ಬೆಳಗಾವಿ: ಕೋವಿಡ್ ನಂತರ ನಿರುದ್ಯೋಗ ಸಮಸ್ಯೆ ಅಗಾಧವಾಗಿ ಕಾಡುತ್ತಿದ್ದು, ಯುವ ಸಮೂಹಕ್ಕೆ ಉದ್ಯೋಗ ನೀಡಿ – ಇಲ್ಲವೆ 9 ಸಾವಿರ ರೂಪಾಯಿ ನಿರುದ್ಯೋಗ ಭತ್ಯೆ ಕೊಡಿ ಎಂದು ಒತ್ತಾಯಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಬೆಳಗಾವಿ ಚಲೋ ಹೋರಾಟ ಹಮ್ಮಿಕೊಂಡರು.
ಯುವಕರ ನಡೆ ಬೆಳಗಾವಿ ಕಡೆ ಎಂಬ ಘೋಷಣೆಯೊಂದಿಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ಬೆಳಗಾವಿಯ ಸುವರ್ಣ ಸೌಧದವರೆಗೆ ಪ್ರತಿಭಟನಾ ರಾಲಿ ನಡೆಸಿದರು.
ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಹೋರಾಟ ತೀವ್ರಗೊಂಡಿದ್ದು, ಸುಮಾರು ಎರಡು ಗಂಟೆಗಳ ಕಾಲ ಸುವರ್ಣ ಸೌಧದವರೆಗೆ ನಡೆದ ಹೋರಾಟಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸಾಥ್ ನೀಡಿದರು.
ಎಂ.ಎಸ್. ರಕ್ಷಾ ರಾಮಯ್ಯ, ಮೊಹಮ್ಮದ್ ನಲ್ ಪಾಡ್ ನೇತೃತ್ವದಲ್ಲಿ ಕಾಂಗ್ರೆಸ್ ಯುವ ಪಡೆ ಸರ್ಕಾರದ ವಿರುದ್ಧ ಭಾರೀ ಆಕ್ರೋಶ ವ್ಯಕ್ತಪಡಿಸಿತು.
ಈ ವೇಳೆ ಸುವರ್ಣ ಸೌಧದ ಬಳಿ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ತಡೆದರು.ಆಗ ಪೊಲೀಸರು ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ನಿರುದ್ಯೋಗ ಸಮಸ್ಯೆಯನ್ನು ಬಹುದೊಡ್ಡ ಹೋರಾಟವಾಗಿ ರೂಪಿಸಲಾಗುವುದು. ಉದ್ಯೋಗ ನೀಡದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು. ಮುಂದಿನ ವಿಧಾನಸಭಾ ಚುನಾವಣೆಗೆ ನಿರುದ್ಯೋಗ ವಿಚಾರವನ್ನು ಪ್ರಮುಖ ವಿಷಯವನ್ನಾಗಿ ಪರಿಗಣಿಸಲಾಗುವುದು. ಜತೆಗೆ 9 ಸಾವಿರ ರೂ ನಿರುದ್ಯೋಗ ಭತ್ಯೆ ನೀಡುವ ವಿಷಯವನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಸೇರ್ಪಡೆ ಮಾಡಲಾಗುವುದು ಎಂದು ಹೇಳಿದರು.