ಮೈಸೂರು: ಸ್ಟಿಂಗ್ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ಮಾಜಿ ಸಚಿವ ಸಾ.ರಾ. ಮಹೇಶ್ ಅವರು ಸಾಲು ಸಾಲು ಪ್ರಶ್ನೆಗಳನ್ನು ಎತ್ತಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸ್ಟಿಂಗ್ ವಿಡಿಯೋದಲ್ಲಿರುವ ಮಹಿಳೆಯನ್ನು ಏಕೆ ಬಂಧಿಸಿಲ್ಲ? ಸಂತ್ರಸ್ತೆ ಎಂದು ಹೇಳಿಕೊಳ್ಳುವ ಯುವತಿಯನ್ನು ಏಕೆ ಅರೆಸ್ಟ್ ಮಾಡಿಲ್ಲ? ಕೃಪಾ ಆಳ್ವ ಅವರನ್ನು ಯಾಕೆ ಉಚ್ಛಾಟಿಸಿದ್ದೀರಿ? ವಿದೇಶಕ್ಕೆ ಹೋಗಲು ಯಾಕೆ ಸಹಕರಿಸುತ್ತಿದ್ದೀರಿ? ತಪ್ಪು ಮಾಡಿದವರನ್ನು ಬಿಟ್ಟು ಜೆಡಿಎಸ್ ಅವರನ್ನು ಯಾಕೆ ಅರೆಸ್ಟ್ ಮಾಡುತ್ತೀರಿ? ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರು ತಪ್ಪು ಮಾಡಿದ್ದಾರೆ ಎಂದು ಕುಮಾರಸ್ವಾಮಿ ಸೇರಿದಂತೆ ಯಾರೂ ಹೇಳಿಲ್ಲ. ಸಿದ್ದರಾಮಯ್ಯ ಅವರ ರಾಜಕೀಯ ಜೀವನಕ್ಕೆ ಕಪ್ಪು ಚುಕ್ಕೆ ತಂದವರನ್ನು ಹಿಡಿಯಿರಿ ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಸಿದ್ದರಾಮಯ್ಯ ತಪ್ಪು ಮಾಡಿಲ್ಲ ಎಂದಾದರೆ ಕೃಪಾ ಆಳ್ವ ಅವರನ್ನು ಪಕ್ಷದಿಂದ ಏಕೆ ಉಚ್ಛಾಟನೆ ಮಾಡಿದ್ದೀರಿ? ಆರೋಪ ಸುಳ್ಳು ಎಂದಾದ ಮೇಲೆ ಸಿದ್ದರಾಮಯ್ಯ ಕೋರ್ಟ್ನಲ್ಲಿ ಸ್ಟೇ ಏಕೆ ತಂದಿದ್ದಾರೆ? ಎಂದು ಅವರು ಪ್ರಶ್ನಿಸಿದರು.
ಸ್ಟಿಂಗ್ ಆಪರೇಷನ್ ಕಟ್ಟು ಕಥೆ ಎಂದು ಗೃಹ ಸಚಿವರು ಹೇಳುತ್ತಾರೆ. ಆದರೆ ಚಾಕು ಚುಚ್ಚಿದವರನ್ನು ಬಿಟ್ಟು ತುದಿ ಹಿಡಿದುಕೊಂಡಂತೆ ತಪ್ಪು ಮಾಡಿದ ಮೂಲ ವ್ಯಕ್ತಿಯನ್ನು ಬಂಧಿಸದೆ ಜೆಡಿಎಸ್ ನಾಯಕರ ಮನೆಗಳಲ್ಲಿ ಮಹಜರು ಮಾಡುವುದು ಸರಿಯಲ್ಲ. ಅಧಿಕಾರಿಗಳು ಒಂದು ಪಕ್ಷದ ಏಜೆಂಟ್ ರಂತೆ ಕೆಲಸ ಮಾಡಬಾರದು ಎಂದು ಹೇಳಿದರು.
ಡಿ.ಕೆ. ಶಿವಕುಮಾರ್ ಅವರು ಕಷ್ಟಪಟ್ಟು ಪಕ್ಷ ಕಟ್ಟಿ ಮುಖ್ಯಮಂತ್ರಿ ಆಗಿದ್ದಾರೆ. ಸಣ್ಣ ಪುಟ್ಟ ಲೋಪವಿದ್ದರೂ ಮೈಸೂರು ದಸರಾವನ್ನು ಯಶಸ್ವಿಯಾಗಿ ಮಾಡಿದ್ದಾರೆ. ಯತೀಂದ್ರ ಅವರು ಹಿರಿಯ ರಾಜಕಾರಣಿ ಸಿದ್ದರಾಮಯ್ಯ ಅವರ ಸಲಹೆ ಪಡೆಯಬೇಕು. ರಾಜಕೀಯ ಅಧಿಕಾರ ಬಳುವಳಿಯಾಗಿ ಪಡೆಯುವುದಲ್ಲ, ಮಾರ್ಗದರ್ಶನ ಪಡೆಯಬೇಕು. ರಾಜಮನೆತನದ ಬಗ್ಗೆ ಮಾತನಾಡುವಾಗ ತಿಳಿದು ಹೇಳಿಕೆ ನೀಡಬೇಕು ಎಂದು ಸಾ.ರಾ. ಮಹೇಶ್ ಹೇಳಿದರು.

