ಮೈಸೂರು: ನಾಡ ಅಧಿ ದೇವತೆ ಶ್ರೀ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ ನಮಸ್ಕರಿಸಿ ಖ್ಯಾತ ಸಾಹಿತಿ ಹಂಪ ನಾಗರಾಜಯ್ಯ ಅವರು ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಅಧಿಕೃತ ಚಾಲನೆ ನೀಡಿದರು.
ಲೋಕಮಾತೆ ಚಾಮುಂಡೇಶ್ವರಿದೇವಿಗೆ ಮೊದಲು ನಮಸ್ಕರಿಸಿ, ರಾಜರ್ಷಿ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರನ್ನು ನೆನೆದು ಅವರು ಮಾತು ಆರಂಭಿಸಿದರು.
ಸಿಎಂ ಸಿದ್ದರಾಮಯ್ಯ,ಡಿಸಿಎಂ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ. ಮಹದೇವಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಸೇರಿದಂತೆ ಗಣ್ಯರಿಗೆ ಅವರು ನಮಸ್ಕಾರ ತಿಳಿಸಿದರು.
ಸೆಪ್ಟೆಂಬರ್ 15 ರಂದು ತೆಂಕಣದ ಚಾಮರಾಜನಗರದಿಂದ ಬಡಗಣದ ಬೀದರವರೆಗೆ ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸುವ ವಿಶ್ವದಾಖಲೆಯ ಮಾನವಸರಪಳಿಯನ್ನು ಆಯೋಜಿಸಿದ್ದು ಸಮಯೋಚಿತವೂ ಅಭಿನಂದನಾರ್ಹವೂ ಆಗಿದೆ ಎಂದು ತಿಳಿಸಿದರು.
ಸೇತುವೆಗಳನ್ನು ಧ್ವಂಸ ಮಾಡಿ ಕಂದರ ಪ್ರಪಾತಗಳನ್ನು ನಿರ್ಮಿಸುತ್ತಿರುವ ದುರಂತವನ್ನು ನಿವಾರಿಸಲು ಮನುಷ್ಯ ಮನುಷ್ಯರನ್ನು, ರಾಷ್ಟ್ರ ರಾಷ್ಟ್ರಗಳನ್ನು ಕೂಡಿಸುವ ಸರಪಳಿಗಳು ಇಂದಿನ ಜರೂರು ಎಂದು ಹೇಳಿದರು.
ಸಾಮಾನ್ಯ ಪ್ರಜೆಯೊಬ್ಬರು ಈ ನಾಡ ಹಬ್ಬ ಸಡಗರದ ಸರಣಿಯನ್ನು ಉದ್ಘಾಟಿಸುತ್ತಿರುವದು ಆ ಪರಿಕಲ್ಪನೆಯ ಮುಂದುವರಿಕೆಯಾಗಿದೆ, ಕಾರ್ಯಕ್ರಮದ ಉದ್ಘಾಟನೆಯನ್ನು, ನಮ್ಮ ನಾಡಿನ ಪ್ರಜೆಗಳ ಪರವಾಗಿ, ವಿನಯ ಮತ್ತು ಧನ್ಯತಾ ಭಾವದಿಂದ ನೆರವೇರಿಸುತ್ತಿದ್ದೇನೆ ಎಂದು ಹೇಳಿದರು.
ದಸರಾ ಹಬ್ಬ ಮತಧರ್ಮಗಳ ತಾರತಮ್ಯವಿರದೆ ಇಡೀ ನಾಡು ಆಚರಿಸುವ ಸರ್ವಜನಾಂಗದ ಹಬ್ಬ.
ನವರಾತ್ರಿಯ ತೆಂಕಣಗಾಳಿಗೆ ಮೈಸೂರು ಮೈಕೊಡವಿ, ಪೊರೆಬಿಟ್ಟು, ಶೃಂಗಾರಗೊಂಡು, ಕಂಗೊಳಿಸುತ್ತದೆ. ಮೈಸೂರೆಂದರೆ ದಸರ, ಜಂಬೂಸವಾರಿ ಎಂಬ ಮಾತು ಲೋಕಪ್ರಸಿದ್ಧಿ ಪಡೆದಿದೆ.
ದಸರ ಹಬ್ಬದ ಸಂದರ್ಭದಲ್ಲಿ ಹಿಂದಿನಿಂದ ಪ್ರೋತ್ಸಾಹಿಸುತ್ತಿದ್ದ ದೇಸಿ ಪರಂಪರೆಗಳಲ್ಲಿ ಕುಸ್ತಿಯೂ ಒಂದು. ಇನ್ನು ಮುಂದೆಯೂ ದೇಸೀ ಕ್ರೀಡೆಯಾದ ಕುಸ್ತಿಗೆ ಹೆಚ್ಚು ಪ್ರೋತ್ಸಾಹ ಕೊಡಬೇಕು ಎಂದು ಹಂಪನಾ ಸಲಹೆ ನೀಡಿದರು.
ಅಭೀಷ್ಟವರಪ್ರದಾಯಿನಿ ಎಂದು ಭಕ್ತರು ಆರಾಧಿಸುವ ದೇವಿ ಚಾಮುಂಡಾಂಬಿಕೆಗೆ ಪೊಡಮಟ್ಟು ಮೂರು ಬೇಡಿಕೆಗಳನ್ನು ಈಡೇರಿಸಿಕೊಡಬೇಕೆಂದು ದೇವಿಯಲ್ಲಿ ಪ್ರಾರ್ಥಿಸುತ್ತೇನೆ ಎಂದು ಬೇಡಿಕೆಗಳನ್ನು ಈ ವೇಳೆ ಹಂಪನಾ ಮುಂದಿಟ್ಟರು.
1. ಇಸ್ರೇಲ್-ಪ್ಯಾಲಸ್ಟೈನ್, ರಷಿಯಾ-ಉಕ್ರೈನ್ ಯುದ್ಧ ನಿಂತು, ನಿತ್ಯ ನಡೆಯುತ್ತಿರುವ ಅಮಾಯಕರ ಮಾರಣಹೋಮ ನಿಲ್ಲಲು ಆ ರಾಷ್ಟ್ರನಾಯಕರು ಕೂಡಲೆ ಜೀವಪರ ಕಾಳಜಿ ತೋರುವಂತೆ ಅವರಿಗೆ ಪ್ರೇರಣೆ ನೀಡಬೇಕು
2. ಹೆಣ್ಣು ಭ್ರೂಣ ಹತ್ಯೆ ತಡೆಯಲು ದೇವಿಯು ತಾಯಿತಂದೆಯರಿಗೆ ಸದ್ಭುದ್ಧಿ ಅನುಗ್ರಹಿಸಲೆಂದು ಪ್ರಾರ್ಥಿಸುತ್ತೇನೆ.
3. ಬಹು ದೊಡ್ಡ ರಾಷ್ಟ್ರೀಯ ಸಮಸ್ಯೆಯಾದ ನಿರುದ್ಯೋಗ ಸಮಸ್ಯೆಯಿಂದ ಯುವಜನರು ಹತಾಶರಾಗಿದ್ದಾರೆ. ನಿರುದ್ಯೋಗ ನಿವಾರಣೆಗೆ ಆದ್ಯತೆಯಿತ್ತು ಕೇಂದ್ರ ಸರಕಾರವು ಕ್ರಮ ಕೈಗೊಳ್ಳುವಂತೆ ಪ್ರೇರೇಪಿಸಬೇಕೆಂದು ಯುವಜನತೆಯ ಪರವಾಗಿ ದೇವಿಯನ್ನು ಪ್ರಾರ್ಥಿಸುತ್ತೇನೆ.
4. ಕನ್ನಡ ನಾಡು ನುಡಿ ನೆಲ ಜಲ ಕಲೆ ಸಂಸ್ಕೃತಿ ಸಂರಕ್ಷಣೆಗಾಗಿ ಹೋರಾಡುವವರನ್ನು ಕೊಲೆಗಾರರಂತೆ ಕಾಣದೆ, ಪ್ರೀತಿ ಅಭಿಮಾನಗಳಿಂದ ಕಾಣುವಂತೆ ಆಡಳಿತಾಂಗಕ್ಕೆ ಪ್ರೇರಣೆ ಕೊಡುವಂತೆ ವಿನಂತಿಸುತ್ತೇನೆ.
5. ಸರಕಾರಗಳನ್ನು ಉರುಳಿಸುವ ದುರಾಲೋಚನೆ ಬರದಂತೆ ತಡೆದು, ಚುನಾಯಿತ ಸರಕಾರಗಳನ್ನು ಉಳಿಸುವ ಚಿಂತನೆಗಳನ್ನು ಲೋಕಾಂಬಿಕೆಯು ಮೂಡಿಸಲೆಂದು ಬೇಡುತ್ತೇನೆ.
6. ಚಾಮುಂಡಾಂಬೆಯು ಪರಸ್ಪರ ದೋಷಾರೋಪಣೆ, ವೈಯಕ್ತಿಕ ನಿಂದನೆ, ಅವಾಚ್ಯ ಶಬ್ದಗಳ ಬಳಕೆ ಪದ್ಧತಿ ನಿಂತು ಸಮಾಜಮುಖಿ ಚಿಂತನೆಯನ್ನು ಒಳಗೊಂಡು ಸಮೃದ್ಧ ರಾಷ್ಟ್ರ ನಿರ್ಮಾಣಕ್ಕೆ ಹಮ್ಮಿಕೊಂಡಿರುವ ಯೋಜನೆ ಯೋಚನೆಗಳನ್ನು ನಿರೂಪಿಸು ವಂತೆ ಸ್ಫೂರ್ತಿ ಕೊಡಬೇಕೆಂದು ಹಂಪನಾ ಪ್ರಾರ್ಥಿಸಿದರು.
ಕರ್ನಾಟಕದ ಜನರ ಪ್ರತಿನಿಧಿಯಾಗಿ ಈ ನಾಡ ಹಬ್ಬವನ್ನು ಸಂತೋಷದಿಂದ ಉದ್ಘಾಟಿ ಸಿದ್ದೇನೆ. ನನ್ನ 88 ವರ್ಷದ ದೀರ್ಘ ಜೀವನದಲ್ಲಿ ಮರೆಯಲಾಗದ ಮಧುರ ಸ್ಮೃತಿಯ ಕ್ಷಣಗಳನ್ನು ಕಲ್ಪಿಸಿಕೊಟ್ಟ ನಮ್ಮ ಹೆಮ್ಮೆಯ ಕರ್ನಾಟಕ ಸರಕಾರಕ್ಕೆ ಅಂತಃಕರಣ ತುಂಬಿದ ಕೃತಜ್ಞತೆಗಳು ಎಂದು ಹೇಳಿದರು.
ಒಟ್ಟು 71 ವರ್ಷಗಳ ಸ್ನೇಹದ ಸುಖ ನೀಡಿದ್ದಲ್ಲದೆ ಆರುವರ್ಷ ಸಹಪಾಠಿಯಾಗಿಯೂ 63 ವರ್ಷ ಮಡದಿಯಾಗಿಯೂ ನನ್ನನ್ನು ರೂಪಿಸಿದ ಮಹಾಶಿಲ್ಪಿ ನಾಡೋಜ ಪ್ರೊಫೆಸರ್ ಕಮಲಾ ಹಂಪನಾ ಅವರ ದಿವ್ಯ ನೆನಪಿಗೆ ನನಗೆ ಸಂದಿರುವ ಈ ಗೌರವವನ್ನು ಸಮರ್ಪಿ ಸುತ್ತೇನೆ ಎಂದು ಹಂಪಾ ನಾಗರಾಜಯ್ಯ ಹೇಳಿದರು.
ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ,ಉಪ ಮುಖ್ಯ ಮಂತ್ರಿ ಡಿ.ಕೆ.ಶಿವ ಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ಪ, ಶಾಸಕರಾದ ಜಿ. ಟಿ ದೇವೇಗೌಡ, ಶ್ರೀ ವತ್ಸ ಮತ್ತಿತರರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಗಣ್ಯರನ್ನು ಪೂರ್ಣ ಕುಂಭದೊಂದಿಗೆ ಸ್ವಾಗತಿಸಿ, ಸಾಂಸ್ಕೃತಿಕ ಕಲಾತಂಡಗಳ ಮೆರವಣಿಗೆಯೊಂದಿಗೆಯೊಂದಿಗೆ ಬರಮಾಡಿಕೊಳ್ಳಲಾಯಿತು.
ಗಣ್ಯರೆಲ್ಲರೂ ಚಾಮುಂಡೇಶ್ವರಿ ಸನ್ನಿಧಿಗೆ ತೆರಳಿ ದೇವಿ ದರ್ಶನ ಪಡೆದು ಪುನೀತರಾದರು.
ನಂತರ ವೇದಿಕೆಗೆ ಆಗಮಿಸಿ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದರು.