ನಾನು ಹಳ್ಳಿಯವನು ಎಂದು ಹೇಳಲು ಹೆಮ್ಮೆ ಇದೆ: ಹೆಚ್.ಡಿ.ಕೆ

ನವದೆಹಲಿ: ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಮ್ಮನ್ನು ‘ಹಳ್ಳಿ ಗುಗ್ಗು ಎಂದು ಕರೆದಿರುವುದು ಅವರ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರ ಸ್ವಾಮಿ ಟಾಂಗ್ ನೀಡಿದರು.

ನಮ್ಮ ತಂದೆಯವರು ಹಳ್ಳಿಯಿಂದಲೇ ಬಂದು ಪ್ರಧಾನಿ ಯಾದರು. ನಾನು ಹಳ್ಳಿಯಿಂದಲೇ ಬಂದು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿ ಆಗಿದ್ದೇನೆ ಈಗ‌ ಕೇಂದ್ರ ಸಚಿವನಾಗಿದ್ದೇನೆ ಎಂದು ಹೆಚ್.ಡಿ. ಕುಮಾರಸ್ವಾಮಿ ಹೇಳಿದರು

ನವದೆಹಲಿಯ ತಮ್ಮ ನಿವಾಸದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು; ನಾನು ಹಳ್ಳಿಯವನು ಎಂಬ ಬಗ್ಗೆ ನನಗೆ ಹೆಮ್ಮೆ ಇದೆ. ಅವರು ನನ್ನನ್ನು ಹಳ್ಳಿ ಗುಗ್ಗು ಎಂದು ಕರೆದಿದ್ದಾರೆ. ಅವರಿಗೆ ಸಂತೋಷ ಆಗುವುದಾದರೆ ಹಾಗೆಯೇ ಕರೆದುಕೊಳ್ಳಲಿ. ಅವರಿಗೆ ಜನರೇ ಉತ್ತರ ಕೊಡುತ್ತಾರೆ ಎಂದು ಹೇಳಿದರು.

ನಾನು ಯಾವುದೇ ರೀತಿಯ ಮೂಲಸೌಕರ್ಯವೂ ಇಲ್ಲದ ಕುಗ್ರಾಮದ ಶಾಲೆಯಲ್ಲಿ ವಿದ್ಯೆ ಕಲಿತವನು. ಯಾವುದೇ ಆಕ್ಸಫರ್ಡ್, ಬೋಸ್ಟನ್ ಅಥವಾ ಕೇಂಬ್ರಿಜ್ ನಂತಹ ವಿಶ್ವವಿದ್ಯಾಲಯಗಳಲ್ಲಿ ಓದಿ ಬಂದವನಲ್ಲ. ಸಾಮಾನ್ಯ ರೈತನ ಮಗ ಎಂಬ ಬಗ್ಗೆ ನನಗೆ ಅಪಾರ ಹೆಮ್ಮೆಯಿದೆ ಎಂದು ತಿರುಗೇಟು ನೀಡಿದರು.

‘ಭಾರತದ ಆತ್ಮ ಹಳ್ಳಿಗಳಲ್ಲಿದೆ ಎಂದು ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ಹೇಳಿದ್ದರು. ನಿಜ, ನಾನು ಹಳ್ಳಿಯವನು. ಅಲ್ಲೇ ಹುಟ್ಟಿ ಹಟ್ಟಿಯಲ್ಲಿ ಆಡಿ ಬೆಳೆದವನು. ಹಳ್ಳಿಯವನು ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಇದೆ. ಹಳ್ಳಿಗರೆಂದರೆ ಗುಗ್ಗುಗಳಲ್ಲ ಎಂದು ಪ್ರಿಯಾಂಕ್ ಖರ್ಗೆ ಅವರಿಗೆ ವಿನಮ್ರವಾಗಿ ಹೇಳಬಯಸುತ್ತೇನೆ ಎಂದು ಸಚಿವರು ಹೇಳಿದರು.

ಗೃಹ ಸಚಿವರಿಗೆ ಒಂದು ಮಾತು ಹೇಳಲು ಬಯಸುತ್ತೇನೆ. ನೀವು ಪ್ರತಿಯೊಂದಕ್ಕೂ ದಾಖಲೆ ಕೇಳುತ್ತೀರಿ. ಸಿದ್ದರಾಮಯ್ಯ ಅವರ ಸಂಪುಟದಲ್ಲಿ ನೀವು ಮೂರುವರ್ಷಗಳ ನಿರ್ವಹಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಎಂಜನಿಯರುಗಳನ್ನು ತರಾತುರಿಯಲ್ಲಿ ಆಯ್ಕೆ ಮಾಡಿದ್ದಿರಿ ಎಂಬುದು ನಿಮಗೆ ನೆನಪಿದೆಯಾ? ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನಾಡಿನ ಮುಂದೆ ಇಟ್ಟಿದ್ದು ಈ ಹಳ್ಳಿ ಗುಗ್ಗು ಎಂಬುದನ್ನು ಮರೆಯಬೇಡಿ ಚಾಟಿ ಬೀಸಿದರು.

ಸ್ಟಿಂಗ್ ಆಪರೇಷನ್ ನಡೆದಿರುವುದು 2023ರಲ್ಲಿ, ಆಗ ಇದ್ದಿದ್ದು ಕಾಂಗ್ರೆಸ್ ಸರಕಾರವೇ ಹೊರತು ಬೇರೆ ಪಕ್ಷದ ಸರಕಾರ ಅಲ್ಲ. ತಪ್ಪಿತಸ್ಥರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವ ಬದಲು ಈ ವಿಷಯವನ್ನು ಮುಚ್ಚಿಹಾಕುವ ಯತ್ನ ನಡೆದಿದೆ ಎಂದು ಹೆಚ್ ಡಿ ಕೆ ಆರೋಪಿಸಿದರು.

ತಮ್ಮ ತಂದೆ ಹೆಚ್.ಡಿ.ದೇವೇಗೌಡರು ಸಾಮಾನ್ಯ ಹಳ್ಳಿಯ ರೈತನ ಮಗನಾಗಿ ದೇಶದ ಪ್ರಧಾನಿಯಾಗಿದ್ದರು ಎಂದು ಅವರ ಕೊಡುಗೆಯನ್ನು ಸ್ಮರಿಸಿದರು.

ಸತತ 40 ವರ್ಷಗಳ ಕಾಲ ಅಂದರೆ, ಸತತ ಎಂಟು ಅವಧಿಗೆ ಗುರುಮಿಟ್ಕಲ್ ಕ್ಷೇತ್ರವನ್ನು ಪ್ರತಿನಿಧಿಸಿದ ಖರ್ಗೆ ಕುಟುಂಬ, ಆ ಭಾಗದ ದಲಿತರು ಮತ್ತು ರೈತರಿಗೆ ಮಾಡಿದ ಒಳ್ಳೆಯ ಕೆಲಸಗಳನ್ನು ಪಟ್ಟಿ ಮಾಡಿ ರಾಜ್ಯದ ಮುಂದೆ ಇಡಲಿ ಎಂದು ಸವಾಲು ಹಾಕಿದರು.

ರಾಷ್ಟ್ರ ಮಟ್ಟದಲ್ಲಿ ರಾಹುಲ್ ಗಾಂಧಿಯವರನ್ನು ಜನರು ‘ಇಡಿಯಟ್’ (ಮೂರ್ಖ) ಎಂದು ಕರೆಯುತ್ತಾರೆ. ಆ ಪದಕ್ಕೆ ಪ್ರಿಯಾಂಕ್ ಖರ್ಗೆ ಅವರು ‘ವಿಲೇಜ್’ (ಹಳ್ಳಿ) ಎಂಬ ಪದವನ್ನು ಸೇರಿಸಿ ನನ್ನನ್ನು ‘ವಿಲೇಜ್ ಇಡಿಯಟ್’ ಎಂದು ಕರೆದು ಅಪಮಾನಿಸಿದ್ದಾರೆ. ಹಳ್ಳಿಯ ರೈತರನ್ನು ಹಗುರವಾಗಿ ಪರಿಗಣಿಸಿರುವ ಈ ಕಾಂಗ್ರೆಸ್ ನಾಯಕರ ದುರಹಂಕಾರದ ಮಾತುಗಳಿಗೆ ಮುಂದಿನ ದಿನಗಳಲ್ಲಿ ನಾಡಿನ ಜನತೆಯೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೆಚ್ ಡಿ ಕೆ ಎಚ್ಚರಿಸಿದರು.

ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ರಾಜ್ಯ ಸರಕಾರವು ಜನಸಾಮಾನ್ಯರ ಮೇಲೆ ವಿಪರೀತ ಆರ್ಥಿಕ ಹೊರೆ ಹೇರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸರ್ಕಾರ ನಂದಿನಿ ಹಾಲಿನ ದರವನ್ನು ಹೆಚ್ಚಿಸಿದೆ. ಅಮೂಲ್ ಹಾಲಿನ ದರ ಲೀಟರಿಗೆ 70 ರೂ. ಇದ್ದರೆ, ನಂದಿನಿ ಹಾಲಿನ ದರ 72 ಆಗಿದೆ. ಹಾಲಿನ ಉಪ ಉತ್ಪನ್ನಗಳ ಬೆಲೆಯನ್ನೂ ಏರಿಕೆ ಮಾಡಲಾಗಿದೆ. ಸಾರಿಗೆ ನಿಗಮಗಳ ಬಸ್ ಪ್ರಯಾಣ ದರವನ್ನು ಶೇ.35ರಿಂದ 40ರಷ್ಟು ಏರಿಕೆ ಮಾಡಲಾಗಿದೆ, ಸಾರ್ವಜನಿಕರಿಗೆ ದೊಡ್ಡ ಹೊರೆಯಾಗಿದೆ. ಸಾರಿಗೆ ಸಿಬ್ಬಂದಿಗೆ ನೀಡಬೇಕಾದ 9,000 ಕೋಟಿ ಬಾಕಿ ಉಳಿಸಿಕೊಳ್ಳಲಾಗಿದೆ ಹಾಗೂ ರೈತರಿಗೆ ಪಶು ಆಹಾರವನ್ನು ಒದಗಿಸುವುದರಲ್ಲೂ ಸರಕಾರ ವಿಫಲವಾಗಿದೆ ಎಂದು ಹೆಚ್ ಡಿ ಕೆ ಆಕ್ರೋಶ‌ ವ್ಯಕ್ತಪಡಿಸಿದರು.

ರಾಷ್ಟ್ರದಲ್ಲಿ ಅನೇಕ ವಿಷಯಗಳಲ್ಲಿ ಚೋರಿ ಮಾಡಿರುವ ಕಾಂಗ್ರೆಸ್ ಪಕ್ಷ ಈಗ ವೋಟ್ ಚೋರಿ ಬಗ್ಗೆ ಹೋರಾಟ ಮಾಡುತ್ತಿರುವುದು ಹಾಸ್ಯಸ್ಪದ, ಕಾಂಗ್ರೆಸ್ ಪಕ್ಷವು ಕೇವಲ ‘ವೋಟ್ ಚೋರಿ’ ಅಷ್ಟೇ ಅಲ್ಲಾ ವೋಟ್ ಲೂಟಿ ಮಾಡಿದೆ ಎಂದು ಕಿಡಿಕಾರಿದರು.

ಮಾಜಿ ಮಂತ್ರಿಗಳಾದ ಬಂಡೆಪ್ಪ ಕಾಶೆಂಪುರ್, ವೆಂಕಟರಾವ್ ನಾಡಗೌಡ ಅವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.