ಮೈಸೂರು: ಬಿಜೆಪಿಗರಿಗೆ ಸಂವಿಧಾನದ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು.
ಸಂವಿಧಾನ ದಿನಾಚರಣೆ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಅಂಬೇಡ್ಕರ್ ಪ್ರತಿಮೆ ಹಾಗೂ ಸಂವಿಧಾನ ಪೀಠಿಕೆಗೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಸಿದ್ದರಾಮಯ್ಯ,ಸಂವಿಧಾನ ಅಲ್ಲ ಇದು ಕಾಂಗ್ರೆಸ್ ಸಮಾವೇಶ ಎಂಬ ಬಿಜೆಪಿ ಟೀಕೆಗೆ ತಿರುಗೇಟು ನೀಡಿ, ಬಿಜೆಪಿಯವರು ಸಂವಿಧಾನದ ವಿರೋಧಿಗಳು ಎಂದು ನಿಂದಿಸಿದರು.
ಆರ್ಎಸ್ಎಸ್ ಸಂವಿಧಾನಕ್ಕೆ ಯಾವಾಗಲೂ ವಿರುದ್ಧವಾಗಿತ್ತು, ಆರ್ಎಸ್ಎಸ್ನ ಮೊದಲ ಅಧ್ಯಕ್ಷರೇ ಮೊದಲು ಸಂವಿಧಾನಕ್ಕೆ ವಿರೋಧ ಮಾಡಿದ್ದರು. ಸಾವರ್ಕರ್ ಕೂಡ ಸಂವಿಧಾನ ವಿರೋಧ ಮಾಡಿದ್ದರು, ನಮ್ಮ ಸಂವಿಧಾನ ದಿನಾಚರಣೆಯನ್ನು ವಿರೋಧ ಮಾಡುವ ನೈತಿಕತೆ ಅವರಿಗೆ ಇಲ್ಲ ಎಂದು ಕಿಡಿಕಾರಿದರು.
ಬ್ರೇಕ್ಫಾಸ್ಟ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಜಮೀರ್, ಹರಿಪ್ರಸಾದ್, ನರೇಂದ್ರ ಸ್ವಾಮಿ, ಪುಟ್ಟರಂಗಶೆಟ್ಟಿ ಎಲ್ಲರೂ ಬ್ರೇಕ್ಫಾಸ್ಟ್ಗೆ ಬಂದಿದ್ದರು. ಎಲ್ಲಾ ಹೊರಗಡೆ ಜಿಲ್ಲೆಯವರು ಅದಕ್ಕಾಗಿ ಬ್ರೇಕ್ಫಾಸ್ಟ್ಗೆ ಕರೆದಿದ್ದೆ ಹಾಗಾಗಿ ಬಂದಿದ್ದಾರೆ ಎಂದು ಹೇಳಿದರು.
ಆದರೆ ಈ ವೇಳೆ ಮಹದೇವಪ್ಪ ಹೆಸರನ್ನು ಹೇಳದೇ ಸಿದ್ದರಾಮಯ್ಯ ಮುಂದೆ ಸಾಗಿದರು. ಮಹದೇವಪ್ಪ ಹೆಸರು ಹೇಳುವಂತೆ ಜಮೀರ್ ಅಹಮದ್ ಹೇಳಿದರೂ, ಸಿದ್ದರಾಮಯ್ಯ ಏನೂ ಹೇಳದೆ ಹಾಗೆಯೇ ಮುಂದೆ ಸಾಗಿದರು.
ಮಾಧ್ಯಮದವರ ಪ್ರಶ್ನೆಗೂ ಮಹದೇವಪ್ಪ ಹೆಸರು ಹೇಳದ ಸಿದ್ದರಾಮಯ್ಯ, ಅವರು ಮೈಸೂರು ಜಿಲ್ಲೆಯ ಶಾಸಕರು ತಾನೇ, ಅದಕ್ಕೆ ಅವರು ಬಂದಿದ್ರು ಎಂದು ಚುಟುಕು ಉತ್ತರ ಕೊಟ್ಟು ಮುಗುಮ್ಮಾಗಿ ಹೊರಟರು.
ಸಿದ್ದರಾಮಯ್ಯ ಅವರ ಇವತ್ತಿನ ನಡೆ ನೋಡಿದರೆ ಮಹದೇವಪ್ಪ ಅವರೊಂದಿಗಿನ ಮುನಿಸು ಶಮನವಾಗಿಲ್ಲವೇನೊ ಅನಿಸುತ್ತಿರುವುದಂತೂ ಸುಳ್ಳಲ್ಲಾ.ಜತೆಗೆ ಸಿದ್ದು ವರ್ತನೆ ಚರ್ಚೆಗೂ ಗ್ರಾಸ ಒದಗಿಸಿದೆ.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಬಿ.ಕೆ. ಹರಿಪ್ರಸಾದ್, ಸಚಿವರಾದ ಜಮೀರ್ ಅಹಮ್ಮದ್, ಯತೀಂದ್ರ, ನರೇಂದ್ರಸ್ವಾಮಿ, ಮಾಜಿ ಸಚಿವ ಮಹದೇವಪ್ಪ, ಶಾಸಕ ತನ್ವೀರ್ ಸೇಠ್ ಮತ್ತಿತರರು ಹಾಜರಿದ್ದರು.

