ಸಿನಿಮಾದ ಜೀವ ‘ಸಂಕಲನ’

-ಜಿ‌.ಆರ್.ಸತ್ಯಲಿಂಗರಾಜು        

ಸಿನಿಮಾಗೆ ಜೀವ ಬರುವುದು ಬರೆಯುವ ಟೇಬಲ್ ನಿಂದ, ಸಂಕಲನದ ಟೇಬಲ್ ನಲ್ಲಿ.   ಇದನ್ನ ಸಾಬೀತುಗೊಳಿಸಿದ್ದು ರಷ್ಯಾದ ನಿರ್ದೇಶಕ  ಕುಲೆಶೋವ್.                

ಇವನಿಗಿಂತ ಮೊದಲೇ ಗ್ರಿಫಿತ್  ಸಂಕಲನದ ಮಹತ್ವವನ್ನು ಎತ್ತಿ ಹಿಡಿದಿದ್ದ. ಆದರೆ ಸಂಕಲನವೇ ಸಿನಿಮಾಗೆ ಹೊಸ ಅರ್ಥ ಕೊಡುತ್ತೆ ಎಂದು ತೋರಿಸಿದ್ದು ಕುಲೆಶೋವ್.     

ಅವಾಗಿನ ಜನಪ್ರಿಯ ನಟ ಮೊಜುಕಿನ್‌ನ  ಹಳೇ ಸಿನಿಮಾದ ಶಾಟನ್ನ ತೆಗೆದುಕೊಂಡು ಅದರ ಮುಂದೆ ಹೊಗೆಯಾಡುತ್ತಿರುವ ಗಂಜಿ ಬಟ್ಟಲು, ಮತ್ತೊಂದು ಶಾಟ್ ಮುಂದೆ ಸತ್ತ ಹೆಂಗಸಿನ ಶವ, ಇನ್ನೊಂದು ಶಾಟ್ ಮುಂದೆ ಆಟವಾಡುತ್ತಿದ್ದ ಮಗುವಿನ ಶಾಟ್ ಜೋಡಿಸಿದ.         

ಈ ಸಂಕಲಿತ ಶಾಟ್ ಗಳನ್ನ ಪ್ರೇಕ್ಷಕರ ಎದುರು ಪ್ರದರ್ಶಿಸಿಸಿದಾಗ,  ಮೊಜುಕಿನ್, ಗಂಜಿ ಬಟ್ಟಲಿನೆದುರು ಹಸಿವೆಯ ಅಭಿನಯ, ಸತ್ತ ಹೆಂಗಸಿನೆದುರು ದುಃಖದ ಅಭಿನಯ, ಮಗು ಮುಂದೆ ಸಂತಸದ ಅಭಿನಯ ಮಾಡಿದ್ದಾನೆ ಎಂದು ಜನರಿಗೆ ಅನ್ನಿಸುತ್ತೆ. 

ವಾಸ್ತವವಾಗಿ ಮೊಜುಕಿನ್ ನ ಒಂದೇ ಶಾಟ್, ಬೇರೆಬೇರೆ ಯದರ ಜತೆ ಸಂಕಲಿಸಿದಾಗ ಬೇರೆ ಅರ್ಥ ಕೊಟ್ಟಿತ್ತು.    ಹೀಗಾಗಿ ಎಡಿಟಿಂಗ್ ಎಂಬುದು ಚಿತ್ರಕ್ಕೆ ಲಯಬದ್ಧ ಜೀವ ತುಂಬುತ್ತೆ.   

ನೆಗೆಟಿವ್ ಬಳಕೆ ಇದ್ದಾಗ. ಚಿತ್ರಿಕೆಗಳೆರಡರ ತುದಿ ಜೋಡಿಸಲು ಜೋಡಿಕೆ ಯಂತ್ರ(splicer); ಚಿತ್ರಿಕೆ ಕತ್ತರಿಸುವ ಮುನ್ನ  ಫಿಲ್ಮ್ ರೋಲ್ ನೋಡಲು “ಅವಲೋಕಕ'(viewer) (ಇದಕ್ಕೆ ಮೂವಿಯೋಲ ಎನ್ನಲಾಗುತ್ತಿತ್ತು, ಆದರೆ ಅದು ಅವಲೋಕಕ ಯಂತ್ರ ತಯಾರಿಸುತ್ತಿದ್ದ ಕಂಪನಿ ಹೆಸರು.  ಈಗಿನ pause, rewind, forward ತಂತ್ರಜ್ಞಾನದ ರೀತಿ, ಆಗ ರೀಲನ್ನ ಹಿಂದೆ ಮುಂದೆ, ಬೇಕಾದಲ್ಲಿ ನಿಲ್ಲಿಸಿಕೊಳ್ಳಲು, ಸಣ್ಣ ತೆರೆ ಇದ್ದ viewer ಬೇಕಾಗಿತ್ತು).   

ಹಾಗೆಯೇ ಚಿತ್ರಿಕೆಯ ಫಿಲಂ, ಇತರೆ ಧ್ವನಿಗಳು ಇದ್ದ ಟ್ರ್ಯಾಕ್ ಗಳನ್ನ ನೆಗೆಟಿವ್ ಮತ್ತು ಪಾಸಿಟಿವ್ ಗಳನ್ನ ಏಕಕಾಲದಲ್ಲಿ ಸರಿ ಹೊಂದಿಸಿಕೊಳ್ಳಲು ಏಕಕಾಲಿಕ/ಸಮಕಾಲಿಕ (synchroniser) ಯಂತ್ರ ಬೇಕಿತ್ತು.      ಫ್ರೇಮ್ ಇನ್ನೊಂದು ಫ್ರೇಮ್ ಜತೆ ನೇರವಾಗಿ ಕೂಡಿಸುವಂತೆ (ಅನ್ಯದೃಶ್ಯ) ಮಧ್ಯದಲ್ಲಿ ಮಸುಕಾವರಿಸುವುದನ್ನ ಎಡಿಟಿಂಗ್ ನಲ್ಲು ಮಾಡಬಹುದು. ಇದಕ್ಕೆ ನೋಟ ಸಂಬಂಧಿ ಸಾಧನ (optical printer) ಬೇಕಿತ್ತು. ಇದರ ಮೂಲಕ ಶೀರ್ಷಿಕೆ, ವಿಶೇಷ ಪರಿಣಾಮಗಳನ್ನ ಮಾಡಲಾಗುತ್ತಿತ್ತು.     ‌‌ 

ಇವಾಗ ಸೆಲ್ಯುಲಾಯ್ಡ್  ನೆಗೆಟಿವ್ ಹಾಳೆ ಇಲ್ಲ.    ಡಿಜಿಟಲ್ ತಂತ್ರಜ್ಞಾನದಿಂದಾಗಿ,  ಎಡಿಟಿಂಗ್ ರೀತಿಯೂ ಸಂಪೂರ್ಣವಾಗಿ ಬದಲಾಗಿದೆ.