ಬೆಂಗಳೂರು: ರಾಜ್ಯ ಸರ್ಕಾರ ಸಾರಿಗೆ ನಿಗಮಗಳಿಗೆ 5,650.95 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಇದನ್ನು ನೀಡಿದ್ದರೆ ಬಸ್ ಟಿಕೆಟ್ ದರ ಏರಿಕೆ ಮಾಡುವ ಅಗತ್ಯವೇ ಇರಲಿಲ್ಲ.ಸುಮ್ಮನೆ ಜನರ ಮೇಲೆ ದರ ಏರಿಕೆಯ ಹೊರೆ ಹೇರಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ
ವ್ಯಕ್ತಪಡಿಸಿದರು.
ಸುದ್ದಿಷ್ಠಿಯಲ್ಲಿ ಮಾತನಾಡಿದ ಅವರು, ತುಘಲಕ್ ಸರ್ಕಾರಕ್ಕಿಂತ ಹೀನಾಯವಾದ ಕಾಂಗ್ರೆಸ್ ರಾಜ್ಯದ ಇತಿಹಾಸದಲ್ಲೇ ದಾಖಲೆ ಬರೆಯುವಂತೆ ಬಸ್ ಟಿಕೆಟ್ ದರ ಏರಿಸಿದೆ. ಈ ಮಟ್ಟಿಗೆ ದರ ಏರಿಕೆಯನ್ನೂ ಯಾವುದೇ ಸರ್ಕಾರ ಈವರೆಗೆ ಮಾಡಿಲ್ಲ ಎಂದು ಟೀಕಿಸಿದರು.
ಮೆಜೆಸ್ಟಿಕ್‌ನಿಂದ ಶಿವಾಜಿನಗರಕ್ಕೆ ಬಿಎಂಟಿಸಿಯಲ್ಲಿ 12 ರೂ. ಇದ್ದು, ಈಗ 18 ರೂ. ಆಗಿದೆ ಎಂದು ವಿವರಿಸಿ,ಹೀಗೆ ಕರಾಳವಾದ ದರಗಳನ್ನು ಹೇರಲಾಗಿದೆ. ಶಕ್ತಿ ಯೋಜನೆಯಡಿ ಉಚಿತ ಎಂದು ಹೇಳಿ ಈಗ ಹೊರೆ ಹಾಕಿದ್ದಾರೆ ಎಂದು ಗುಡುಗಿದರು.
ದರ ಏರಿಕೆ ಮಾಡಲು ಒಂದು ಕಾರಣ ಬೇಕು. ಆದರೆ ಇಲ್ಲಿ ಸಾಲ ಮಾಡಿರುವುದರಿಂದ ದರ ಏರಿಕೆ ಎನ್ನುತ್ತಿದ್ದಾರೆ. ಸಚಿವ ಬೈರತಿ ಸುರೇಶ್ ಸಾಲದಲ್ಲಿದ್ದೇವೆ ಎಂದಿದ್ದಾರೆ. ನಾನು ಸಾರಿಗೆ ಸಚಿವನಾಗಿದ್ದಾಗ ನಿಗಮಗಳು ಐದು ವರ್ಷ ಲಾಭದಲ್ಲಿತ್ತು. ಆಗ ಸ್ವಂತ ಹಣದಿಂದಲೇ 1,110 ಎಕರೆ ಜಮೀನು ಖರೀದಿಸಿ ಲ್ಯಾಂಡ್ ಬ್ಯಾಂಕ್ ಮಾಡಲಾಗಿತ್ತು. ಈಗ ಅದಕ್ಕೆ 10,000 ಕೋಟಿ ರೂ. ಮೌಲ್ಯವಿದೆ. ನಾನು ಟಿಟಿಎಂಸಿ ಮಾಡಿದ್ದೆ,ಬಾಡಿಗೆಯಿಂದಲೇ 40-50 ಕೋಟಿ ರೂ. ಬರುತ್ತಿತ್ತು ಎಂದು ತಿಳಿಸಿದರು.
ರಾಜ್ಯ ಸರ್ಕಾರದಿಂದ ಸಾರಿಗೆ ನಿಗಮಗಳಿಗೆ ಈಗ 5,650.95 ಕೋಟಿ ಬಾಕಿ ಬರಬೇಕಿದೆ. ಇಷ್ಟು ಹಣ ಕೊಟ್ಟಿದ್ದರೆ ದರ ಏರಿಕೆ ಮಾಡಬೇಕಿರಲಿಲ್ಲ. ಸರ್ಕಾರ ಮಾಡಿರುವ ತಪ್ಪಿಗೆ ಸಚಿವ ಸುರೇಶ್ ಜನರ ಮೇಲೆ ಹೊರೆ ಹೇರುತ್ತಿದ್ದಾರೆ. ನಮ್ಮಿಂದ ಹಣ ಕೊಡಲು ಸಾಧ್ಯವಿಲ್ಲ ಎಂದು ಆರ್ಥಿಕ ಇಲಾಖೆ ಹೇಳಿದ್ದರಿಂದಲೇ ಹೀಗೆ ಮಾಡಲಾಗಿದೆ. ದೇಶದಲ್ಲೇ ನಂಬರ್ 1 ಎಂಬ ಹೆಸರು ಸಾರಿಗೆ ನಿಗಮಗಳಿಗೆ ಇತ್ತು. ಅಂತಹ ಸಂಸ್ಥೆಯನ್ನು ಕಾಂಗ್ರೆಸ್ ಹಾಳು ಮಾಡಿ ಬೀದಿಗೆ ತಂದಿದೆ ಎಂದು ಅಶೋಕ್ ಗುಡುಗಿದರು.
2026ರ ಮೇ ತಿಂಗಳಲ್ಲಿ, ಸಾರಿಗೆ ನಿಗಮಗಳ ಒಟ್ಟು ಹೊಣೆಗಾರಿಕೆ 7,130.80 ಕೋಟಿ ಇತ್ತು. ಇದರಲ್ಲಿ ವೇತನ, ಪಿಎಫ್, ಗ್ಯಾಚ್ಯುಟಿ ಎಲ್ಲ ಸೇರಿದೆ. ಕೋವಿಡ್ ಸಮಯದಲ್ಲಿ ಎಲ್ಲ ಕಡೆ ನಷ್ಟ ಇದ್ದಿದ್ದರಿಂದ ಸಾರಿಗೆ ನಿಗಮಗಳಿಗೂ ನಷ್ಟವಾಗಿತ್ತು. ಅದನ್ನು ಹೊರತುಪಡಿಸಿ ಬಿಜೆಪಿ ಅವಧಿಯಲ್ಲಿ ಉಳಿದ ಸಮಯದಲ್ಲಿ ಸಂಪೂರ್ಣ ಲಾಭವಾಗಿದೆ ಎಂದು ಹೇಳಿದರು.
ಹಾಲಿನ ಪ್ರೋತ್ಸಾಹಧನವನ್ನು 7 ರೂ. ಗೆ ಏರಿಸುವುದಾಗಿ ಮಾತು ಕೊಟ್ಟ ಕಾಂಗ್ರೆಸ್ ನಂತರ ಅದನ್ನು ಮಾಡದೆ ಜನರ ಮೇಲೆ ಹೊರೆ ಹಾಕಿದೆ.
ಪ್ರತಿ ದಿನ ಬಳಸುವ ಆಹಾರದ ಮೇಲೆ ದರ ಏರಿಕೆ ಮಾಡುವುದನ್ನು ತಪ್ಪಿಸಬೇಕಿತ್ತು. ಈಗ ತಿಂಗಳಿಗೆ ಒಂದು ಕುಟುಂಬ 390 ರೂ. ಅಧಿಕ ಖರ್ಚು ಮಾಡಬೇಕಾಗುತ್ತದೆ. ಜನರಿಗಾಗಿ ಸರ್ಕಾರ ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ ಈ ಸರ್ಕಾರ ಕೊಟ್ಟ ಮಾತಿಗೆ ತಪ್ಪಿ ನಡೆದು ಅನ್ಯಾಯ ಮಾಡಿದೆ ಎಂದು ಟೀಕಿಸಿದರು.
ದರ ಏರಿಕೆ ಬಗ್ಗೆ ನಾನು ಅಧಿವೇಶನದಲ್ಲೇ ಹೋರಾಟ ಮಾಡಿದ್ದೆ. ಮುಂದೆಯೂ ಮಾಡುತ್ತೇನೆ. ಜನರು ಇದಕ್ಕೆ ಇನ್ನಷ್ಟು ಸ್ಪಂದಿಸಿದರೆ ನಿಜವಾದ ಹೋರಾಟವಾಗುತ್ತದೆ. ಇಲ್ಲವಾದರೆ ರಾಜಕೀಯ ಪ್ರತಿಭಟನೆ ಎಂದು ವಾದ ಮಾಡುತ್ತಾರೆ. ಆದ್ದರಿಂದ ಸಾರ್ವಜನಿಕರು ಈ ಹೋರಾಟದಲ್ಲಿ ಭಾಗವಹಿಸಬೇಕು ಎಂದು ಪ್ರತಿಪಕ್ಷ ನಾಯಕ ಕೋರಿದರು.
ಸಿಎಂ ಡಿ.ಕೆ.ಶಿವಕುಮಾರ್ ಬ್ರ್ಯಾಂಡ್ ಬೆಂಗಳೂರು, ಸುರಂಗ ರಸ್ತೆ, ಮೇಕೆದಾಟು, ಬರ ಪರಿಹಾರ ಎಂದು ಹೇಳಿದರೂ ಯಾವುದನ್ನೂ ಮಾಡಿಲ್ಲ. ಇವರು ಖಾಲಿ ಡಬ್ಬವನ್ನು ಇಟ್ಟುಕೊಂಡು ಶಬ್ದ ಮಾಡುವ ಭರವಸೆಗಳ ಸರದಾರ. ಗೃಹಲಕ್ಷ್ಮಿ ಹಣವನ್ನು ಬೇರೆ ಕಡೆ ಬಳಸಲು ಸಾಧ್ಯವಿಲ್ಲ. ಹಾಗೇನಾದರೂ ಮಾಡಿದ್ದರೆ ಅದು ಅಕ್ರಮ. ಇನ್ನು ಏನಾದರೂ ಭರವಸೆ ನೀಡಿದರೆ ಜನರು ನಂಬಬಾರದು. ಆರ್ಥಿಕ ಇಲಾಖೆಯಲ್ಲಿ ಎಷ್ಟು ಹಣವಿದೆ ಎಂದು ಮೊದಲು ಶ್ವೇತಪತ್ರ ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದರು.
ಈ ದರ ಏರಿಕೆಯ ವಿರುದ್ಧ ಬಿಜೆಪಿ ನವೆಂಬರ್ 5 ರಂದು ರಾಜ್ಯದಾದ್ಯಂತ ಹೋರಾಟ ಮಾಡಲಿದೆ. ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಬೆಂಗಳೂರಿನಲ್ಲಿ ತೀವ್ರವಾದ ಹೋರಾಟ ನಡೆಯಲಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.

