ಹುಬ್ಬಳ್ಳಿ: ಚುನಾವಣೆಯಲ್ಲಿ ಸೋತಾಗ ಕಾಂಗ್ರೆಸ್ ನಾಯಕರಿಗೆ ಇವಿಎಂ ಸರಿ ಇಲ್ಲ ಎಂದು ನೆನಪಾಗುತ್ತದೆ. ಗೆದ್ದಾಗ ಎಲ್ಲವೂ ಸರಿ ಇರುತ್ತದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು , ಭಾರತೀಯ ಜನತಾ ಪಕ್ಷವು ದೇಶಾದ್ಯಂತ ಪ್ರಜಾಪ್ರಭುತ್ವದ ರಕ್ಷಣೆ, ಸಂವಿಧಾನದ ಆಶಯಗಳ ಪಾಲನೆ ಹಾಗೂ ದೇಶದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡುವ ಉದ್ದೇಶದಿಂದ ಜನಜಾಗೃತಿ ಅಭಿಯಾನ ನಡೆಸುತ್ತಿದೆ. ಆದರೆ ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಗೆದ್ದಾಗ ಪ್ರಜಾಪ್ರಭುತ್ವಕ್ಕೆ ಯಾವುದೇ ಅಪಾಯವಿರುವುದಿಲ್ಲ, ಸೋತಾಗ ಮಾತ್ರ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಬಿಂಬಿಸುವ ದ್ವಂದ್ವ ನೀತಿ ಅನುಸರಿಸುತ್ತಿದೆ. 2014ರಿಂದ 2025ರವರೆಗೆ 59ಕ್ಕೂ ಹೆಚ್ಚು ವಿಧಾನಸಭಾ ಚುನಾವಣೆಗಳಲ್ಲಿ ಸೋತಿರುವ ಕಾಂಗ್ರೆಸ್ಗೆ ಜನರ ತೀರ್ಪನ್ನು ಒಪ್ಪಿಕೊಳ್ಳುವ ಮನಸ್ಥಿತಿಯೇ ಇಲ್ಲ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿರುವ ಕರ್ನಾಟಕ, ತೆಲಂಗಾಣ, ಹಿಮಾಚಲ ಪ್ರದೇಶ ಹಾಗೂ ಇತರ ರಾಜ್ಯಗಳಲ್ಲಿ ಚುನಾವಣೆ ನ್ಯಾಯಯುತವಾಗಿ ನಡೆದಿರುತ್ತದೆ. ಅಲ್ಲಿ ಜನಾದೇಶವನ್ನು ಒಪ್ಪಿಕೊಳ್ಳುತ್ತಾರೆ. ಆದರೆ ಬೇರೆ ರಾಜ್ಯಗಳಲ್ಲಿ ಸೋತಾಗ ಮಾತ್ರ ಚುನಾವಣಾ ಪ್ರಕ್ರಿಯೆ, ಮತದಾರರ ಪಟ್ಟಿ ಹಾಗೂ ಚುನಾವಣಾ ಆಯೋಗದ ವಿರುದ್ಧ ಆರೋಪ ಮಾಡುತ್ತಾರೆ. ಎಸ್ಐಆರ್ ಪ್ರಕ್ರಿಯೆ ಆರಂಭವಾಗುವುದಕ್ಕೂ ಮುನ್ನವೇ ಕಾಂಗ್ರೆಸ್ 59ಕ್ಕೂ ಹೆಚ್ಚು ವಿಧಾನಸಭಾ ಚುನಾವಣೆಗಳಲ್ಲಿ ಸೋತಿದೆ. ಎಸ್ಐಆರ್ ಬಂದ ನಂತರ ಸೋಲಿಗೆ ಅದನ್ನು ಕಾರಣವನ್ನಾಗಿ ಮಾಡುವುದು ಹಾಸ್ಯಾಸ್ಪದ ಎಂದು ಹೇಳಿದರು.
ಜನರು ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸುತ್ತಿದ್ದಾರೆ. ರಾಹುಲ್ ಗಾಂಧಿಯವರ ಮುಖ ನೋಡಿಕೊಂಡು ಮತ ಹಾಕುವ ಪರಿಸ್ಥಿತಿಯಲ್ಲಿ ಇಂದು ಜನರಿಲ್ಲ. ನಾಯಕತ್ವ ಬದಲಾವಣೆ ಮಾಡದಿದ್ದರೆ ಕಾಂಗ್ರೆಸ್ಗೆ ಗೆಲುವು ಸಾಧ್ಯವಿಲ್ಲ ಎಂದು ಅಶೋಕ ಭವಿಷ್ಯ ನುಡಿದರು.
ಎಸ್ಐಆರ್ ಪ್ರಕ್ರಿಯೆ ಮೂಲಕ ಮೃತ ಮತದಾರರು, ಸ್ಥಳಾಂತರಗೊಂಡವರು ಹಾಗೂ ಒಂದಕ್ಕಿಂತ ಹೆಚ್ಚು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವವರನ್ನು ಗುರುತಿಸಿ ಕ್ರಮ ಕೈಗೊಳ್ಳಲಾಗುತ್ತಿದೆ. ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಅವರೂ ಮತದಾರರ ಪಟ್ಟಿಯಲ್ಲಿರುವ ಇಂತಹ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ. ದೇಶದಲ್ಲಿ ಮೃತಪಟ್ಟವರ ಸಂಖ್ಯೆ ದೊಡ್ಡದಿದೆ. ಇಂತಹ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವುದು ಸಹಜ ಪ್ರಕ್ರಿಯೆ. ನಕಲಿ ಹಾಗೂ ದ್ವಿಮತದಾರರನ್ನು ಗುರುತಿಸಿ ತೆಗೆದುಹಾಕುವುದರಲ್ಲಿ ತಪ್ಪೇನಿದೆ? ಸತ್ತವರ ಹೆಸರುಗಳನ್ನು ಪಟ್ಟಿಯಲ್ಲಿ ಹಾಗೆಯೇ ಉಳಿಸಬೇಕೇ ನಕಲಿ ಮತದಾರರಿಗೆ ಅವಕಾಶ ನೀಡಬೇಕೇ ಎಂದು ಅಶೋಕ ಖಾರವಾಗಿ ಪ್ರಶ್ನಿಸಿದರು.
ಕರ್ನಾಟಕದಲ್ಲಿಯೂ ಸುಮಾರು 24 ಲಕ್ಷದ 17 ಸಾವಿರ ಮೃತಪಟ್ಟ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ. ಸುಮಾರು 7.14 ಲಕ್ಷ ನಕಲಿ ಮತದಾರರ ನೋಂದಣಿಗಳನ್ನು ಪತ್ತೆಹಚ್ಚಿ ತೆಗೆದುಹಾಕಲಾಗಿದೆ. ಇಂತಹ ಕ್ರಮಗಳನ್ನು ಸ್ವಾಗತಿಸಬೇಕೇ ಹೊರತು ವಿರೋಧಿಸುವುದಲ್ಲ ಎಂದು ಕಾಂಗ್ರೆಸಿಗರಿಗೆ ಟಾಂಗ್ ನೀಡಿದರು.
ಬೆಂಗಳೂರು ನಗರದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಮತದಾನದ ಪ್ರಮಾಣ ಸರಾಸರಿ ಶೇ.45ರಿಂದ 48ರ ಗಡಿಯನ್ನು ದಾಟಿಲ್ಲ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಶೇ.80ರಿಂದ 90ರಷ್ಟು ಮತದಾನವಾಗುತ್ತದೆ. ಬೆಂಗಳೂರಿನಲ್ಲಿ ಮತದಾನದ ಪ್ರಮಾಣ ಕಡಿಮೆ ಇರುವುದಕ್ಕೆ ಹಲವು ಕಾರಣಗಳಿವೆ ಎಂದು ಈ ಹಿಂದೆ ಹೇಳಲಾಗುತ್ತಿತ್ತು. ಈಗ ಮತದಾರರ ಪಟ್ಟಿಯಲ್ಲಿದ್ದ ಲೋಪಗಳೂ ಬೆಳಕಿಗೆ ಬರುತ್ತಿವೆ. ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿಯೂ ಮತದಾರರ ಪಟ್ಟಿಯಲ್ಲಿ ಸುಮಾರು ಒಂದು ಲಕ್ಷ ಮತದಾರರಿದ್ದಾರೆ. ಬೆಂಗಳೂರಿನಲ್ಲಿ ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಬಂದು ನೆಲೆಸಿರುವ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರಲ್ಲಿ ಅನೇಕರು ತಮ್ಮ ಸ್ವಂತ ಊರುಗಳಲ್ಲಿ ಮತದಾನದ ಹಕ್ಕನ್ನು ಉಳಿಸಿಕೊಂಡು, ಬೆಂಗಳೂರಿನಲ್ಲಿಯೂ ಹೆಸರು ಹೊಂದಿರುವ ಸಾಧ್ಯತೆಯಿದೆ. ಒಬ್ಬ ವ್ಯಕ್ತಿಗೆ ಒಂದೇ ಮತ ಇರಬೇಕು ಎಂಬ ಸಂವಿಧಾನದ ಆಶಯವನ್ನು ಜಾರಿಗೊಳಿಸುವುದು ಚುನಾವಣಾ ಆಯೋಗದ ಕರ್ತವ್ಯ ಎಂದು ಹೇಳಿದರು.
ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ನಡೆಸುವುದು ಪ್ರತಿಯೊಬ್ಬರ ಹಕ್ಕು. ಬಿಜೆಪಿ ಕೂಡ ಹೋರಾಟಗಳನ್ನು ನಡೆಸಿದೆ. ಕಾಂಗ್ರೆಸ್ ಕೂಡ ಹೋರಾಟ ಮಾಡಬಹುದು. ಆದರೆ ನೇಪಾಳ ಮತ್ತು ಬಾಂಗ್ಲಾದೇಶದ ಮಾದರಿಯಲ್ಲಿ ದೊಂಬಿ, ಗಲಭೆಗಳನ್ನು ಸೃಷ್ಟಿಸುತ್ತೇವೆ ಎಂದು ಬೆದರಿಕೆ ಹಾಕುವುದು ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾಗಿದೆ. ಇಂತಹ ಅರಾಜಕತೆಯ ಪ್ರಯತ್ನಗಳಿಗೆ ದೇಶದ ಜನರು ಎಂದಿಗೂ ಬೆಂಬಲ ನೀಡುವುದಿಲ್ಲ ಎಂದು ತಿಳಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ರಾಜಕೀಯವಾಗಿ ಎದುರಿಸಲು ಸಾಧ್ಯವಾಗದ ಕಾಂಗ್ರೆಸ್ ನಾಯಕರು ವೈಯಕ್ತಿಕ ನಿಂದನೆಗೆ ಇಳಿದಿದ್ದಾರೆ. ಹಿಂದೆ ಮೋದಿಯವರನ್ನು ಚಾಯ್ವಾಲಾ ಎಂದು ಹೀಯಾಳಿಸಿದರು, ಪಕೋಡಾ ವಿಚಾರದಲ್ಲಿ ಟೀಕಿಸಿದರು. ಈಗ ಅವರ ತಂದೆಯವರ ಬಗ್ಗೆಯೂ ವೈಯಕ್ತಿಕವಾಗಿ ಮಾತನಾಡುತ್ತಿದ್ದಾರೆ. ಇದು ಕಾಂಗ್ರೆಸ್ ನಾಯಕರ ಹತಾಶ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಟೀಕಿಸಿದರು.
ಪ್ರಧಾನಮಂತ್ರಿಯವರನ್ನು ಆಯ್ಕೆ ಮಾಡಿರುವುದು ಕಾಂಗ್ರೆಸ್ ಪಕ್ಷವಲ್ಲ, ದೇಶದ ಜನರು ತಮ್ಮ ಮತದಾನದ ಮೂಲಕ ಆಯ್ಕೆ ಮಾಡಿದ್ದಾರೆ. ಅದೇ ರೀತಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರೂ ಜನರ ಮತಗಳಿಂದಲೇ ಅಧಿಕಾರಕ್ಕೆ ಬಂದಿದ್ದಾರೆ. ಜನರ ಮತದಿಂದ ಆಯ್ಕೆಯಾದ ಪ್ರಧಾನಮಂತ್ರಿಯವರಿಗೂ ಗೌರವ ನೀಡಬೇಕು. ರಾಜಕೀಯ ವಿರೋಧದ ಹೆಸರಿನಲ್ಲಿ ವೈಯಕ್ತಿಕ ನಿಂದನೆ ಮಾಡುವುದು ಸರಿಯಲ್ಲ ಎಂದು ಅಶೋಕ್ ತಿಳಿಹೇಳಿದರು.
ಕಾಂಗ್ರೆಸ್ ಪಕ್ಷ ಇಂದು ಐಸಿಯುನಲ್ಲಿದೆ. ತನ್ನ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಎದೆ ಬಡಿದುಕೊಂಡು ಹೋರಾಟ ನಡೆಸುವ ಪರಿಸ್ಥಿತಿ ಬಂದಿದೆ. ಜನರ ವಿಶ್ವಾಸ ಕಳೆದುಕೊಂಡಿರುವ ಕಾಂಗ್ರೆಸ್ ಇಂತಹ ಪ್ರತಿಭಟನೆಗಳಿಂದ ತನ್ನ ರಾಜಕೀಯ ಜೀವ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಆರ್.ಅಶೋಕ ತಿಳಿಸಿದರು.

