ಡಾ.ಗುರುಪ್ರಸಾದ ರಾವ್ ಹವಲ್ದಾರ್
ಲೇಖಕರು ಮತ್ತು ಉಪನ್ಯಾಸಕರು
guruhs@gmail.com
‘Give me blood and I will give you freedom’ ಎನ್ನುತ್ತ ಅಂಡಮಾನ್ ನಿಕೋಬಾರ್ ಪ್ರದೇಶಗಳನ್ನು ವಶಕ್ಕೆ ತೆಗೆದುಕೊಂಡು ದೇಶವನ್ನು ಪ್ರಥಮ ಬಾರಿಗೆ ದಾಸ್ಯಮುಕ್ತವನ್ನಾಗಿ ಮಾಡಿದ ಭಾರತ ಮಾತೆಯ ಈ ಧೀರ ಕುವರನ ಜನುಮ ದಿನವಾದ ಇಂದು .
ವೀರ ಸೇನಾನಿ, ಅಪ್ರತಿಮ ದೇಶಭಕ್ತ ಸುಭಾಷ್ ಚಂದ್ರ ಬೋಸ್ ರವರ 125ನೇ ಜಯಂತಿ ಇಂದು.
ಪರಾಕ್ರಮ್ ದಿವಸ್ ವನ್ನಾಗಿ ದೇಶದಾದ್ಯಂತ ಆಚರಿಸಲಾಗುತ್ತದೆ. ಅಲ್ಲದೇ ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿ ಅವರ ಪ್ರತಿಮೆಯನ್ನು ದೆಹಲಿಯ ಇಂಡಿಯಾ ಗೇಟ್ ಬಳಿ ಪ್ರತಿಷ್ಠಾಪಿಸಲಾಗುತ್ತಿದೆ.
ಭಾರತೀಯರೆಲ್ಲರ ಪ್ರೀತಿಯ “ನೇತಾಜಿ”ಯಾಗಿದ್ದ ಸುಭಾಷ್ ಚಂದ್ರ ಬೋಸ್ ಹುಟ್ಟಿದ್ದು 1897 ಜನವರಿ 23 ರಂದು ಒರಿಸ್ಸಾದ ಕಟಕ್ ನಲ್ಲಿ. ಜಾನಕಿನಾಥ ಬೋಸ್ ಮತ್ತು ಪ್ರಭಾವತಿ ದಂಪತಿಗಳ ಒಂಭತ್ತು ಜನ ಮಕ್ಕಳಲ್ಲಿ ಸುಭಾಷ್ ಆರನೆಯವರು.
ತಂದೆ ಜಾನಕೀನಾಥ್ ಬೋಸ್ ಕಟಕ್ನ ಯಶಸ್ವಿ ವಕೀಲ ಹಾಗೂ ಬಂಗಾಳ ಲೆಜಿಸ್ಲೇಟಿವ್ ಕೌನ್ಸಿಲ್ನ ಸದಸ್ಯ. ಚಿಕ್ಕಪ್ಪ, ದೊಡ್ಡಪ್ಪಂದಿರು, ಸಂಬಂಧಿಕರು ಹಾಗೂ ಅನೇಕ ಕೆಲಸಗಾರರಿಂದ ಗಿಜಿಗುಡುತ್ತಿದ್ದ ಮನೆಯಲ್ಲಿ ಸುಭಾಷ್ ಬೆಳೆದ್ದರು.
ಅವರು ಅಂತರ್ಮುಖಿ ಸ್ವಭಾವದವರಾಗಿದ್ದರು. ‘ಯಾರೂ ಮಹತ್ವವನ್ನೇ ಕೊಡದ ಜೀವ ನಾನು ಎನಿಸುತ್ತಿತ್ತು. ಅಪ್ಪ-ಅಮ್ಮ ನನ್ನನ್ನು ಅತಿ ಭೀತಿಯಲ್ಲಿರುವಂತೆಯೇ ಬೆಳೆಸಿದರು. ಅಷ್ಟೊಂದು ಅಣ್ಣಂದಿರು, ಅಕ್ಕಂದಿರು ಇದ್ದ ವಾತಾವರಣದಲ್ಲಿ ನನ್ನ ಕಡೆ ಯಾರೂ ಲಕ್ಷ್ಯ ಕೊಡುತ್ತಿರಲಿಲ್ಲ ಎನಿಸುತ್ತಿತ್ತು. ನಾನು ಭಿನ್ನ ರೀತಿಯಲ್ಲಿ ಇರಬೇಕು ಎಂದುಕೊಂಡೇ ಬದುಕಲು ಪ್ರಾರಂಭಿಸಿದೆ’ ಎಂದು ಸುಭಾಷ್ ತನ್ನ ಅಪೂರ್ಣ ಆತ್ಮಚರಿತ್ರೆ ‘ಆ್ಯನ್ ಇಂಡಿಯನ್ ಪಿಲ್ಗ್ರಿಮ್’ನಲ್ಲಿ ಬರೆದಿದ್ದಾರೆ.
ಕಟಕ್ ನಲ್ಲಿಯೇ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪೂರೈಸಿದ ಬೋಸ್ ಸಣ್ಣ ವಯಸ್ಸಿನಲ್ಲಿಯೇ ಸ್ವಾಮಿ ವಿವೇಕಾನಂದ, ಮಹರ್ಷಿ ಅರವಿಂದರ ಸಾಹಿತ್ಯಗಳಿಂದ ಪ್ರಭಾವಿತರಾಗಿದ್ದರು.
1912ರಲ್ಲಿ ಆಗಿನ್ನೂ ಸುಭಾ ಷ್ ಗೆ ಹದಿನೈದರ ಹರೆಯ. ಆಗ ಅವರು ಹೀಗೊಂದು ಪತ್ರ ಬರೆದರು: ‘ಅಮ್ಮ, ತಾಯಿ ಭಾರತಿಗೆ ಈಗ ಒಬ್ಬ ನಿಸ್ವಾರ್ಥಿ ಮಗ ಇದ್ದಿದ್ದರೆ ಚೆನ್ನಾಗಿರುತ್ತಿತ್ತು. ನಮ್ಮ ಮಾತೃಭೂಮಿಗೆ ಅಷ್ಟೂ ಅದೃಷ್ಟವಿಲ್ಲವೇ? ಭಾರತಮಾತೆಯ ಯಾವೊಬ್ಬ ಮಗನೂ ತನ್ನ ಹಿತಾಸಕ್ತಿ, ಸ್ವಾರ್ಥ ಚಿಂತನೆಯನ್ನು ಬಿಟ್ಟು ತನ್ನ ಇಡೀ ಬದುಕನ್ನು ತಾಯಿಗಾಗಿ ಮುಡಿಪಿಡಲಾರನೇ? ಅಮ್ಮ, ನಿನ್ನ ಈ ಮಗ ಅದಕ್ಕೆ ಸಿದ್ಧನಿರುವನೇ? ಇತರರ ಸೇವೆಯಲ್ಲಿ ಬದುಕುವುದೇ ಶ್ರೇಷ್ಠ ಜೀವನವಲ್ಲವೇ?’ ತನಗೆ ಅರಿವೇ ಇಲ್ಲದಂತೆ ಬಾಲಕ ಸುಭಾಷ್ ಚಂದ್ರ ಬೋಸ್, ಮುಂದೆ ತಾನು ಏನಾಗಬೇಕು ಎಂದುಕೊಂಡಿದ್ದನೋ ಅದನ್ನು ಆ ಪತ್ರದಲ್ಲಿ ಬರೆದಿದ್ದರು. ತನ್ನ ಇಡೀ ಬದುಕನ್ನು ದೇಶಕ್ಕಾಗಿ ಮುಡಿಪಿಡುವ ಭಾರತಮಾತೆಯ ನಿಜವಾದ ಮಗ ಆಗಿದ್ದು.
ಕಠಿಣಕರವಾದ ಐಸಿಎಸ್ ಪರೀಕ್ಷೆ ಬರೆಯಲು 1919ರಲ್ಲಿ ಸುಭಾಷ್ ಕೇಂಬ್ರಿಡ್ಜ್ಗೆ ಹೋದರು. ಕೇವಲ ಎಂಟೇ ತಿಂಗಳಲ್ಲಿ ತಯಾರಾಗಿ, ಪರೀಕ್ಷೆಯಲ್ಲಿ ನಾಲ್ಕನೇ ಸ್ಥಾನ ಪಡೆದು ತೇರ್ಗಡೆಯಾದರು. ಬ್ರಿಟಿಷರ ಕೆಳಗೆ ಕೆಲಸ ಮಾಡಲು ಒಪ್ಪದ ಸುಭಾಷ್, ಫೈರ್ ಬ್ರಾಂಡ್ ಅರ್ಥಾತ್ ಕಲಹಪ್ರೇರಕ ದೇಶಭಕ್ತ ಆಗಿದ್ದರು.
1919ರಲ್ಲಿ ತತ್ವಶಾಸ್ತ್ರ ವಿಷಯದಲ್ಲಿ ಬಿ.ಎ. ಪದವಿ ಪಡೆದ ಬೋಸ್ 1920 ರ ಸಪ್ಟೆಂಬರ್ ನಲ್ಲಿ ಇಂಗ್ಲೆಂಡ್ ನಲ್ಲಿ ನಡೆದ ಐ.ಸಿ.ಎಸ್. ಪರೀಕ್ಷೆಯಲ್ಲಿ ನಾಲ್ಕನೆ ಸ್ಥಾನದೊಂದಿಗೆ ಉತ್ತೀರ್ಣರಾದರು.
ಲೋಕಮಾನ್ಯ ತಿಲಕರು ಆ ವರ್ಷ ಕೇಂಬ್ರಿಡ್ಜ್ಗೆ ಭೇಟಿ ನೀಡಿ, ಬ್ರಿಟಿಷರಿಗಾಗಿ ಕೆಲಸ ಮಾಡದೆ ದೇಶಕ್ಕಾಗಿ ಕೆಲಸ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದರು.
ತನ್ನ ಸಹೋದರ ಶರತ್ ಚಂದ್ರ ಬೋಸ್ಗೆ ಆಗ ಸುಭಾಷ್ ಹೀಗೊಂದು ಪತ್ರ ಬರೆದರು: ‘ನನಗೆ ಗುಲಾಮಗಿರಿಯ ಬದುಕು ಸಾಧ್ಯವಿಲ್ಲ. ಈ ಕೆಲಸವನ್ನು ನಾನು ಮಾಡುವುದಿಲ್ಲ’. 1920ರಲ್ಲಿ ಕೇಂಬ್ರಿಡ್ಜ್ ಪದವೀಧರನಾಗಿ ಬೋಸರು ಹೊರಬಂದರು. ಆಗ ಸ್ವಾತಂತ್ರ್ಯ ಚಳವಳಿಗೆ ಧುಮುಕುವಂತೆ ಐಸಿಎಸ್ ವಿದ್ಯಾರ್ಥಿಗಳನ್ನು ಅರಬಿಂದೊ ಹುರುದುಂಬಿಸಿದರು. ಅವರ ಜಾಡನ್ನು ಅನುಸರಿಸಿ 1921ರ ಏಪ್ರಿಲ್ 22ರಂದು ಸುಭಾಷ್ ರಾಜೀನಾಮೆ ನೀಡಿ, ಮನೆಗೆ ಬಂದರು.
ಇಂಗ್ಲೆಂಡ್ನಿಂದ ವಾಪಸ್ಸಾದ ನಂತರ ಸುಭಾಷರು ಮಹಾತ್ಮ ಗಾಂಧಿಯನ್ನು ಭೇಟಿ ಮಾಡಿದರು. ದೇಶಬಂಧು ಚಿತ್ತರಂಜನ್ ದಾಸ್ ಅವರನ್ನು ಭೇಟಿ ಮಾಡುವಂತೆ ಗಾಂಧಿ ಸೂಚಿಸಿದರು. ತೀವ್ರ ರಾಷ್ಟ್ರೀಯತಾವಾದದ ವಕ್ತಾರರಾಗಿದ್ದ ಸಿ.ಆರ್.ದಾಸ್, ಸುಭಾಷರ ಗುರುವಾದರು. ಕಷ್ಟದ ಹಾದಿಗಳನ್ನೇ ಒಳಗೊಂಡಿದ್ದ ಸ್ವಾತಂತ್ರ್ಯ ಚಳವಳಿಗೆ ಬೋಸ್ ಸಕ್ರಿಯವಾಗಿ ಧುಮುಕಿದರು.
1921ರ ಆಗಸ್ಟ್ ನಿಂದ ಚಿತ್ತರಂಜನ್ ದಾಸ್ ರವರ ಮಾರ್ಗದರ್ಶನದಲ್ಲಿ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸುವ ಸಲುವಾಗಿ ಯುವಕರನ್ನು ಸಂಘಟಿಸುವಲ್ಲಿ ನಿರತರಾದರು. ಬ್ರಿಟೀಷರನ್ನು ಕುರಿತಂತೆ ಕಾಂಗ್ರೆಸ್ ಪಕ್ಷವು ತಾಳಿದ್ದ ದ್ವಂದ್ವ ನೀತಿಗಳಿಂದ ಬೇಸತ್ತ ಬೋಸ್ ತಾವು ಚಿತ್ತರಂಜನ್ ದಾಸ್ ರವರ ಜತೆಗೂಡಿ “ಸ್ವರಾಜ್ಯ ಪಕ್ಷ”ದ ಸ್ಥಾಪನೆ ಮಾಡಿದರು.
1923ರ ಅಕ್ತೋಬರ್ ನಲ್ಲಿ ಚಿತ್ತರಂಜನ್ ದಾಸ್ ರವರು ಆರಂಭಿಸಿದ “ಫಾರ್ವರ್ಡ್” ದಿನಪತ್ರಿಕೆಯ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತ ಬೋಸ್ 1925 ಜೂನ್ 16 ರಂದು ಚಿತ್ತರಂಜನ್ ದಾಸ್ ನಿಧನದ ಬಳಿಕ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡರು. ಬಹಳ ಬೇಗ ಬ್ರಿಟಿಷರ ಪರಮ ವೈರಿಯಾಗಿ ಗುರುತಾದರು.
ಬ್ರಿಟಿಷರು ಅವರನ್ನು ಅಪಾಯಕಾರಿ ಮನುಷ್ಯನೆಂದು ಗುರುತಿಸಿ ಸೆರೆಯಲ್ಲಿ ಇಟ್ಟರು.
1921ರಿಂದ 1940ರ ಅವಧಿಯಲ್ಲಿ ಯಾವುದೇ ಕಾರಣಗಳಿಲ್ಲದೆ ಹನ್ನೊಂದು ಸಲ ಅವರು ಬಂಧಿತರಾಗಿ ಜೈಲು ಸೇರಬೇಕಾಯಿತು.
ಸುಭಾಷ್ 1931ರಲ್ಲಿ ಕೋಲ್ಕತ್ತ ಕಾರ್ಪೊರೇಷನ್ನ ಮೇಯರ್ ಆಗಿದ್ದರು. ಏಕಾಂಗಿ ಆಗುವಂತೆ ಮಾಡಿತು. ಎಲ್ಲರ ಮೇಲೂ ಪೊಲೀಸರು ದಾಳಿಯಿಟ್ಟರು. ಅದರಲ್ಲೂ ಮೇಯರ್ ಅವರ ಮುಖ್ಯ ಗುರಿಯಾಗಿದ್ದರು. ಲಾಠಿಗಳಿಂದ ಥಳಿಸಿದರು. ಆ ಹೊಡೆತದಿಂದ ತಪ್ಪಿಸಿಕೊಳ್ಳಲು ಬೋಸ್ ಬಲಗೈಯನ್ನು ಅಡ್ಡ ಹಿಡಿದರು ಅವರನ್ನು ಬಂಧಿಸಿ, ಒಂಟಿ ಸೆರೆಯಲ್ಲಿ ಮರುದಿನದವರೆಗೆ ಇರಿಸಿದ್ದರು.
ಚಿಕಿತ್ಸೆ ಕೂಡ ಕೊಡಿಸಿರಲಿಲ್ಲ. ಇಂಥದ್ದೇ ಲಾಠಿಚಾರ್ಜ್ನಿಂದ ಗಂಭೀರವಾಗಿ ಗಾಯಗೊಂಡೇ ಲಾಲಾ ಲಜಪತ ರಾಯ್ ಅವರು ಮೃತಪಟ್ಟಿದ್ದು’. 1931ರಲ್ಲಿ ನಡೆದ ಈ ಘಟನೆಯನ್ನು ನೇತಾಜಿ 1943ರಲ್ಲಿ ಸಿಂಗಪುರದಿಂದ ರೇಡಿಯೊ ಮೂಲಕ ಮಾತನಾಡಿದಾಗ ನೆನಪಿಸಿಕೊಂಡಿದ್ದರು.
1934ರಲ್ಲಿ ತನ್ನ ತಂದೆ ಮೃತಪಟ್ಟಾಗ ಕೋಲ್ಕತ್ತ ವಿಮಾನ ನಿಲ್ದಾಣದಲ್ಲಿ ನೇತಾಜಿ ಅವರನ್ನು ಇಳಿಸಿ, ಅಂತಿಮ ಸಂಸ್ಕಾರ ಮಾಡಲು ಅಲ್ಪ ಸಮಯವನ್ನಷ್ಟೇ ಬ್ರಿಟಿಷರು ನೀಡಿದರು. ಬೇಗ ಅವರು ಮರಳಬೇಕು ಎಂದು ತಾಕೀತು ಮಾಡಿಯೇ ಅಂತಿಮ ಸಂಸ್ಕಾರಕ್ಕೆ ಅವರನ್ನು ಕಳುಹಿಸಿಕೊಟ್ಟಿದ್ದು. 1936ರಲ್ಲಿ ಬೋಸ್ ಯುರೋಪ್ನಿಂದ ಮರಳಿದರು. 1938ರ ಹೊತ್ತಿಗೆ ರಾಷ್ಟ್ರ ಮಟ್ಟದ ನಾಯಕರಾಗಿ ಅವರು ಬೆಳೆದು, ಕಾಂಗ್ರೆಸ್ನ ಅಧ್ಯಕ್ಷರಾಗಿಯೂ ಆಯ್ಕೆಯಾದರು.
‘ದೇಶಭಕ್ತರ ದೇಶಭಕ್ತ’ ಎಂದು ಹೆಸರಾಗಿದ್ದ ಸುಭಾಷ್ ಚಂದ್ರ ಬೋಸ್ ಅವರನ್ನು ಗಾಂಧಿ ‘ದೇಶಭಕ್ತರ ದೊರೆ’ ಎಂದೇ ಹೊಗಳಿದ್ದರು. ನಮಗೆಲ್ಲಾ ತಿಳಿದಿರುವಂತೆ 1940ರ ಆಸುಪಾಸಿನಲ್ಲಿ ಗಾಂಧೀಜಿಯವರ ಶಾಂತಿಪೂರ್ವಕ ಯೋಜನೆಗಳಲ್ಲಿ ವಿಶ್ವಾಸ ಕಳೆದುಕೊಂಡ ನೇತಾಜಿ, ಅವರ ಹಾಗೂ ಗಾಂಧಿ ನಡುವಿನ ಭಿನ್ನಾಭಿಪ್ರಾಯಗಳು ಹೆಚ್ಚಾದವು. ಕಾಂಗ್ರೆಸ್ಸಿನ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆಯಿತ್ತು ಹೊರನಡೆದರು.
1941ರ ಜನವರಿ ವೇಳೆ ಪವಾಡದಂತೆ ರಾತ್ರೋರಾತ್ರಿ ಗೃಹಬಂಧನದಿಂದ ತಪ್ಪಿಸಿಕೊಂಡ ಸುಭಾಷ್ ವಿವಿಧ ಮಾರುವೇಷಗಳನ್ನು ಧರಿಸಿ ಬ್ರಿಟೀಷರಿಗೆ ಚಳ್ಳೆ ಹಣ್ಣು ತಿನ್ನಿಸಿ, ಅಫ್ಘಾನಿಸ್ತಾನ ಮಾರ್ಗದಲ್ಲಿ ದೂರದ ರಷ್ಯಾ, ಯೂರೋಪ್ ವರೆಗೂ ಸಂಚರಿಸಿದರು. ಬ್ರಿಟಿಷರ ಶತ್ರುಗಳಾದ ಹಿಟ್ಲರ್ ಮತ್ತು ಮುಸಲೋನಿ ಸೇರಿದಂತೆ ಅನೇಕ ನಾಯಕರನ್ನು ಭೇಟಿಯಾಗಿ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಸೈನಿಕ ಸಹಾಯ ಮಾಡುವಂತೆ ಮನವಿ ಮಾಡಿದರು.
ದಿ ಇಂಡಿಯನ್ ಸ್ಟ್ರಗಲ್’ ಎಂಬ ಸಮಕಾಲೀನ ಭಾರತ ಚರಿತ್ರೆಯ ಪುಸ್ತಕ ಬರೆಯಲಾರಂಭಿಸಿದ್ದ ಸುಭಾಷ್ ಅವರಿಗೆ ಆಗ ತಕ್ಷಣಕ್ಕೆ ಒಬ್ಬ ಸಹಾಯಕ ಅಥವಾ ಸಹಾಯಕಿಯ ಅವಶ್ಯಕತೆ ಇತ್ತು. ಶಾರ್ಟ್ಹ್ಯಾಂಡ್ ಗೊತ್ತಿದ್ದ, ಟೈಪಿಂಗ್ ಕೌಶಲವೂ ಇದ್ದ ಎಮಿಲಿ ಅವರನ್ನೇ ಸಹಾಯಕಿಯಾಗಿ ನೇಮಿಸಿಕೊಂಡರು.
ಹೊರದೇಶದಲ್ಲಿ ಇದ್ದುಕೊಂಡು ರಾಜಕೀಯ ಕೆಲಸವನ್ನೂ ಮಾಡುತ್ತಿದ್ದ ಬೋಸರಿಗೆ ಆ ಕಾರ್ಯದಲ್ಲೂ ನೆರವಾದ ಎಮಿಲಿ ಅವರದ್ದು ಸ್ಫೂರ್ತಿದಾಯಕ ವ್ಯಕ್ತಿತ್ವ. ಇಬ್ಬರ ನಡುವೆ ಪ್ರೇಮಾಂಕುರವಾಗಿ, 1942ರ ಜನವರಿಯಲ್ಲಿ ಹಿಂದೂ ಸಂಪ್ರದಾಯದಂತೆ, ಆಸ್ಟ್ರಿಯಾ ಮೂಲದ ಎಮಿಲಿ ಶೆಂಕ್ಲ್ ಮದುವೆಯಾದರು. 1942ರ ನವೆಂಬರ್ನಲ್ಲಿ ಮಗಳು ಅನಿತಾ ಹುಟ್ಟಿದಳು.
ಆದರೆ ದೂರದ ಜರ್ಮನಿ ಮತ್ತು ಯೂರೋಪಿನ ಇತರ ದೇಶಗಳಿಗಿಂತ ಹತ್ತಿರದ ಜಪಾನಿನ ಮೂಲಕ ಸೈನಿಕ ಆಕ್ರಮಣ ಸುಲಭವೆಂದು ತಿಳಿದುಬಂದುದರಿಂದ, ಜರ್ಮನಿ, ಇಟಲಿ ಮುಂತಾದ ಯೂರೋಪಿಯನ್ ದೇಶಗಳಿಂದ ಪರೋಕ್ಷ ಸಹಾಯದ ಭರವಸೆಯನ್ನು ಪಡೆದು, ಜರ್ಮನಿಯಿಂದ ಸಬ್ ಮೆರಿನ್ ಮೂಲಕ 1943ರಲ್ಲಿ ಸಿಂಗಪುರ, ಜಪಾನ್ ತಲುಪಿದರು.
ಬ್ರಿಟನ್ನಿನ ವಿರೋಧಿಯಾಗಿದ್ದ ಜಪಾನ್ ನ ಪ್ರಧಾನಿ ತೋಜೋ ಸುಭಾಷರ ವ್ಯಕ್ತಿತ್ವಕ್ಕೆ ಮಾರುಹೋಗಿ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಪೂರ್ಣ ಪ್ರಮಾಣದ ಬೆಂಬಲ ನೀಡಿದರು.
ಬೋಸರಿಗೆ ‘ನೇತಾಜಿ’ ಎಂದು ಅವರ ಅನುಯಾಯಿಗಳು ಹೆಸರು ಕೊಟ್ಟಿದ್ದು ಜರ್ಮನಿಯಲ್ಲಿ. ಮೊದಲ ಬಾರಿಗೆ ಭಾರತದ ರಾಷ್ಟ್ರಗೀತೆ ವಿದೇಶಿ ನೆಲದಲ್ಲಿ ಕೇಳುವಂತೆ ಮಾಡಿದ್ದೇ ಬೋಸ್. ಅದೂ ಜರ್ಮನಿಯಲ್ಲಿಯೇ. ಬೆಂಬಲ ಯಾಚಿಸಿ ನಡೆಸಿದ ಸಮಾವೇಶದಲ್ಲಿ ಆಗ ರಾಷ್ಟ್ರಗೀತೆ ಹೊಮ್ಮಿದ್ದು. ಧಮನಿ ಧಮನಿಗಳಲ್ಲಿ ಕ್ಷಾತ್ರ ತುಂಬುವಷ್ಟು ಪ್ರಬಲವಾದ ‘ಜೈ ಹಿಂದ್’ ಎಂಬ ಘೋಷವಾಕ್ಯ ನೀಡಿದ್ದು ಕೂಡ ನೇತಾಜಿ.
ಎರಡನೇ ಮಹಾಯುದ್ಧದ ಸಂದರ್ಭವನ್ನು ಸರಿಯಾಗಿ ಬಳಸಿಕೊಂಡು ಬ್ರಿಟಿಷರ ವಿರುದ್ಧ ಜಪಾನ್ ಮತ್ತು ಅದರ ಮಿತ್ರ ರಾಷ್ಟ್ರಗಳ ಸಹಕಾರದಿಂದ ಮಿಲಿಟರಿ ಆಕ್ರಮಣ ಮಾಡಿದರೆ ಬ್ರಿಟಿಷರನ್ನು ಭಾರತದಿಂದ ಹೊಡೆದು ಓಡಿಸಬಹುದು ಎಂದು ಲೆಕ್ಕಾಚಾರ ಹಾಕಿದ ಸುಭಾಷ್ ಸೈನ್ಯವನ್ನು ಕಟ್ಟಲು ಬಯಸಿದರು.
ಅದಕ್ಕೆ ಪೂರಕವಾಗಿ ಅದಾಗಲೇ ಪೂರ್ವ ಏಷ್ಯಾ ದೇಶಗಳಲ್ಲಿ ನಿರಂತರ ಸಂಘಟನೆ ಮಾಡುತ್ತಾ ಸೈನ್ಯವೊಂದನ್ನು ಕಟ್ಟಿದ್ದ ರಾಸ್ ಬಿಹಾರಿ ಬೋಸ್ ರವರು ತಮ್ಮ ನಂತರ ಸುಭಾಷರೇ ಈ ಸೈನ್ಯಕ್ಕೆ ಸಮರ್ಥ ನೇತೃತ್ವ ವಹಿಸಬಲ್ಲ ನಾಯಕ ಎಂಬುದನ್ನು ಮನಗಂಡು ಸೈನ್ಯದ ನೇತೃತ್ವವನ್ನು ಸುಭಾಷ್ ಚಂದ್ರ ಬೋಸರಿಗೆ ಹಸ್ತಾಂತರಿಸಿದರು.
ಎರಡನೇ ಮಹಾಯುದ್ಧದಲ್ಲಿ ಬ್ರಿಟಿಷರ ಪರವಾಗಿ ಹೋರಾಡಲು ಬಂದು ಜಪಾನಿನ ಕೈಲಿ ಪರಾಭವ ಹೊಂದಿದ ಕಾರಣದಿಂದಾಗಿ ಯುದ್ಧಕೈದಿಗಳಾಗಿ ಜಪಾನ್ ದೇಶದ ಕೈಲಿ ಸೆರೆಯಲ್ಲಿದ್ದ ಭಾರತೀಯ ಸೈನಿಕರನ್ನು ಸೆರೆಯಿಂದ ಬಿಡಿಸಿದ ಸುಭಾಷರು ತಮ್ಮ ನಿಷ್ಠೆಯನ್ನು ಬ್ರಿಟಿಷರ ಮೇಲಿಂದ ಕಿತ್ತು ತೆಗೆಯುವಂತೆ ಆ ಸೈನಿಕರಿಗೆ ಪ್ರೇರಣೆ ನೀಡುತ್ತಾರೆ.
ಅದರಲ್ಲಿ ಯಶ ಸಾಧಿಸಿದ ಅವರು 1943ರಲ್ಲಿ ಆಜಾದ್ ಹಿಂದ್ ಫೌಜ್ ಅಥವಾ ಇಂಡಿಯನ್ ನ್ಯಾಷನಲ್ ಆರ್ಮಿ (ಐ ಎನ್ ಎ) ಯ ಕಮಾಂಡರ್ ಇನ್ ಚೀಫ್ ಆಗಿ ನೇಮಕಗೊಳ್ಳುತ್ತಾರೆ.
ಸೈನಿಕರು ಸುಭಾಷರ ವಿರೋಚಿತ ಮಾತುಗಳಿಂದ ಸ್ಫೂರ್ತಿಗೊಂಡು ತಮ್ಮ ನಿಷ್ಠೆಯನ್ನು ಸುಭಾಷರಿಗೆ ಘೋಷಿಸುತ್ತಾರೆ. ಭಾರತದ ಸ್ವಾತಂತ್ರ್ಯಪ್ರಾಪ್ತಿಗಾಗಿ ಹೋರಾಡಲು ನೇತಾಜಿಯವರ ಆದೇಶವನ್ನು ಪಾಲಿಸಲು ಕಟಿಬದ್ಧರಾಗುತ್ತಾರೆ.
ಇದಾದ ನಂತರ ಸುಭಾಷ್ ಚಂದ್ರ ಬೋಸರು ಜಪಾನಿ ಸರ್ಕಾರದ ಜೊತೆ ಸಮಾಲೋಚನೆ ನಡೆಸಿ ಸ್ವತಂತ್ರ ಭಾರತದ ಹಂಗಾಮಿ ಸರ್ಕಾರವೊಂದರ ಸ್ಥಾಪನೆಯ ನಿರ್ಧಾರ ಕೈಗೊಳ್ಳುತ್ತಾರೆ. ದಿನಾಂಕ 21 ಅಕ್ಟೋಬರ್ 1943 ರಂದು ಸಿಂಗಪುರದಲ್ಲಿ ಸ್ವತಂತ್ರ ಭಾರತದ ಸರ್ಕಾರ ರಚನೆಯಾಗಲು ವೇದಿಕೆ ಸಿದ್ಧವಾಗುತ್ತದೆ. ಸುಭಾಷ್ ಚಂದ್ರ ಬೋಸರು ಆ ಸರ್ಕಾರದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಸುಭಾಷರೊಂದಿಗೆ ಸಚಿವ ಸಂಪುಟದ ಸದಸ್ಯರೂ ಸಹಾ ಪ್ರಮಾಣ ವಚನ ಸ್ವೀಕರಿಸಿ ಸುಭಾಷರಿಗೆ ತಮ್ಮ ನಿಷ್ಠೆಯನ್ನು ಘೋಷಿಸುತ್ತಾರೆ.
ರಾಸ್ ಬಿಹಾರಿ ಬೋಸರು ಸರ್ಕಾರದ ಸರ್ವೋಚ್ಛ ಸಲಹೆಗಾರರಾಗಿಯೂ, ಕ್ಯಾಪ್ಟನ್ ಲಕ್ಷ್ಮಿ ಸೆಹೆಗಲ್ ಮಹಿಳಾ ಸಂಘಟನಾ ಮಂತ್ರಿಯಾಗಿಯೂ, ಲೆಫ್ಟಿನೆಂಟ್ ಕರ್ನಲ್ ಚಟರ್ಜಿರವರು ವಿತ್ತ ಸಚಿವರಾಗಿಯೂ, ಮಾಹಿತಿ ಹಾಗೂ ಪ್ರಚಾರ ಖಾತೆ ಸಚಿವರಾಗಿ ಎಸ್. ಎ. ಅಯ್ಯರ್ ರವರೂ, ಸರ್ಕಾರದ ಕಾರ್ಯದರ್ಶಿಯಾಗಿ ಸಹಾಯ್ ರವರೂ, ಕಾನೂನು ಸಲಹೆಗಾರರಾಗಿ ಎ. ಎನ್. ಸರ್ಕಾರ್ ರವರೂ, ಸೇನೆಯ ಬೇರೆ ಬೇರೆ ವಿಭಾಗಗಳ ಮುಖ್ಯಸ್ಥರುಗಳೂ ಅಂದು ಸುಭಾಷರೊಂದಿಗೆ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಯುದ್ಧ ಮತ್ತು ವಿದೇಶಾಂಗ ವ್ಯವಹಾರಗಳ ಖಾತೆಯನ್ನು ಸುಭಾಷರು ತಮ್ಮ ಬಳಿಯೇ ಇಟ್ಟುಕೊಳ್ಳುತ್ತಾರೆ.
ಪೂರ್ವ ಏಷ್ಯಾದಲ್ಲಿ ನೆಲೆಸಿದ್ದ ಇಪ್ಪತ್ತು ಲಕ್ಷ ಜನ ಭಾರತೀಯರು ಮತ್ತು 50,000 ಕ್ಕೂ ಹೆಚ್ಚು ಆಜಾದ್ ಹಿಂದ್ ಫೌಜ್ ನ ಸೈನಿಕರು ಸುಭಾಷರನ್ನು ತಮ್ಮ ನಾಯಕನೆಂದು ಸ್ವೀಕರಿಸುತ್ತಾರೆ. ಹೊಸ ಸರ್ಕಾರಕ್ಕೆ ನಿಷ್ಠೆಯನ್ನು ವ್ಯಕ್ತಪಡಿಸುತ್ತಾರೆ. ಜನರು ದೇಶದ ಪೂರ್ಣ ಸ್ವಾತಂತ್ರ್ಯಕ್ಕಾಗಿ ತನು ಮನ ಧನಗಳನ್ನು ಅರ್ಪಿಸಲು ಸಿದ್ಧರಾದರೆ, ಸೈನಿಕರು ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಯುದ್ಧದಲ್ಲಿ ಪ್ರಾಣ ಕೊಡಲು ಸಿದ್ಧವಿರುವುದಾಗಿ ಪ್ರಮಾಣ ಮಾಡುತ್ತಾರೆ.
ಅಜಾದ್ ಹಿಂದ್ ಸರ್ಕಾರ ರಚನೆಯಾದ ಕೇವಲ ಎರಡೇ ದಿನಗಳಲ್ಲಿ ಜಪಾನ್ ಆ ಸರ್ಕಾರಕ್ಕೆ ಮಾನ್ಯತೆ ನೀಡಿತು. ಕೂಡಲೇ ಜಪಾನ್ ಸೇರಿದಂತೆ ಬರ್ಮಾ, ಜರ್ಮನಿ, ಕ್ರೋಷಿಯಾ, ಫಿಲಿಫೈನ್ಸ್, ನಾನ್ ಕಿಂಗ್, ಚೀನಾ, ಸಯಾಂ, ಇಟಲಿ, ಮಾಂಚುಕುವೋನಂಥಾ ಒಂಭತ್ತು ರಾಷ್ಟ್ರಗಳು ಆಜಾದ್ ಹಿಂದ್ ಸರ್ಕಾರವನ್ನು ಭಾರತ ಸರ್ಕಾರವೆಂದು ಸುಭಾಷರನ್ನು ಭಾರತದ ಪ್ರಧಾನ ಮಂತ್ರಿಯೆಂದು ಮಾನ್ಯತೆ ನೀಡಿದವು.
ಸುಭಾಷರು ಸಿಂಗಪುರದ ಕೆಥೆ ಥಿಯೇಟರ್ ನಲ್ಲಿ ಕಿಕ್ಕಿರಿದು ಸೇರಿದ್ದ ಜನ ಸಮೂಹದ ನಡುವೆ ಕಿವಿಗಡಚಿಕ್ಕುವ ಚಪ್ಪಾಳೆ ಮತ್ತು ಹರ್ಷೋದ್ಗಾರಗಳ ನಡುವೆ ಅಂದು ಪ್ರಮಾಣ ವಚನ ಸ್ವೀಕರಿಸಿದ್ದು ಹೀಗೆ..
“ಸುಭಾಷ್ ಚಂದ್ರ ಬೋಸ್ ಎಂಬ ಹೆಸರಿನ ನಾನು ಈಶ್ವರನ ಮೇಲೆ ಆಣೆ ಮಾಡುತ್ತಾ ಶಪಥ ಮಾಡುತ್ತೇನೆ. ಹಿಂದುಸ್ಥಾನ ಮತ್ತು ನನ್ನ ಮೂವತ್ತೆಂಟು ಕೋಟಿ ದೇಶಬಾಂಧವರನ್ನು ದಾಸ್ಯದಿಂದ ಮುಕ್ತಗೊಳಿಸುವುದಕ್ಕಾಗಿ ನನ್ನ ಜೀವನದ ಕೊನೆಯ ಕ್ಷಣದವರೆಗೆ ಸ್ವಾತಂತ್ರ್ಯ ಯುದ್ಧದ ಪುಣ್ಯಜ್ವಾಲೆಯನ್ನು ಪ್ರಜ್ವಲಿಸುತ್ತೇನೆ. ಹಿಂದುಸ್ಥಾನದ ಸೇವಕನಾಗಿ ನನ್ನ ದೇಶಬಾಂಧವರಾದ ಬಂಧು ಭಗಿನಿಯರ ಸೇವೆ ಮಾಡುವುದು ನನ್ನ ಪರಮ ಕರ್ತವ್ಯವೆಂದು ಭಾವಿಸುತ್ತೇನೆ. ಸ್ವಾತಂತ್ರ್ಯ ದೊರೆತ ನಂತರ ದೇಶದ ರಕ್ಷಣೆಗಾಗಿ ನನ್ನ ರಕ್ತದ ಪ್ರತಿ ಹನಿಯನ್ನು ಅರ್ಪಿಸುತ್ತೇನೆ.”
ನೇತಾಜಿ ಸುಭಾಷ್ ಚಂದ್ರ ಬೋಸರು ಪ್ರತಿಜ್ಞಾವಿಧಿಯನ್ನು ಸ್ವೀಕರಿಸುವಾಗ ವಾತಾವರಣ ತೀವ್ರ ಭಾವೋತ್ಕರ್ಷದಿಂದ ಕೂಡಿತ್ತು. ದೇಶ ವಿದೇಶಗಳ ಅನೇಕ ಗಣ್ಯರೂ, ಪ್ರತಿನಿಧಿಗಳು ಈ ಐತಿಹಾಸಿಕ ಸಮಾರಂಭಕ್ಕೆ ಸಾಕ್ಷಿಯಾಗಲು ಆಗಮಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರೂ ಎದ್ದು ನಿಂತು ಒಟ್ಟಾಗಿ ರಾಷ್ಟ್ರಗೀತೆ ಹಾಡಿದರು.
ಭಾರತದಲ್ಲಿ ವಾಸಿಸುತ್ತಿದ್ದ ಜನಸಾಮಾನ್ಯರ ಮೇಲೂ ಸಿಂಗಪುರದಲ್ಲಿ ನಡೆದ ಈ ಘಟನೆ ಅತ್ಯಂತ ಮಹತ್ವದ ಪರಿಣಾಮ ಬೀರಿತು. ಸುಭಾಷರ ದನಿಯನ್ನು ರೇಡಿಯೋದಲ್ಲಿ ಕೇಳಿದ ಜನ ಭಾರತವನ್ನು ಬ್ರಿಟೀಷರ ಕಪಿಮುಷ್ಠಿಯಿಂದ ಬಿಡುಗಡೆಗೊಳಿಸಲು ನೇತಾಜಿ ಬಂದೇ ಬರುವರೆಂದು ನಂಬಿದರು. ನೇತಾಜಿಯವರ ಪ್ರತಿ ನಡೆ ನುಡಿಯೂ ಅವರಿಗೆ ರೋಮಾಂಚನವನ್ನುಂಟು ಮಾಡುತ್ತಿತ್ತು.
ಸುಭಾಷರು ಹೆಸರಿಗೆ ಮಾತ್ರ ಒಂದು ಸರ್ಕಾರ ರಚಿಸಿ ಸುಮ್ಮನೆ ಕೈ ಕಟ್ಟಿ ಕೂರಲಿಲ್ಲ. ಒಂದು ದೇಶಕ್ಕೆ ಮತ್ತು ಜವಾಬ್ದಾರಿಯುತ ಸರ್ಕಾರಕ್ಕೆ ಇರಬೇಕಾದ ರಾಷ್ಟ್ರ ಧ್ವಜ, ರಾಷ್ಟ್ರ ಗೀತೆ, ರಾಷ್ಟ್ರ ಭಾಷೆಯನ್ನು ನಿರ್ಧರಿಸಿದರು. ರಾಷ್ಟ್ರೀಯ ಸೈನ್ಯವನ್ನು ಕಟ್ಟಿ ನೋಟುಗಳು, ಅಂಚೆಚೀಟಿಗಳು, ಬ್ಯಾಂಕುಗಳು ಎಲ್ಲವನ್ನು ಆರಂಭಿಸಿದರು. ವಿವಿಧ ದೇಶಗಳಿಗೆ ರಾಯಭಾರಿಗಳು, ಕಛೇರಿಗಳು, ವಶಪಡಿಸಿಕೊಂಡ ರಾಜ್ಯಗಳಿಗೆ ರಾಜ್ಯಪಾಲರು, ಆಡಳಿತ ಪ್ರತಿನಿಧಿಗಳು, ಸೈನ್ಯಾಧಿಕಾರಿಗಳು, ಕಮಿಷನರುಗಳು, ಎಲ್ಲರನ್ನೂ ನೇಮಿಸಿದರು.
ಭಾರತ ದೇಶದ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸುಭಾಷರು ಕೇವಲ ಎರಡೇ ದಿನಗಳಲ್ಲಿ ಇಂಗ್ಲೆಂಡ್ ಮತ್ತು ಅಮೆರಿಕಾ ದೇಶಗಳ ಮೇಲೆ ಯುದ್ಧ ಘೋಷಿಸಿದರು. ಜಪಾನಿನ ವಶದಲ್ಲಿದ್ದ ಅಂಡಾಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ಭಾರತ ಸರ್ಕಾರದ ಅಧೀನಕ್ಕೆ ತೆಗೆದುಕೊಂಡು ಶಹಿದ್ ಮತ್ತು ಸ್ವರಾಜ್ ಎಂದು ಹೆಸರಿಟ್ಟು ಆ ದ್ವೀಪಗಳಿಗೆ ಕಮಿಷನರುಗಳನ್ನು ನೇಮಕ ಮಾಡಿದರು.
ಸ್ವತಂತ್ರ ಭಾರತದ ಸರ್ಕಾರಕ್ಕೆ ಜಪಾನಿನಿಂದ ಮಿತ್ರ ರಾಷ್ಟ್ರವೆಂಬ ಮಾನ್ಯತೆ ಪಡೆದುಕೊಂಡರು.
ಜಪಾನಿ ಸೈನ್ಯದ ಸಹಕಾರದೊಂದಿಗೆ “ಚಲೋ ದಿಲ್ಲಿ” ಘೋಷಣೆ ಮಾಡಿ, ಬರ್ಮಾ ಮೂಲಕ ಭಾರತದ ಗಡಿಯೊಳಕ್ಕೆ ನುಗ್ಗುತ್ತಾರೆ.
ಮಣಿಪುರ ಇಂಫಾಲ್ ಗಳನ್ನು ವಶಪಡಿಸಿಕೊಂಡ ಐ ಎನ್ ಎ ಅಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿ ರಾಷ್ಟ್ರ ಗೀತೆಯನ್ನು ಹಾಡಿ ಮಾತೃಭೂಮಿಯ ಭೂಭಾಗವನ್ನು ವಿಮೋಚನೆಗೊಳಿಸಿತು.
ಸುಭಾಷರು ಯುದ್ಧಭೂಮಿಯ ಮುಂಚೂಣಿಯಲ್ಲಿ ನಿಂತು ಸೈನಿಕರನ್ನು ಹುರಿದುಂಬಿಸಿ ನಮ್ಮ ಪಾಲಿಗೆ ಅಸಾಧ್ಯವೆನಿಸಿದ್ದ ಜಯವನ್ನು ತಮ್ಮ ಪಾಲಿನದನ್ನಾಗಿಸಿಕೊಂಡರು.
ಆದರೆ ಈ ಸಂತಸ ಬಹಳ ದಿನ ಉಳಿಯಲಿಲ್ಲ. 1945 ರಲ್ಲಿ ಜಪಾನ್ ಮೇಲೆ ಅಮೇರಿಕಾ ಸುರಿಸಿದ ಅಣುಬಾಂಬುಗಳಿಂದ ಜಪಾನ್ ಸೋತು ಶರಣಾಯಿತು. ಜಪಾನ್ ಶರಣಾದರೂ ಐ ಎನ್ ಎ ಮಾತ್ರ ತನ್ನ ಹೋರಾಟವನ್ನು ನಿಲ್ಲಿಸಲಿಲ್ಲ. ಆದರೆ ಈಶಾನ್ಯ ರಾಜ್ಯಗಳಲ್ಲಿ ಆರಂಭಗೊಂಡ ಭೀಕರ ಮಳೆ ಹಾಗೂ ಮಲೇರಿಯಾ ರೋಗಗಳು ಐ ಎನ್ ಎ ಯ ಸೈನಿಕರನ್ನು ಬಲಿ ತೆಗೆದುಕೊಳ್ಳಲು ಆರಂಭಿಸಿತು. ಸಾಲದ್ದಕ್ಕೆ ಆಹಾರ ಪೂರೈಕೆ ಸಂಪರ್ಕ ಕೈಕೊಟ್ಟು ಹಸಿವಿನಿಂದ ಪ್ರಾಣ ಬಿಡುವಂಥಾ ಸ್ಥಿತಿ ನಿರ್ಮಾಣಗೊಂಡಿತು.
1945ರ ಮೇ ವೇಳೆಗೆ ಐ.ಎನ್.ಎ. ಯುದ್ಧದಿಂದ ಹಿಂದೆ ಸರಿಯುವಂತೆ ಭಾರತದ ಪ್ರಧಾನಿ ಹಾಗೂ ಸೈನ್ಯದ ಕಮಾಂಡರ್ ಇನ್ ಚೀಫ್ ಸಹಾ ಆಗಿದ್ದ ಸುಭಾಷರು ಕರೆನೀಡಿದರು. ಅಳಿದುಳಿದ ಸೈನಿಕರನ್ನು ರಕ್ಷಿಸಿದ ಬಳಿಕವೇ ಸುಭಾಷ್ ರಣರಂಗದಿಂದ ಹಿಂದಿರುಗುವ ನಿರ್ಧಾರ ಮಾಡಿದರು. ಸುಭಾಷರು ಆಗಸ್ಟ್ 18 ರಂದು ಜಪಾನಿ ಸೇನೆಯ ಲಘು ವಿಮಾನವೊಂದರಲ್ಲಿ ಮುಂದಿನ ಪ್ರಯಾಣಕ್ಕೆ ಸಜ್ಜಾದರು. ಅದೇ ಕೊನೆ ವಿಮಾನ ಅಪಘಾತದಲ್ಲಿ ಮೃತರಾದರೆಂಬ ಸುದ್ದಿ ಹರಡಿತು.
ಸುಭಾಷ್ ಮೃತಪಟ್ಟಿದ್ದಾರೆ ಎಂದು ಮೂರು ಬಾರಿ ಘೋಷಿಸಲಾಗಿತ್ತು.
1942ರ ಮಾರ್ಚ್ 25ರಂದು ಬರ್ಲಿನ್ ರೇಡಿಯೊದಲ್ಲಿ ಸುಭಾಷ್ ಘೋಷಿಸಿದ್ದು ಹೀಗೆ: ‘ನಾನು ಸುಭಾಷ್ ಚಂದ್ರ ಬೋಸ್. ನಾನಿನ್ನೂ ಬದುಕಿದ್ದು, ಆಜಾದ್ ಹಿಂದ್ ರೇಡಿಯೊ ಮೂಲಕ ನಿಮ್ಮನ್ನು ಉದ್ದೇಶಿಸಿ ಮಾತನಾಡುತ್ತಿದ್ದೇನೆ. ಟೋಕಿಯೊ ತಲುಪುವ ಹಾದಿಯಲ್ಲಿ ವಿಮಾನ ಅಪಘಾತದಲ್ಲಿ ನಾನು ಮೃತಪಟ್ಟಿದ್ದೇನೆ ಎಂದು ಬ್ರಿಟಿಷ್ ಸುದ್ದಿಸಂಸ್ಥೆಗಳು ವಿಶ್ವದಾದ್ಯಂತ ಸುದ್ದಿ ಹಬ್ಬಿಸಿವೆ. ಇಂಗ್ಲೆಂಡ್ನ ಸುದ್ದಿಪತ್ರಿಕೆಗಳು ನನ್ನ ವಿಷಯದಲ್ಲಿ ನಿಂದಾತ್ಮಕ ಭಾಷೆ ಬಳಸಲು ಕೂಡ ಹಿಂದೆಮುಂದೆ ನೋಡಿಲ್ಲ. ಬ್ರಿಟಿಷ್ ಸರ್ಕಾರಕ್ಕೆ ನನ್ನ ಸಾವು ಬೇಕಾಗಿದೆ’. ತನ್ನ ಮಗನ ಈ ಧ್ವನಿ ಕೇಳಿ ಸುಭಾಷ್ ತಾಯಿಯ ಕಣ್ಣಾಲಿಗಳಿಂದ ನೀರು ಹೊಮ್ಮಿತು. ಮಗ ಬದುಕಿರುವುದನ್ನು ಕೇಳಿ ಸಮಾಧಾನಗೊಂಡಿದ್ದ ಅವರು 1943ರಲ್ಲಿ ನಿಧನರಾದರು.
1943ರಲ್ಲಿ ಬರಗಾಲದಲ್ಲಿ ಪರಿಹಾರ ಕಾಮಗಾರಿಗೆಂದು ಬೋಸರು ಚುರುಕಾಗಿ ಓಡಾಡಿದಾಗ ಅದನ್ನು ಜಪಾನೀಯರು ಸಹಿಸಲಿಲ್ಲ. ಅವರು ಸೇನಾಯೋಧನಾಗಿ ಅಷ್ಟೇ ಇರಬೇಕೆಂದು ಬಯಸಿದರು. ಆಗ ಅವರೂ ಸುಭಾಷ್ ಮೃತಪಟ್ಟಿದ್ದಾರೆಂದು ವದಂತಿ ಹಬ್ಬಿಸಿದರು. ತೈಹೋಕು ವಿಮಾನ ಅಪಘಾತದಲ್ಲಿ ಅವರು ಮೃತಪಟ್ಟಿದ್ದಾರೆಂದು ಘೋಷಿಸಿದ್ದನ್ನು ಆಮೇಲೆ ಅನೇಕರು ಅಲ್ಲಗಳೆದ ಸಂಗತಿ ಗೊತ್ತೇ ಇದೆ.
ಆದರೆ, ಮೂರನೇ ಬಾರಿ ಈ ಸುದ್ದಿ ಪ್ರಕಟಗೊಂಡ ನಂತರ ಅವರು ನಿಗೂಢ ರೀತಿಯಲ್ಲಿ ನಾಪತ್ತೆಯಾದರು, ಜನ ಈ ಸುದ್ದಿಯನ್ನು
ಕೇಳಿ ಕಣ್ಣೀರಾದರು.
ಆಶ್ಚರ್ಯಕರ ವಿಷಯವೆಂದರೆ ಗಾಂಧೀಜಿಯವರನ್ನು ಮೊದಲಬಾರಿಗೆ ರಾಷ್ಟ್ರಪಿತ ಎಂದು ಕರೆದಿದ್ದು ಮತ್ತು 1942ರಲ್ಲಿ ನಡೆದ ಗಾಂಧೀಜಿ ‘ಭಾರತ ಬಿಟ್ಟು ತೊಲಗಿ ಚಳವಳಿ’ಯಲ್ಲಿ ಬಳಸಿದ ‘ಮಾಡು ಇಲ್ಲವೇ ಮಡಿ’ ನುಡಿಗಟ್ಟನ್ನು ಕೊಟ್ಟವರೂ ನೇತಾಜಿ.
ಈ ನುಡಿಗಟ್ಟನ್ನ ಅವರು ಜಲ್ಪೈಗುರಿಯಲ್ಲಿ ನಡೆದಿದ್ದ ಕಾಂಗ್ರೆಸ್ ಅಧಿವೇಶನದ ಸಂದರ್ಭದಲ್ಲಿ ಮೊದಲು ಬಳಸಿದ್ದರು.
ಅಲ್ಲದೇ 1944ರಲ್ಲಿ ಆಜಾದ್ ಹಿಂದ್ ರೇಡಿಯೊ ಮೂಲಕ ಸಿಂಗಪುರದಿಂದ ಮಾತನಾಡಿದಾಗ ಮಹಾತ್ಮ ಗಾಂಧಿ ಅವರನ್ನು ‘ರಾಷ್ಟ್ರಪಿತ’ ಎಂದು ನೇತಾಜಿ ಮೊದಲ ಬಾರಿಗೆ ಕರೆದರು. ಇದನ್ನು ಚರಿತ್ರೆಯಲ್ಲಿ ಸೇರಿಸದೇ ಹೋದದ್ದು ವಿಪರ್ಯಾಸ.
ಸ್ವತಂತ್ರ ಹೋರಾಟದ ಮರೆಯದ ಆಧ್ಯಾಯ ಒಂದು ಕೊನೆಗೊಂಡಿತು.ಭಾರತೀಯರ ಮನದಲ್ಲಿ ನೇತಾಜಿ ಸದಾ ಹಸಿರಾಗಿದ್ದಾರೆ.