ಬೆಂಗಳೂರು: ಮೇಕೆದಾಟು ಯೋಜನೆ ಕರ್ನಾಟಕದ ಹಕ್ಕು,ಸುಪ್ರೀಂ ಕೋರ್ಟ್ ನೀಡಿರುವ ಆದೇಶದಂತೆ ಯೋಜನೆ ಅನುಷ್ಠಾನಗೊಳಿಸುವುದು ನಮ್ಮ ಕರ್ತವ್ಯ
ಎಂದು ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಯೋಜನೆಗೆ ತಮಿಳುನಾಡಿನವರು ವಿರೋಧ ವ್ಯಕ್ತಪಡಿಸುವ ಬದಲು ನಿಯೋಗದೊಂದಿಗೆ ಬರಲಿ. ಯೋಜನೆಯಿಂದ ಅವರಿಗೆ ಆಗುವ ಅನುಕೂಲ ವಿವರಿಸುತ್ತೇನೆ. ರಾಜ್ಯದ ಹಿತಾಸಕ್ತಿ ಕಾಪಾಡಲು ಯಾವುದೇ ಹಂತದಲ್ಲೂ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ವಿಧಾನ ಸೌಧದ ಆವರಣದಲ್ಲಿ ಸಿಎಂ ಮಾಧ್ಯಮಗಳೊಂದಿಗೆ ಮಾತನಾಡಿ,
ಯಾರಾದರೂ ವಿರೋಧ ವ್ಯಕ್ತಪಡಿಸಲಿ ಇದು ನಮ್ಮ ರಾಜ್ಯ, ನಮ್ಮ ಹಕ್ಕು ಎಂಬುದನ್ನು ತಮಿಳುನಾಡಿನವರೂ ಅರ್ಥಮಾಡಿಕೊಳ್ಳಬೇಕು. ಅವರು ಬೇಕಾದರೆ ತಮ್ಮ ನಿಯೋಗದೊಂದಿಗೆ ಬರಲಿ. ಅವರನ್ನು ಅಣೆಕಟ್ಟು ನಿರ್ಮಾಣದ ಜಾಗಕ್ಕೆ ಕರೆದುಕೊಂಡು ಹೋಗಿ, ಯೋಜನೆ ಬಗ್ಗೆ ವಿವರಿಸಲು ಸಿದ್ಧನಿದ್ದೇನೆ ಎಂದು ತಿಳಿಸಿದರು.
ಅಲ್ಲಿ ರಾಜಕೀಯ ನಡೆಯುತ್ತಿದೆ. ಕಾಂಗ್ರೆಸ್ ವಿರೋಧಿಸದಿದ್ದರೆ ಡಿಎಂಕೆ ನವರು ವಿರೋಧಿಸುತ್ತಾರೆ, ಡಿಎಂಕೆ ವಿರೋಧಿಸದಿದ್ದರೆ ಎಐಎಡಿಎಂಕೆ ನವರು ವಿರೋಧಿಸುತ್ತಾರೆ. ಆದರೆ ಇದು ರಾಜಕೀಯ ವಿಚಾರವಲ್ಲ. ದೇಶದ ಕಾನೂನನ್ನು ಎಲ್ಲರೂ ಗೌರವಿಸಬೇಕು. ಸುಪ್ರೀಂ ಕೋರ್ಟ್ ಆದೇಶವನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಎಂದು ಹೇಳಿದರು.
ತಮಿಳುನಾಡು 177 ಟಿಎಂಸಿ ನೀರನ್ನು ಪಡೆಯುವುದು ಅವರ ಹಕ್ಕು. ಅದನ್ನು ನಾವು ಪಾಲಿಸುತ್ತೇವೆ. ನಮ್ಮ ಹಕ್ಕುಗಳನ್ನು ರಕ್ಷಿಸುವುದರ ಜತೆಗೆ ಅವರ ಹಕ್ಕುಗಳನ್ನೂ ಗೌರವಿಸುತ್ತೇವೆ. ಅಣೆಕಟ್ಟು ನಿರ್ಮಿಸಿ ನೀರು ಒದಗಿಸುವುದು ನಮ್ಮ ಹಕ್ಕು ಮತ್ತು ಕರ್ತವ್ಯ. ಕೇಂದ್ರ ಸರ್ಕಾರ ಈ ಯೋಜನೆಯಲ್ಲಿ ಮುಳುಗಡೆಯಾಗುವ ಅರಣ್ಯ ಪ್ರದೇಶಕ್ಕೆ ಬದಲಿ ಜಾಗ ನೀಡಬೇಕು ಎಂದು ತಿಳಿಸಿದ್ದು ಅದರ ಹೊರತಾಗಿ ಇದು ನಮ್ಮ ಜಾಗದಲ್ಲಿ ನಿರ್ಮಾಣವಾಗುವ ನಮ್ಮ ಯೋಜನೆಯಾಗಿದೆ ಎಂದು ತಿಳಿಸಿದರು.
ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ನೀರಿನ ವಿಚಾರದಲ್ಲಿ ತೊಂದರೆಯಾಗಲಿದೆ ಎಂಬ ಆತಂಕಕ್ಕೆ ಪ್ರತಿಕ್ರಿಯಿಸಿದ ಅವರು, ತಮಿಳುನಾಡಿಗೆ ಸಲ್ಲಬೇಕಾದ ನೀರಿನ ಹಕ್ಕನ್ನು ರಕ್ಷಿಸುವ ಜವಾಬ್ದಾರಿ ನಮ್ಮ ಮೇಲಿದೆ. ಅದೇ ಸಮಯದಲ್ಲಿ ಕರ್ನಾಟಕದ ಹಕ್ಕನ್ನೂ ರಕ್ಷಿಸಬೇಕಿದೆ ಎಂದು ಹೇಳಿದರು.
ಸುಪ್ರೀಂ ಕೋರ್ಟ್ 177 ಟಿಎಂಸಿ ನೀರಿನ ಹಕ್ಕಿನ ಕುರಿತು ಸ್ಪಷ್ಟಪಡಿಸಿದೆ. ಅವರಿಗೆ ಸಲ್ಲಬೇಕಾದ ನೀರನ್ನು ಒದಗಿಸುವುದು ನಮ್ಮ ಕರ್ತವ್ಯ. ಅಣೆಕಟ್ಟು ನಿರ್ಮಿಸಿ ಅವರಿಗೂ ನೀರು ಕೊಡುತ್ತೇವೆ. ತಮಿಳುನಾಡಿನವರು ಬಂದು ಚರ್ಚೆ ನಡೆಸಲಿ. ಯೋಜನೆಯ ವಾಸ್ತವಾಂಶಗಳನ್ನು ವಿವರಿಸಲು ನಾನು ಸಿದ್ಧನಿದ್ದೇನೆ ಎಂದು ಹೇಳಿದರು.
ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಅಗತ್ಯವಿರುವ ಅರಣ್ಯ ಮತ್ತು ಪರಿಸರ ಇಲಾಖೆಯ ಅನುಮತಿಗಳನ್ನು ನೀಡುವಂತೆ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದೇನೆ. ಎಲ್ಲ ಪಕ್ಷಗಳೂ ಯೋಜನೆ ವಿಚಾರದಲ್ಲಿ ಒಪ್ಪಿಗೆ ಸೂಚಿಸಿವೆ. ಅಗತ್ಯ ದಾಖಲೆಗಳನ್ನು ಸಲ್ಲಿಸುವ ಕೆಲಸ ನಡೆಯುತ್ತಿದೆ. ಅನುಮತಿಗಳು ದೊರೆತರೆ ಯೋಜನೆಯನ್ನು ಮುಂದಕ್ಕೆ ಕೊಂಡೊಯ್ಯಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದು ಡಿಕೆಶಿ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಅವರೊಂದಿಗಿನ ಒಡನಾಟದ ಬಗ್ಗೆ ಕೇಳಿದ ವರದಿಗಾರರ ಪ್ರಶ್ನೆಗೆ, ರಾಜಕಾರಣ ಮಾಡುವಾಗ ಸ್ಪರ್ಧೆ ಮಾಡೋಣ. ಅಭಿವೃದ್ಧಿ ವಿಚಾರದಲ್ಲಿ ಸಹಕಾರ ನೀಡೋಣ. ರಾಜಕಾರಣದಲ್ಲಿ ನಾವು ರಾಜಕೀಯ ಮಾಡುತ್ತೇವೆ. ಆದರೆ ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಕೇಂದ್ರದ ಸಹಕಾರ ಪಡೆಯುವುದು ನಮ್ಮ ಜವಾಬ್ದಾರಿ ಎಂದು ಉತ್ತರಿಸಿದರು.
ಮೇಕೆದಾಟು ಯೋಜನೆಯಷ್ಟೇ ಅಲ್ಲದೆ, ಕಸ್ತೂರಿರಂಗನ್ ವರದಿಯನ್ನು ತಿರಸ್ಕರಿಸಬೇಕು ಎಂಬ ಬೇಡಿಕೆಯನ್ನೂ ಕೇಂದ್ರದ ಮುಂದಿಟ್ಟಿದ್ದೇನೆ. ಮೆಟ್ರೊ ಯೋಜನೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಮಾನ ಪಾಲುದಾರಿಕೆ ಇರಬೇಕು ಎಂದು ಒತ್ತಾಯಿಸಿದ್ದೇನೆ. ಇದಕ್ಕಾಗಿ ತಾಂತ್ರಿಕ ಸಮಿತಿ ರಚಿಸುವಂತೆಯೂ ಮನವಿ ಮಾಡಿದ್ದೇನೆ. ಮೆಟ್ರೋ ಸಂಪರ್ಕವನ್ನು ಮುಂದಿನ ಹಂತಗಳಲ್ಲಿ 500 ಕಿ.ಮೀ.ವರೆಗೆ ವಿಸ್ತರಿಸುವ ಗುರಿ ಇದ್ದು, ಬಾಕಿ ಇರುವ ಪ್ರಸ್ತಾವನೆಗಳಿಗೂ ತ್ವರಿತ ಅನುಮೋದನೆ ನೀಡುವಂತೆ ಕೇಳಿದ್ದೇನೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಬೆಂಗಳೂರಿನ ಡಬಲ್ ಡೆಕ್ಕರ್ ಫ್ಲೈಓವರ್ ಯೋಜನೆಗೆ ಕೇಂದ್ರದ ವಿರೋಧ ವ್ಯಕ್ತಪಡಿಸುತ್ತಿದ್ದು, ಸಚಿವ ಕೃಷ್ಣ ಬೈರೇಗೌಡ ಅವರೊಂದಿಗೆ ಪ್ರಧಾನಿಯವರಿಗೆ ಯೋಜನೆಯ ಅಗತ್ಯವನ್ನು ವಿವರಿಸಿದ್ದೇನೆ. ಬೆಂಗಳೂರಿನಲ್ಲಿ ರಸ್ತೆಗಳ ಪ್ರಮಾಣ ಕೇವಲ ಶೇ.8ರಷ್ಟಿದೆ. ಇತರ ನಗರಗಳಲ್ಲಿ ಇದು ಶೇ.18ರಿಂದ 20ರಷ್ಟಿದೆ. ಬೆಂಗಳೂರಿನಲ್ಲಿ ಪ್ರತಿ ಚದರ ಅಡಿಗೆ ಸುಮಾರು 50 ಸಾವಿರ ರೂ. ಪರಿಹಾರ ನೀಡಬೇಕಾದ ಪರಿಸ್ಥಿತಿ ಇದೆ. ಇದನ್ನು ಸರ್ಕಾರವೊಂದರಿಂದಲೇ ಭರಿಸುವುದು ಕಷ್ಟ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ವೆಚ್ಚ ಹಂಚಿಕೊಳ್ಳುವ ಮೂಲಕ ಡಬಲ್ ಡೆಕ್ಕರ್ ಯೋಜನೆ ಜಾರಿಗೊಳಿಸಬೇಕಿದೆ ಎಂದು ಮನವರಿಕೆ ಮಾಡಿದ್ದೇನೆ. ಈ ಸಂಬಂಧ ಸರ್ವಪಕ್ಷ ನಿಯೋಗವನ್ನು ಕರೆದುಕೊಂಡು ಬರುವುದಾಗಿಯೂ ತಿಳಿಸಿದ್ದೇನೆ. ಅದಕ್ಕೆ ಅವರು ಒಪ್ಪಿದ್ದಾರೆ. ನಾನು ರಾಜ್ಯದ ಪ್ರತಿನಿಧಿಯಾಗಿ ರಾಜ್ಯದ ಹಿತಕ್ಕಾಗಿ ನನ್ನ ಕೆಲಸ ಮಾಡುತ್ತಿರುವೆ ಯಾರು ಏನು ಬೇಕಾದರೂ ಊಹಿಸಿಕೊಳ್ಳಲಿ ಎಂದು ಹೇಳಿದರು.

