೈಸೂರು ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶವಿದ್ದು, ಪ್ರವಾಸೋದ್ಯಮ ಇಲಾಖೆ ಹಾಗೂ ತಜ್ಞ ಇತಿಹಾಸಕಾರರ ಸಂಪರ್ಕ ಸಾಧಿಸಿ, ದೇಶ ಮತ್ತು ವಿದೇಶದ ಪ್ರವಾಸಿಗಳಿಗೆ, ಮೈಸೂರು ಜಿಲ್ಲೆಯ ಪ್ರವಾಸಿ ತಾಣಗಳ ಪರಿಚಯಿಸುವ ನಿಟ್ಟಿನಲ್ಲಿ, ವಿಶೇಷ ಲೇಖನಗಳನ್ನು ಅಧಿಕಾರಿಗಳು ನಿರಂತರ ಬರೆದು, ಸಮಾಜಿಕ ಮಾಧ್ಯಮ ಸೇರಿದಂತೆ ಮುದ್ರಣ ಹಾಗೂ ದೃಶ್ಯ ಮಾಧ್ಯಮ ಗಳಲ್ಲಿ ಪ್ರಸಾರವಾಗುವಂತೆ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.
ಅಧಿಕಾರಿಗಳು ಕಾರ್ಯ ಶ್ರಮತೆ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು. ಸಭೆ ಮತ್ತು ಸಮಾರಂಭಗಳಿಗೆ ಸಂಬಂಧಪಟ್ಟ ಪತ್ರಿಕಾ ಪ್ರಕಟಣೆಯನ್ನು ಮಾಧ್ಯಮ ಪ್ರತಿನಿಧಿಗಳಿಗೆ ಬಿಡುಗಡೆ ಮಾಡುವ ಜೊತೆಯಲ್ಲಿ ಕಚೇರಿ ಕಡತಗಳು ದಿನನಿತ್ಯ ತಪ್ಪದೆ, ವಿಲೇವಾರಿಯಾಗಬೇಕು ಹಾಗೂ ಕಚೇರಿ ಉತ್ತಮವಾಗಿ ಕಾರ್ಯನಿರ್ವಹಿಸಬೇಕಾದರೆ, ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರ ನಡುವೆ ಉತ್ತಮ ಸಂಬಂಧ ಇರಬೇಕು. ಈ ನಿಟ್ಟಿನಲ್ಲಿ ಸಮನ್ವಯ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದರು.
ಈ ವೇಳೆ ಮೈಸೂರು ಕಚೇರಿಯ ಉಪ ನಿರ್ದೇಶಕ ವಿನೋದ್ ಚಂದ್ರ, ಸಹಾಯಕ ನಿರ್ದೇಶಕ ರಾಜು, ಅಧೀಕ್ಷಕ ಕಿರಣ್ ಸೇರಿದಂತೆ ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.