ಹುಬ್ಬಳ್ಳಿ: ಉತ್ತರ ಕರ್ನಾಟಕ ಸಮಗ್ರ ಅಭಿವೃದ್ದಿಗಾಗಿ ಒತ್ತಾಯಿಸಿ ನಗರದಲ್ಲಿ ಕನ್ನಡ ಚಳುವಳಿ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ವಿಭಿನ್ನ ರೀತಿಯಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಚೆನ್ನಮ್ಮ ವೃತ್ತದ ಬಳಿ ಚಾಪೆಯ ಮೇಲೆ ಮಲಗಿ ವಾಟಾಳ್ ಪ್ರತಿಭಟನೆ ನಡೆಸಿದರು.
ಅವರು ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರ್ಕಾರ ಉತ್ತರ ಕರ್ನಾಟಕದ ಅಭಿವೃದ್ದಿ ಮರೆತಿವೆ. ಕಳೆದ ವರ್ಷ ಸಂಭವಿಸಿದ ಅತಿವೃಷ್ಠಿ ಅನಾವೃಷ್ಟಿಯ ಪರಿಹಾರ ಜನಗಳಿಗೆ ಇನ್ನೂ ತಲುಪಿಲ್ಲ ಎಂದು ಹೇಳಿದರು.
ಉತ್ತರ ಕರ್ನಾಟಕ ಭಾಗವನ್ನು ಸರ್ಕಾರಗಳು ಕಡೆಗಣನೆ ಮಾಡುತ್ತಿವೆ. ಉತ್ತರ ಕರ್ನಾಟಕ ಭಾಗದಲ್ಲಿ ಹೆಸರಿಗೆ ಮಾತ್ರ ಸುವರ್ಣ ಸೌಧ ಕಟ್ಟಲಾಗಿದೆ. ಮುಂದಿನ ದಿನಗಳಲ್ಲಿ ಅದನ್ನು ಸರ್ಕಾರ ಮಾರಾಟ ಮಾಡಲು ಹಿಂದೆಟು ಹಾಕುವದಿಲ್ಲ. ಹೀಗಾಗಿ ಈ ಬೆಳಗಾವಿ ಸುವರ್ಣಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.
ಶೀಘ್ರವೇ ಉತ್ತರ ಕರ್ನಾಟಕ ಭಾಗದ ಸಮಗ್ರ ಅಭಿವೃದ್ದಿಗಾಗಿ ಕೆಲಸ ಮಾಡಬೇಕು ಎಂದು ವಾಟಾಳ್ ನಾಗರಾಜ್ ಒತ್ತಾಯಿಸಿದರು.