ಕನಕರ ಆದರ್ಶ ಪಾಲಿಸುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ-ಸಿಎಂ

ಬೆಂಗಳೂರು: ಜಾತಿ, ಕುಲದ ಹೆಸರಿನಲ್ಲಿ ಭೇದಭಾವ ಮಾಡುವುದನ್ನು ಬಿಟ್ಟು ಮಾನವೀಯತೆ ಮತ್ತು ಸಮಾನತೆಯ ತತ್ವಗಳನ್ನು ಪಾಲಿಸಬೇಕು ಎಂಬ ಕನಕದಾಸರ ಸಂದೇಶ ಇಂದಿಗೂ ಪ್ರಸ್ತುತ ಎಂದು ‌ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದರು.

ಕನಕ ಜಯಂತಿ ಹಿನ್ನೆಲೆಯಲ್ಲಿ ವಿಧಾನಸೌಧದ ಆವರಣದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಸಿಎಂ,
ಕನಕರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯುವುದೇ ಆ ಮಹಾನ್ ದಾಸರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ತಿಳಿಸಿದರು.

ಕುಲ ಕುಲ ಕುಲವೆಂದು ಹೊಡೆದಾಡಬೇಡಿ, ಇದೆಲ್ಲವನ್ನೂ ಬಿಟ್ಟು ಮಾನವೀಯತೆಯ ಹಾದಿಯಲ್ಲಿ ಸಾಗಬೇಕು ಎಂದು ಕನಕದಾಸರು ನಮಗೆಲ್ಲ ಕಿವಿಮಾತು ಹೇಳಿದ್ದಾರೆ. ಅವರ ಈ ಸಂದೇಶವನ್ನು ನಾವೆಲ್ಲರೂ ಪಾಲಿಸಿದರೆ ಅದಕ್ಕಿಂತ ದೊಡ್ಡ ಸಾಧನೆ ಮತ್ತೊಂದಿಲ್ಲ. ಭಕ್ತಿಗೆ ಕೃಷ್ಣನೇ ತಿರುಗಿದ ಪ್ರಸಂಗಕ್ಕಿಂತ ಕನಕದಾಸರ ಭಕ್ತಿಗೆ ಮತ್ತೊಂದು ದೊಡ್ಡ ನಿದರ್ಶನ ಬೇಕಿಲ್ಲ ಎಂದು ಹೇಳಿದರು.

ಭಕ್ತಿ ಪರಂಪರೆಯಲ್ಲಿ ಕನಕದಾಸರು ಅತ್ಯಂತ ಶ್ರೇಷ್ಠ ಸ್ಥಾನ ಹೊಂದಿದ್ದಾರೆ. ಇಂತಹ ಮಹಾನ್ ದಾಸರು ಬಿಟ್ಟುಹೋದ ಆದರ್ಶಗಳು, ತತ್ವಗಳು ಮತ್ತು ಹೆಜ್ಜೆಗುರುತುಗಳು ಸದಾ ನಮ್ಮೊಂದಿಗೆ ಇರಲಿವೆ. ಅವುಗಳನ್ನು ಪಾಲಿಸಿಕೊಂಡು ನಡೆಯುವುದೇ ಮುಖ್ಯ. ಅವರ ಸಂದೇಶವನ್ನು ಕೇವಲ ಆಚರಣೆಗಳಿಗೆ ಸೀಮಿತಗೊಳಿಸದೆ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಿಎಂ ತಿಳಿಹೇಳಿದರು.

ಹಾವೇರಿಯಲ್ಲಿ ಕನಕದಾಸರ ಕಂಚಿನ ಪ್ರತಿಮೆ ಉದ್ಘಾಟನೆಗೆ ತೆರಳುತ್ತಿರುವ ಕೇಳಿದ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್, ಆ ಸಮುದಾಯದ ಶ್ರೀಗಳು ನನ್ನನ್ನು ಆಹ್ವಾನಿಸಿದ್ದಾರೆ. ಎಲ್ಲರೂ ಕಾರ್ಯಕ್ರಮಕ್ಕೆ ಬರಬೇಕು ಎಂದು ಶ್ರೀಗಳು ಹೇಳಿದ್ದಾರೆ. ಹಾಗಾಗಿ ಅಲ್ಲಿಗೆ ತೆರಳುತ್ತಿದ್ದೇನೆ ಎಂದು ತಿಳಿಸಿದರು.