ಯಾರೇ ತಪ್ಪು ಮಾಡಿದ್ದರೂ ಕಾನೂನಿನ ಪ್ರಕಾರ ಶಿಕ್ಷೆಯಾಗಲಿದೆ -ಬೊಮ್ಮಾಯಿ

ಬೆಂಗಳೂರು: ಯಾರೇ ತಪ್ಪು ಮಾಡಿದ್ದರೂ ಕಾನೂನಿನ ಪ್ರಕಾರ ಶಿಕ್ಷೆಯಾಗಲಿದೆ,ನಾವು ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತ ಸ್ವತಂತ್ರವಾಗಿ ಕೆಲಸ ಮಾಡಲಿದೆ ಯಾರ ರಕ್ಷಣೆಯೂ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ನಾವು ಲೋಕಾಯುಕ್ತ ಪುನರ್ ಸ್ಥಾಪನೆ ಮಾಡಿರುವುದೇ ಭ್ರಷ್ಟಾಚಾರ ತಡೆಯಲು. ಹಾಗಾಗಿ ತಪ್ಪು ಯಾರದಿದ್ದರೂ ಮುಲಾಜು ನೋಡುವುದಿಲ್ಲ ಎಂದರು.

ಹಿಂದೆ ಲೋಕಾಯುಕ್ತ ಇಲ್ಲದೇ ಕಾಂಗ್ರೆಸ್ ಕಾಲದ ಕೇಸ್‍ಗಳು ಮುಚ್ಚಿಹೋಗಿದ್ದವು. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ನಮ್ಮ ಸರ್ಕಾರ ಯಾರನ್ನೂ ರಕ್ಷಿಸಲು ಹೋಗುವುದಿಲ್ಲ ಎಂದು ಹೇಳಿದರು.

ಶಾಸಕರ ಪುತ್ರನ ನಿವಾಸ ಮತ್ತು ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ನಾವು ಲೋಕಾಯುಕ್ತಕ್ಕೆ ಸಂಪೂರ್ಣ ಅಧಿಕಾರ ನೀಡಿದ್ದೇವೆ. ಎಸಿಬಿ ರಚಿಸಿ ಲೋಕಾಯುಕ್ತದ ಹಲ್ಲು ಕೀಳುವ ಪ್ರಯತ್ನ ನಾವು ಮಾಡಿಲ್ಲ, ಅದನ್ನು ಮಾಡಿರುವುದು ಕಾಂಗ್ರೆಸ್. ಲೋಕಾಯುಕ್ತಕ್ಕೆ ಸಂಪೂರ್ಣ ಮುಕ್ತ ಅಧಿಕಾರ ನೀಡಿ  ಲೋಕಾಯುಕ್ತವನ್ನು ಮರುಸ್ಥಾಪಿಸಿದ್ದೇ  ಬಿಜೆಪಿ ಸರ್ಕಾರ ಎಂದು ತಿಳಿಸಿದರು.

ಮುಕ್ತವಾಗಿ ತನಿಖೆ ನಡೆದು ಹಣ ಯಾರಿಗೆ ಸೇರಿದೆ ಎನ್ನುವ ಮಾಹಿತಿ ಹೊರಗೆ ಬರಲಿ. ಸತ್ಯ ಜನರಿಗೆ ತಿಳಿದು ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ. ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಇಂತಹ ಹತ್ತಾರು ಪ್ರಕರಣಗಳು ನಡೆದಿವೆ ಜತೆಗೆ ಅಲ್ಲಲ್ಲೇ ಮುಚ್ಚಿಹೋಗಿವೆ ಎಂದು ಸಿಎಂ ಹೇಳಿದರು.