ಯಾವ ರಾಜ್ಯದಲ್ಲೂ ಬಿಜೆಪಿ ಅಣೆಕಟ್ಟು ಕಟ್ಟಿಸಿಲ್ಲ:ಸಿಎಂ ಸಿದ್ದರಾಮಯ್ಯ ಟೀಕೆ

ಕೊಡಗು: ನಮ್ಮ ದೇಶದ ಯಾವುದಾದರೂ ರಾಜ್ಯದಲ್ಲಿ ಒಂದು ಅಣೆಕಟ್ಟು ಕಟ್ಟಿಸಿ ರೈತರಿಗೆ, ಕೃಷಿಗೆ ನೆರವಾದ ಉದಾಹರಣೆ ಇದ್ದರೆ ನಾನು ಬಿಜೆಪಿ ವಿರುದ್ಧ ಮಾತಾಡುವುದನ್ನೇ ನಿಲ್ಲಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದರು.

ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಸಿಎಂ,ಕಾಂಗ್ರೆಸ್ ಈ ದೇಶಕ್ಕೆ ಏನೂ ಮಾಡಿಲ್ಲ ಎಂದು ಬಿಜೆಪಿ ಬೊಬ್ಬೆ ಹೊಡೆಯುತ್ತದೆ. ಇಡೀ ದೇಶದಲ್ಲಿರುವ ಅಣೆಕಟ್ಟುಗಳನ್ನು ಕಟ್ಟಿಸಿದ್ದು ಕಾಂಗ್ರೆಸ್ ಪಕ್ಷ. ಬಿಜೆಪಿ ನೆಪಕ್ಕಾದರೂ ಒಂದೂ ಅಣೆಕಟ್ಟು ಕಟ್ಟಿಸಲಿಲ್ಲ ಎಂದು ಹೇಳಿದರು.

1925 ರಲ್ಲೇ RSS ಹುಟ್ಟಿದರೂ ಅಪ್ಪಿ ತಪ್ಪಿಯೂ ಭಾರತ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲಿಲ್ಲ.‌

ಭಾರತೀಯರನ್ನು ಬ್ರಿಟಿಷರ ದಾಸ್ಯದಿಂದ ಬಿಡುಗಡೆಗೊಳಿಸಿದ್ದು ಇದಕ್ಕಾಗಿ ಹೋರಟ ಮಾಡಿ ಪ್ರಾಣ ತ್ಯಾಗ ಮಾಡಿ,ಜೈಲು ಸೇರಿದ ಇತಿಹಾಸ, ಚರಿತ್ರೆ ಇರುವುದು ಕಾಂಗ್ರೆಸ್ಸಿಗೆ ಮಾತ್ರ ಎಂದು ಸಿದ್ದು ‌ತಿಳಿಸಿದರು.

ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸಲು ಎಂದು ಬಿಜೆಪಿ ಸಂಸದ ಅನಂತಕುಮಾರ ಹೆಗ್ಡೆ ನೇರವಾಗಿ ಹೇಳುತ್ತಾರೆ. ಇದನ್ನು ಬಿಜೆಪಿಯ ಯಾರೊಬ್ಬರೂ ವಿರೋಧಿಸಲಿಲ್ಲ. ಇದರಿಂದ ಅವರ ಸಂವಿಧಾನ ವಿರೋಧಿ ನಿಲುವು ಸ್ಪಷ್ಟವಾಗುತ್ತದೆ ಎಂದು ಹೇಳಿದರು.

ಅಚ್ಛೆ ದಿನ್ ಆಯೇಗಾ ಎಂದ ನರೇಂದ್ರ ಮೋದಿಯವರೇ ಎಲ್ಲಿದೆ ನಿಮ್ಮ ಅಚ್ಛೆ ದಿನ್, ಪೆಟ್ರೋಲ್, ಡೀಸೆಲ್ , ಅಡುಗೆ ಗ್ಯಾಸ್ ಬೆಲೆ ಇಳಿಕೆ ಮಾಡಿದಿರಾ, ವರ್ಷಕ್ಕೆ ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭಾಷಣ ಮಾಡಿದ ಮೋದಿಯವರೇ ಈ ಹತ್ತು ವರ್ಷದಲ್ಲಿ 20 ಕೋಟಿ ಉದ್ಯೋಗ ಸೃಷ್ಟಿ ಆಗಬೇಕಿತ್ತು. ಎಲ್ಲಿವೆ 20 ಕೋಟಿ ಉದ್ಯೋಗ ತೋರಿಸಿ ಎಂದು ಸಿದ್ದರಾಮಯ್ಯಸವಾಲು ಹಾಕಿದರು.

ರಾಜ್ಯದಲ್ಲಿ ಬರಗಾಲ ಬಂದಿದೆ. ಬಿಜೆಪಿ ಸಂಸದರು ಕೇಂದ್ರದಿಂದ ರಾಜ್ಯಕ್ಕೆ ಒಂದು ರುಪಾಯಿ ಬರ ಪರಿಹಾರವನ್ನೂ ತರಲಿಲ್ಲ. ರೈಲು ಬಿಡುವುದರಲ್ಲಿ ಮಾತ್ರ ಪ್ರತಾಪ ತೋರಿಸುವ ಮಿಸ್ಟರ್ ಪ್ರತಾಪ್ ಸಿಂಹ ರಾಜ್ಯದ ಬರ ಪರಿಹಾರಕ್ಕೆ ಒಂದೇ ಒಂದು ರೂಪಾಯಿಯನ್ನೂ ಬಿಡುಗಡೆ ಮಾಡಿಸಲಿಲ್ಲ ಏಕೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ವಿರುದ್ದ ಕೊಡಗು ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದಕ್ಕೆ ಶಾಸಕರಾದ ಪೊನ್ನಣ್ಣ ಮತ್ತು ಮಂಥರ್ ಗೌಡ ಹಾಗೂ ಕೊಡಗು ಜಿಲ್ಲೆಯ ಜನತೆಗೆ ಸರ್ಕಾರ ಮತ್ತು ಪಕ್ಷದ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು ಸೇರಿದಂತೆ ಸಚಿವರಾದ ಜಿ.ಪರಮೇಶ್ವರ್, ಎಚ್.ಸಿ.ಮಹದೇವಪ್ಪ, ಬೈರತಿ ಸುರೇಶ್, ಕೆ.ವೆಂಕಟೇಶ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ, ಕೆಪಿಸಿಸಿ ಸಾಮಾಜಿಕ ಸಂವಹನ ವಿಭಾಗದ ಅಧ್ಯಕ್ಷರಾದ ಮೆಹರೂಸ್ ಖಾನ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.