ಮೈಸೂರು: ಸಾಮಾಜಿಕ ಜಾಲತಾಣಗಳು ಮತ್ತು ರೀಲ್ಸ್ ಗಳಲ್ಲಿ ಕಳೆದುಹೋಗುತ್ತಿರುವ ಯುವ ಸಮುದಾಯವನ್ನು ಸಂಗೀತದತ್ತ ಸೆಳೆಯಲು ಯುವ ಸಂಗಿತೋತ್ಸವ ವಿಶೇಷ ಕಾರ್ಯಕ್ರಮವನ್ನು ಆಕಾಶವಾಣಿ ಹಮ್ಮಿಕೊಂಡಿದೆ.
ಯುವ ಸಮುದಾಯಕ್ಕೆ ಸಂಗೀತದ ಅಭಿರುಚಿಯನ್ನು ಮೂಡಿಸುವ ನಿಟ್ಟಿನಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಕಾಶವಾಣಿಯಲ್ಲಿ ಆಯೋಜಿಸಲಾಗುತ್ತಿದೆ ಎಂದು ಮೈಸೂರು ಆಕಾಶವಾಣಿ ನಿಲಯದ ಮುಖ್ಯಸ್ಥ ಎನ್. ಕೇಶವಮೂರ್ತಿ ಅವರು ತಿಳಿಸಿದರು.
ಮೈಸೂರು ಆಕಾಶವಾಣಿಯಲ್ಲಿ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು,ಪ್ರಸಾರ ಭಾರತಿ ದೇಶದ ಆಯ್ದ ಆಕಾಶವಾಣಿ ಕೇಂದ್ರಗಳಲ್ಲಿ AIR Raising Stars ಯುವ ಸಂಗಿತೋತ್ಸವ ವನ್ನು ಆಯೋಜಿಸುತ್ತಿದೆ ಎಂದು ತಿಳಿಸಿದರು.
ಸಾಮಾಜಿಕ ಜಾಲತಾಣಗಳು ಮತ್ತು ರೀಲ್ಸ್ ಗಳಲ್ಲಿ ಕಳೆದುಹೋಗುತ್ತಿರುವ ಯುವ ಸಮುದಾಯಕ್ಕೆ ಭಾರತದ ಕಲಾ ಪರಂಪರೆಯನ್ನು ಪರಿಚಯಿಸುವುದರ ಜೊತೆಗೆ ಅದರ ಮಹತ್ವವನ್ನು ಅರ್ಥೈಸುವ ಕಾರ್ಯವನ್ನು ಈ ಮೂಲಕ ಮಾಡಲಾಗುತ್ತದೆ ಎಂದು ಅವರು ಹೇಳಿದರು.
ಭಾರತದ ಎಲ್ಲಾ ಆಕಾಶವಾಣಿ ಕೇಂದ್ರಗಳು ಶಾಸ್ತ್ರೀಯ ಸಂಗೀತವಲ್ಲದೆ ಸ್ಥಳೀಯ ಜನಪದ ಸಂಗೀತ, ಸುಗಮ ಸಂಗೀತ, ಭಕ್ತಿ ಸಂಗೀತಗಳಿಗೂ ಸಮಾನ ಆದ್ಯತೆಯನ್ನು ನೀಡುತ್ತಾ ಬರುತ್ತಿದೆ. ಧ್ಯಾನ ಕೇಂದ್ರಿತ ಇಂತಹ ಸಂಗೀತ ಕಾರ್ಯಕ್ರಮಗಳು ಪ್ರಮುಖವಾಗಿ ಯುವಜನತೆಯನ್ನು ಮುಟ್ಟಬೇಕು ಎಂಬುದು ಈ ಕಾರ್ಯಕ್ರಮದ ಆಶಯವಾಗಿದೆ ಎಂದು ತಿಳಿಸಿದರು.
ಈ ನಿಟ್ಟಿನಲ್ಲಿ ಮೈಸೂರು ಆಕಾಶವಾಣಿ ಇದೇ 27 ರ ಶುಕ್ರವಾರ ಸಂಜೆ 6 ಗಂಟೆಗೆ
ಮೈಸೂರು ವಿಶ್ವವಿದ್ಯಾನಿಲಯದ ವಿಜ್ಞಾನ ಭವನದಲ್ಲಿ ಸಂಗೀತ ಸಂಜೆ ಕಾರ್ಯಕ್ರಮವನ್ನು ಏರ್ಪಡಿಸಿದೆ ಎಂದು ವಿವರಿಸಿದರು.
27ರ ಸಂಜೆ ಮೊದಲು ಆರ್. ಹರಿಣಿ ಮತ್ತು ತಂಡದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನವಿರುತ್ತದೆ. ಆನಂತರ ಸಿ. ಸಿಂಚನ ಅವರ ಸುಗಮ ಸಂಗೀತ ಕಾರ್ಯಕ್ರಮ ಪ್ರಸ್ತುತಪಡಿಸಲಿದ್ದಾರೆ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿರುತ್ತದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಮೈಸೂರು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ. ಎನ್. ಕೆ. ಲೋಕನಾಥ್, ಆಕಾಶವಾಣಿ ಕ್ಲಸ್ಟರ್ ಉಪಮಹಾನಿರ್ದೇಶಕ ಕೆ. ಪಿ. ಸಂಜೀವ್ ಉಪಸ್ಥಿತರಿರುವರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೈಸೂರು ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥ ಎನ್. ಕೇಶವಮೂರ್ತಿ ವಹಿಸಲಿದ್ದಾರೆ.
ಹೆಚ್ಚಿನ ಸಂಖ್ಯೆಯಲ್ಲಿ ಯುವಜನತೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಗೀತೋತ್ಸವವನ್ನು ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಶವಮೂರ್ತಿಯವರು ಆಕಾಶವಾಣಿಯು ಮಾಹಿತಿ, ಶ್ರವಣ, ಮನರಂಜನೆಗೆ ಆದ್ಯತೆ ನೀಡಲಿದೆ,ಇದರಲ್ಲಿ ಮೈಸೂರು ಆಕಾಶವಾಣಿ ನಂಬರ್ ಒನ್ ಸ್ಥಾನದಲ್ಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮೈಸೂರು ಆಕಾಶವಾಣಿಯ ಶಾಂತಕುಮಾರ್, ದಿಗ್ವಿಜಯ್, ಡಾ. ಉಮೇಶ್, ರೀಟಾ ಪಿಂಟೋ, ಭಾರತಿ ಮತ್ತಿತರರು ಉಪಸ್ಥಿತರಿದ್ದರು.

