ಕನ್ನಡ ಬಾವುಟಕ್ಕೆ ಅಧಿಕೃತ ನಾಡಧ್ವಜ ಸ್ಥಾನಮಾನ ನೀಡಲು ಚಿಂತನೆ-ಸಿಎಂ

ಬೆಂಗಳೂರು, ನ.1: ಕನ್ನಡ ಬಾವುಟಕ್ಕೆ ಅಧಿಕೃತ ನಾಡಧ್ವಜ ಸ್ಥಾನಮಾನ ನೀಡಲು ಸರ್ಕಾರ ಚಿಂತನೆ ನಡೆಸಿದ್ದು, ಇದರ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ನಡೆಸಲಾಗುವುದು ಎಂದು ಮುಖ್ಯ ಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದರು.

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ವೇಳೆ ಸಿಎಂ ಮಾತನಾಡಿದರು.

ನಾನು ಈಗಷ್ಟೇ ರಾಷ್ಟ್ರಧ್ವಜದ ಪಕ್ಕ ಕನ್ನಡ ಧ್ವಜ ಹಾರಿಸಿದ್ದೇನೆ. ಈ ಕನ್ನಡ ಬಾವುಟಕ್ಕೆ ಅಧಿಕೃತ ಸ್ಥಾನಮಾನ ನೀಡಲು ಚಿಂತಿಸಿದ್ದೇವೆ , ಈ ಹಿಂದೆ ಸಂಪುಟದಲ್ಲಿ ಈ ಬಗ್ಗೆ ತೀರ್ಮಾನ ಮಾಡಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೆವು. ಆದರೆ ನಮಗೆ ಈವರೆಗೂ ಮಾನ್ಯತೆ ಸಿಕ್ಕಿಲ್ಲ,ಹಾಗಾಗಿ ಇತ್ತೀಚೆಗೆ ಕಾನೂನು ತಜ್ಞರೊಂದಿಗೆ ಚರ್ಚೆ ನಡೆಸಿದ್ದೇವೆ ಮತ್ತೊಂದು ಸುತ್ತಿನ ಸಮಾಲೋಚನೆ ನಡೆಸಲಾಗುವುದು. ರಾಷ್ಟ್ರಧ್ವಜದ ಗೌರವ ಮತ್ತು ನಿಯಮಗಳಿಗೆ ಯಾವುದೇ ಧಕ್ಕೆಯಾಗದಂತೆ ಕನ್ನಡ ಧ್ವಜದ ಬಳಕೆ, ಸ್ಥಾನಮಾನ ಹಾಗೂ ಸಂರಕ್ಷಣೆಗೆ ಸಂಬಂಧಿಸಿದ ಕಾನೂನು ಅಂಶಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದರು. ‌

ಮತ್ತೊಮ್ಮ ಸಂಪುಟದಲ್ಲಿ ತೀರ್ಮಾನ ಮಾಡಿ ಕಾನೂನು ತಂದು ರಾಷ್ಟ್ರಧ್ವಜದ ಪಕ್ಕ ಕನ್ನಡ ಧ್ವಜವನ್ನು ಹಾರಿಸಲು ತೀರ್ಮಾನ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ, ವಿಧಾನಸೌಧದಲ್ಲೂ ಈ ಧ್ವಜವನ್ನು ಹಾರಿಸಲು ಸಾರ್ವಜನಿಕ ಚರ್ಚೆಗೆ, ಶಾಸಕರ ಚರ್ಚೆಗೆ ಅವಕಾಶ ಮಾಡಿಕೊಟ್ಟು ಚಳಿಗಾಲದ ಅಧಿವೇಶನದಲ್ಲಿ ಇದಕ್ಕೆ ಹೊಸ ರೂಪ ಕೊಡಲು ಮತ್ತು ಕೇಂದ್ರ ಸರ್ಕಾರಕ್ಕೆ ನಿರ್ಣಯ ಮಾಡಿ ಕಾನೂನುಬದ್ಧವಾಗಿ ಏನೆಲ್ಲ ರಕ್ಷಣೆ ಮಾಡಬೇಕು ಆ ಕೆಲಸ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ. ಇದು ನಮ್ಮದಲ್ಲ, ನಿಮ್ಮ ಸರ್ಕಾರ. ಕನ್ನಡಿಗರ ಭಾವನೆಯ ಹೆಗ್ಗುರುತಾಗಿರುವ ಕೆಂಪು ಹಳದಿ ಬಾವುಟಕ್ಕೆ ಗೌರವ ನೀಡಲಾಗುವುದು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ಕನ್ನಡದ ಜ್ಞಾನ, ಪರಂಪರೆ, ಸಂಸ್ಕೃತಿ, ಸರ್ವಧರ್ಮ ಪರಂಪರೆ ಸಮಾನತೆ, ಶಾಂತಿಯ ಸಂದೇಶ ಸಾರುವ ಈ ಬಾವುಟವನ್ನು ನಾಡಧ್ವಜವಾಗಿ ಅಧಿಕೃತಗೊಳಿಸಲು ಮುಂದಾಗಿದ್ದೇವೆ. ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕದ ಹೆಗ್ಗುರತನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಈ ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದರು.

ಕನ್ನಡ ರಾಜ್ಯೋತ್ಸವದ 71ನೇ ವರ್ಷದಿಂದ ಮುಂದಿನ ಒಂದು ವರ್ಷದ ಅವಧಿಯಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಕನ್ನಡದ ಹಿರಿಮೆ ಸಾರಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಎಲ್ಲ ಸರ್ಕಾರಿ ಕಚೇರಿಗಳ ಮೇಲೆ ಕನ್ನಡ ಧ್ವಜ ಹಾರಿಸುವುದರ ಜತೆಗೆ, ಸರ್ಕಾರದ ಬೆಂಬಲ ಹೊಂದಿರುವ ಸಂಸ್ಥೆಗಳಲ್ಲೂ ಕನ್ನಡ ಬಾವುಟ ಹಾರಿಸುವುದನ್ನು ಕಡ್ಡಾಯಗೊಳಿಸುವ ಚಿಂತನೆ ಇದೆ. ಖಾಸಗಿ ಸಂಸ್ಥೆಗಳೂ ಕನ್ನಡ ಧ್ವಜ ಹಾರಿಸುವಂತೆ ಈ ತಿಂಗಳಲ್ಲೇ ಸರ್ಕಾರದ ಆದೇಶ ಹೊರಡಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

“ನಮ್ಮ ಉಸಿರು, ಹೆಸರು, ಕಸುಬು ಕನ್ನಡ. ನಮ್ಮ ನುಡಿ ಬಹಳ ಚೆಂದ, ಅದರಲ್ಲಿ ಏನೇ ಗೀಚಿದರೂ ಆಗುವುದು ಶ್ರೀಗಂಧ. ತನು ಕನ್ನಡ, ಮನ ಕನ್ನಡ, ನುಡಿ ಕನ್ನಡ, ನಡೆ ಕನ್ನಡ. ಅದನ್ನು ಆಚರಿಸಲು ನಾವು ಸೇರಿದ್ದೇವೆ. ಜಗದ ಏಳಿಗೆಗೆ ದಾ ರಾ ಬೇಂದ್ರೆ ಅವರು ಕನ್ನಡ ಕರ್ನಾಟಕದ ದಿಕ್ಸೂಚಿ, ಕರ್ನಾಟಕ ಭಾರತದ ಭವಿಷ್ಯ. ಮಾತೃಭಾಷೆ ಮೂಲಕ ಜ್ಞಾನದ ಸಂಸ್ಕೃತಿ ಹರಿಯುತ್ತಿದೆ ಎಂದು ಪ್ರತಿಪಾದಿಸಿದ್ದಾರೆ. ಭಾಷೆ ಸಂಸ್ಕೃತಿ, ಜ್ಞಾನದ ಪ್ರತಿಬಿಂಬ, ಹೆತ್ತ ತಾಯಿ, ಹುಟ್ಟಿದ ನಾಡು ಸ್ವರ್ಗಕ್ಕಿಂತ ಮಿಗಿಲು ಎಂದು ನಮಗೆ ಮಾರ್ಗದರ್ಶನ ನೀಡಿದ್ದಾರೆ. ನಾವು ಬೇರೆಯವರ ಮನಸ್ಸನ್ನು ಕನ್ನಡದಿಂದಲೇ ಗೆಲ್ಲಬೇಕು. ನಾವು ಯಾವುದೇ ದೇಶದಲ್ಲಿದ್ದರೂ ನಮ್ಮ ಉಸಿರು ಕನ್ನಡವಾಗಿರಬೇಕು ಎಂದು ಮುಖ್ಯ ಮಂತ್ರಿಗಳು ಸಲಹೆ ನೀಡಿದರು.

ಈ ದೇಶದಿಂದ ಹೊರಗಿರುವ ಕನ್ನಡಿಗರು ಕನ್ನಡ ಸಂಘಟನೆ ಕಟ್ಟಿಕೊಂಡು ಮಾತೃಭಾಷೆ ಉಳಿಸಲು ಶ್ರಮಿಸುತ್ತಿದ್ದಾರೆ. ಅವರಿಗೆ ನಾನು ಸಾಷ್ಟಾಂಗ ನಮಸ್ಕಾರ ಸಲ್ಲಿಸುತ್ತೇನೆ. ನುಡಿ ಉಳಿದರೆ ನಾಡು ಉಳಿಯುತ್ತದೆ. ನಾಡು ಉಳಿದರೆ ನುಡಿ ಉಳಿಯುತ್ತದೆ. ನಾವು ಇಲ್ಲಿ ರಾಜ್ಯೋತ್ಸವ ಮಾತ್ರ ಆಚರಿಸುತ್ತಿಲ್ಲ. ಕನ್ನಡ ತಾಯಿ ಭುವನೇಶ್ವರಿ ಸೇವೆ. ಇದು ಮಾತೃಭಾಷೆಯ ಪೂಜೆ. ತಾಯಿ ನುಡಿ ಸೇವೆಗಿಂತ ದೊಡ್ಡ ಧರ್ಮ ಮತ್ತೊಂದಿಲ್ಲ. ಕನ್ನಡವನ್ನು ಪ್ರೀತಿಸುವುದು, ತಾಯಿಯನ್ನು ಪ್ರೀತಿಸಿದಂತೆ. ಮಾತೃಭಾಷೆಯಲ್ಲಿ ಕಲಿಯುವ ಜ್ಞಾನ ಗಟ್ಟಿಯಾಗಿರುತ್ತದೆ. ಕನ್ನಡಕಕ್ಕೆ ಕಿರುಬೆರಳು ಎತ್ತಿದರೂ ಸಾಕು, ಅದು ಗೋವರ್ಧನಗಿರಿಯಾಗುತ್ತದೆ ಎಂದು ಕುವೆಂಪು ಅವರು ಹೇಳಿದ್ದಾರೆ. ಕುವೆಂಪು ಅವರು ಕನ್ನಡದಲ್ಲಿ ವಿಶ್ವಮಾನವ ಸಂದೇಶ ಸಾರಿದ್ದಾರೆ. ಕನ್ನಡ ಭಾಷೆಗೆ 2 ಸಾವಿರ ವರ್ಷಗಳ ಇತಿಹಾಸವಿದ್ದು, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದೆ. ನಮ್ಮ ಭಾಷೆಗೆ 8 ಜ್ಞಾನಪೀಠ ಪ್ರಶಸ್ತಿ ಸಂದಿದೆ” ಎಂದು ಬಣ್ಣಿಸಿದರು.

ವಿಶ್ವಕ್ಕೆ ಪ್ರಜಾಪ್ರಭುತ್ವದ ಪರಿಕಲ್ಪನೆ ಕೊಟ್ಟಿದ್ದು ಕನ್ನಡ ನಾಡು. ಈ ನಾನು ನುಡಿಯನ್ನು ಪ್ರೀತಿಸುವಂತೆ ನಾವು ಮಕ್ಕಳಿಗೆ ಕಲಿಸಬೇಕಿದೆ. ನಾವು ಭಾಷೆ ಪ್ರೀತಿಸಿದರೆ ಭಾಷೆ ನಮ್ಮನ್ನು ಕಾಪಾಡುತ್ತದೆ. ಭಾಷೆಗೆ ಗಡಿಯಿಲ್ಲ, ನಮ್ಮ ಮಕ್ಕಳು ಮೊದಲು ಕನ್ನಡ ಕಲಿಯಬೇಕು. ಕಲಿತರಷ್ಟೇ ಸಾಲದು, ದಿನನಿತ್ಯ ಕನ್ನಡ ಭಾಷೆ ಬಳಸಬೇಕು ಎಂದು ಸಿಎಂ ಸಂದೇಶ ನೀಡಿದರು.

ನಮ್ಮ ಸರ್ಕಾರ ಕನ್ನಡ, ನೆಲ, ಜಲ, ಸಂಸ್ಕೃತಿ ರಕ್ಷಣೆಗೆ ಬದ್ಧವಾಗಿದೆ. ಮಕ್ಕಳ ಜಾಗತಿಕ ಸ್ಪರ್ಧೆಗೆ ಎಲ್ಲಾ ರೀತಿ ಸಿದ್ಧರಾಗಿ. ಇದಕ್ಕಾಗಿ ಕನ್ನಡದ ಬೇರು ಗಟ್ಟಿಯಾಗಬೇಕು. ಇದಕ್ಕಾಗಿ ನಮ್ಮ ಜವಾಬ್ದಾರಿ ಅರಿಯಬೇಕು. ಸರ್ಕಾರಿ ಶಾಲೆಗಳ ಮಕ್ಕಳು ನಮ್ಮ ರಾಜ್ಯಕ್ಕೆ ಹೆಮ್ಮೆತರುತ್ತಿದ್ದಾರೆ ಎಂದು ಡಿ.ಕೆ ಶಿ ಹರ್ಷ ವ್ಯಕ್ತಪಡಿಸಿದರು.