ಆಧ್ಯಾತ್ಮ-ವಿಜ್ಞಾನ ಪರಂಪರೆ ನಮ್ಮ ದೇಶದಲ್ಲಿ ಜೊತೆಯಾಗಿ ಸಾಗುತ್ತಿದೆ: ಮೋದಿ

ಮೈಸೂರು: ಮೈಸೂರಿನ ಜನರೆಲ್ಲರಿಗೂ ನನ್ನ ನಮಸ್ಕಾರ ಎಂದು ಕನ್ನಡದಲ್ಲಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಚಾಮುಂಡಿ ದೇವಿಗೆ ನನ್ನ ನಮನಗಳು ಎಂದು ಹೇಳಿದರು.

ಮೈಸೂರಿಗೆ ಕೆಲ ತಿಂಗಳ ಹಿಂದೆ ವಿವೇಕ ಸ್ಮಾರಕದ ಉದ್ಘಾಟನೆಗೆ‌ ಬಂದಿದ್ದೆ. ಈಗ ಮತ್ತೆ ಬಂದಿದ್ದಕ್ಕೆ ಸಂತೋಷ ಆಗುತ್ತಿದೆ. ವಿವೇಕ ಸ್ಮಾರಕ ಆಧ್ಯಾತ್ಮದ ಶಕ್ತಿ ನೀಡುತ್ತದೆ, ಈ ತಾರಾಲಯ ವಿಜ್ಞಾನದ ಬಲ ನೀಡುತ್ತದೆ, ಆಧ್ಯಾತ್ಮ- ವಿಜ್ಞಾನ ಪರಂಪರೆ ಈ ದೇಶದಲ್ಲಿ ಜೊತೆಯಾಗಿ ಸಾಗುತ್ತಿದೆ ಎಂದು ತಿಳಿಸಿದರು.

ನಮ್ಮ ಪೂರ್ವಜರು ಯಾವುದೇ ತಂತ್ರಜ್ಞಾನ ಇಲ್ಲದ ದಿನದಲ್ಲೇ ಖಗೋಳವನ್ನು ಬಹಳ ಚೆನ್ನಾಗಿ ಅರಿತಿದ್ದರು ಎಂದು ಮೋದಿ ಬಣ್ಣಿಸಿದರು.

ಜೈ ಜವಾನ್ ಜೈ ಕಿಸಾನ್ ಇತ್ತು. ಅದಕ್ಕೆ ಅಟಲ್ ಜೀ ಜೈ ವಿಜ್ಞಾನ್ ಸೇರಿಸಿದರು. ನಾನು ಅದಕ್ಕೆ ಜೈ ಅನುಸಂಧಾನ್ ಸೇರಿಸಿದ್ದೇನೆ ಎಂದು ಪ್ರಧಾನಿ ತಿಳಿಸಿದರು.

ವಿಜ್ಞಾನ ಕ್ಷೇತ್ರದಲ್ಲಿ ಯುವಕರ ಸಾಧನೆ ಬಹಳ ಮೆಚ್ಚುವಂತಹದು. ಭಾರತದ ಯುವ ಸಮೂಹ ವಿಜ್ಞಾನ ಕ್ಷೇತ್ರದಲ್ಲಿ ತೋರಿಸುತ್ತಿರುವ ಆಸಕ್ತಿಯೇ ಈ ದೇಶದ ಸಂಪತ್ತು ಎಂದು ಹೇಳಿದರು.

ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ವಿಜ್ಞಾನ, ಶಿಕ್ಷಣ, ತಂತ್ರಜ್ಞಾನಕ್ಕೆ ನೀಡಿದ ಕೊಡುಗೆ ಅಪಾರ. ವಿಜ್ಞಾನ ಕ್ಷೇತ್ರದಲ್ಲಿ ನಮ್ಮ ದೇಶ ಪ್ರತಿ ದಿನವೂ ಹೊಸ ಹೆಜ್ಜೆ ಇಡುತ್ತಿದೆ. ಮೈಸೂರಿನ ಈ ತಾರಾಲಯ ಕೂಡ ದೇಶದ ವಿಜ್ಞಾನ ಕ್ಷೇತ್ರದ ಬೆಳವಣಿಗೆಯ ಹೊಸ ಪಾಠ ಎಂದು ಪ್ರಧಾನಿ ಮೋದಿ ಕೊಂಡಾಡಿದರು.